ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ವಿವಾದಗಳಿಂದಾಗಿ ಸಂಘಪರಿವಾರ ಹಾಗೂ ಸ್ವಪಕ್ಷಿಯರಿಂದಲೇ ಆಕ್ಷೇಪ, ಆಕ್ರೋಶಕ್ಕೆ ಗುರಿಯಾಗುತ್ತಿರುವ ರಾಜ್ಯ ಬಿಜೆಪಿ ಸರ್ಕಾರ ಇದೀಗ ಜಿಂದಾಲ್ ವಿವಾದಿಂದಾಗಿ ಮತ್ತೆ ಪೇಚಿಗೆ ಸಿಲುಕಿದೆ. ಸ್ವ ಪಕ್ಷೀಯರ ವಿರೋಧವಿದ್ದರೂ ಪಕ್ಷದ ನಿಲುವು ಹಾಗೂ ಸಿದ್ಧಾಂತಗಳನ್ನು ಮೀರಿ, ಜಿಂದಾಲ್ ಸಂಸ್ಥೆಗೆ ಜಮೀನು ಒದಗಿಸುವ ಬಿಎಸ್‌ವೈ ನಿರ್ಧಾರವು ಇದೀಗ ಕೋರ್ಟ್ ಮೆಟ್ಟಿಲೇರಿದೆ.
ಈ ಕಾನೂನು ಸಮರ ಪ್ರತಿಪಕ್ಷಗಳಿಂದ ನಡೆಯುತ್ತಿರುವುದಲ್ಲ. ಆರೆಸ್ಸೆಸ್ ಹಿರಿಯ ನಾಯಕರೇ ಹಾಕಿರುವ ಕೋರ್ಟ್ ಕೇಸ್. ಒಂದೆಡೆ ಬಿಜೆಪಿಯ ಹಲವಾರು ಶಾಸಕರು ಬಿಎಸ್‌ವೈ ಹಾಗೂ ಶೆಟ್ಟರ್ ನಡೆಯ ವಿರುದ್ದ ಹೈಕಮಾಂಡ್ ಮಟ್ಟದಲ್ಲಿ ಸಮರ ಕೈಗೊಂಡರೆ, ಸಂಘದ ಹಿರಿಯ ಧುರೀಣ ಈ ಸಮರವನ್ನು ಹೈಕೋರ್ಟ್, ಸುಪ್ರೀಂ ಕೋರ್ಟ್, ಗ್ರೀನ್ ಟ್ರಿಬ್ಯೂನಲ್‌ನತ್ತ ಕೊಂಡೊಯ್ದು, ಇಡೀ ವಿವಾದಕ್ಕೆ ರೋಚಕತೆ ತುಂಬಿದ್ದಾರೆ. ರಾಷ್ಟ್ರ ರಾಜಕಾರಣದ ಇತಿಹಾಸದಲ್ಲೇ ಅಪೂರ್ವ ಎಂಬಂತೆ ಸ್ವಪಕ್ಷೀಯರೊಬ್ಬರು ತಮ್ಮ ಸರ್ಕಾರದ ಸಿಎಂ, ಡಿಸಿಎಂ ಸಹಿತ 32 ಸಚಿವರಿಗೆ ಕೋರ್ಟ್ ನೊಟೀಸ್ ನೀಡಿ ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾಗಿದ್ದಾರೆ.
ಏನಿದು ಕಾನೂನು ಸಮರ..?
ನೂತನ ಜಿಲ್ಲೆ ವಿಜಯನಗರಕ್ಕೆ ಹೊಂದಿಕೊಂಡಿರುವ ಸಂಡೂರು ತಾಲೂಕಿನಲ್ಲಿ ಸುಮಾರು 3,667 ಎಕ್ರೆ ಜಮೀನನ್ನು ಜಿಂದಾಲ್ ಕಂಪೆನಿಗೆ ವಿಕ್ರಯಿಸಲು ರಾಜ್ಯ ಸರ್ಕಾರ ತರಾತುರಿಯ ತೀರ್ಮಾನ ಕೈಗೊಂಡಿದೆ.
ಅಪಾರ ಮೌಲ್ಯದ ಜಮೀನನ್ನು ಎಕರೆಗೆ 1,21,195 ರೂಪಾಯಿ ದರದಲ್ಲಿ ಜಿಂದಾಲ್ ಸಂಸ್ಥೆಗೆ ನೀಡಲು ಕಳೆದ ತಿಂಗಳು (27.4.2021) ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಪ್ರಸ್ತುತ ಕೊರೋನಾ ಸಂದರ್ಭದಲ್ಲಿ ಜನರ ಪ್ರಾಣ ಕಾಪಾಡುವ ಸಂಬಂಧ ಹತ್ತಾರು ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇರುವಾಗ, ಅದನ್ನು ಬಿಟ್ಟು ಜಿಂದಾಲ್ ಕಂಪನಿ ಅನುಕೂಲಕ್ಕಾಗಿ ಕ್ರಮ ಕೈಗೊಂಡಿರುವುದು ಅನೇಕಾನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಇದು ಬಹುಕೋಟಿ ಹಗರಣದಂತೆ ಭಾಸವಾಗಿದ್ದೇ ತಡ ಸಾಮಾಜಿಕ ಕಾರ್ಯಕರ್ತ ಕೆ.ಎ.ಪಾಲ್ ಎಂಬವರು ಹೈಕೋರ್ಟ್ ಮೊರೆಹೋಗಿದ್ದಾರೆ.
ಈ ವಿವಾದವನ್ನೇ ಮುಂದಿಟ್ಟು ಆರೆಸ್ಸೆಸ್ ಪರ ಹಿರಿಯ ವಕೀಲರಾಗಿರುವ ಎಸ್.ದೊರೆರಾಜು ಅವರು ರಾಜ್ಯ ಸರ್ಕಾರವನ್ನು ಮುನ್ನಡೆಸುತ್ತಿರುವ ಸಿಎಂ ಯಡಿಯೂರಪ್ಪ ಹಾಗೂ ಅವರ ಸಂಪುಟದ 32 ಸಚಿವರು ಮತ್ತು ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳಿಗೆ ಲೀಗಲ್ ನೋಟೀಸ್ ಪ್ರತಿಗಳನ್ನು ತಲುಪಿಸಿದ್ದಾರೆ.
ಮಾರುಕಟ್ಟೆ ಮೌಲ್ಯವನ್ನೂ ಪರಿಗಣಿಸದೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸ್ಪಷ್ಟ ಅಭಿಪ್ರಾಯವನ್ನೂ ಲೆಕ್ಕಿಸದೆ ತಮ್ಮ ನೇತೃತ್ವದ ಸಂಪುಟದಲ್ಲಿ ತರಾತುರಿಯ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಇದು ಕಾನೂನು ಬಾಹಿರ ನಡೆಯಾಗಿದ್ದು ಈ ಸಂಬಂಧ ಹೈಕೋರ್ಟ್, ಸುಪ್ರೀಂ ಕೋರ್ಟ್, ಗ್ರೀನ್ ಬೆಂಚ್ ಟ್ರಿಬ್ಯೂನಲ್‌ಗೆ ದೂರು ಸಲ್ಲಿಕೆಯಾಗಿದೆ. ಅದರ ಜೊತೆಯಲ್ಲೇ ತಮಗೂ ನೊಟೀಸ್ ಕಳುಹಿಸುತ್ತಿರುವುದಾಗಿ ವಕೀಲ ದೊರೆರಾಜು ಈ ನೊಟೀಸ್‌ನಲ್ಲಿ ಮುಖ್ಯಮಂತ್ರಿಯ ಗಮನಸೆಳೆದಿದ್ದಾರೆ.
ಯಾವುದೇ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯನ್ನು ಮೀರಿ ಜಡ್ಜ್‌ಮೆಂಟ್ ರೀತಿಯಲ್ಲಿ ಕ್ಯಾಬಿನೆಟ್‌ನಲ್ಲಿ ನಿಯಮ ಬಾಹಿರವಾಗಿ ತೀರ್ಮಾನ ಕೈಗೊಂಡಿದ್ದೀರಿ. ಈ ವಿಚಾರದಲ್ಲಿ ಹಣಕಾಸು, ಕಂದಾಯ, ಕಾನೂನು ಹಾಗೂ ಕೈಗಾರಿಕಾ ಇಲಾಖೆಗಳೂ ಸೂಕ್ತ ಕ್ರಮವಹಿಸಿಲ್ಲ. ನಿವೃತ್ತ ಐಎಎಸ್, ಐಎಫ್‌ಎಸ್, ಐಪಿಎಸ್ ಅಧಿಕಾರಿಗಳನ್ನೂ ಫೈಡ್ ಸರ್ವೆಂಟ್ ರೀತಿ ಬಳಸಿಕೊಂಡು ಜಿಂದಾಲ್ ಕಂಪನಿ ತನ್ನ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದು, ಆ ಕಂಪೆನಿಗಾಗಿ ತಮ್ಮ ಸಂಪುಟವೂ ತಪ್ಪು ನಿರ್ಧಾರ ಕೈಗೊಂಡು ಸಹಕರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಯು-ಟರ್ನ್ ಆಗಿದ್ದೀರಿ..!?
ತಾವು ಪ್ರತಿಪಕ್ಷ ಸ್ಥಾನದಲ್ಲಿದ್ದಾಗ, ಬಿಜೆಪಿ ನಾಯಕರಾಗಿದ್ದಾಗ ತೆಲಗಿ ಕೇಸ್ ಸಹಿತ ಬಹುತೇಕ ಪ್ರಕರಣಗಳಲ್ಲಿ ತಮ್ಮೊಂದಿಗೆ ಕೆಲಸ ಮಾಡಿದ್ದೆ. ತಾವು ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸುತ್ತಲೇ ಬಂದಿದ್ದೀರಿ. ಇದೇ ಜಿಂದಾಲ್ ಸಂಸ್ಥೆಗೆ ಜಮೀನು ನೀಡುವ ಸಂಬಂಧ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರವು ಸಂಪುಟ ಉಪಸಮಿತಿಯನ್ನು ರಚಿಸಿದಾಗಳಲೂ ತಾವು ವಿರೋಧ ವ್ಯಕ್ತಪಡಿಸಿದ್ದೀರಿ. ಆದರೆ ಈಗ ತಾವು ತಮ್ಮ ನಿಲುವಿನಿಂದ U turn ಆಗಿದ್ದೀರಿ. ಭ್ರಷ್ಟಾಚಾರ ವಿರುದ್ಧದ ಬಿಜೆಪಿಯ ನಿಲುವಿಗೂ ನೀವು ವಿರೋಧವಾಗಿದ್ದೀರಿ. ಹಾಗಾಗಿ ನ್ಯಾಯಾಲಯಗಳಿಗೆ ಹಾಗೂ ಪ್ರಧಾನಿ, ಗೃಹಸಚಿವರು ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೂ ದೂರು ಸಲ್ಲಿಸಲಾಗಿದೆ ಎಂದು ವಕೀಲರು ಈ ಲೀಗಲ್ ನೊಟೀಸ್‌ನಲ್ಲಿ ಉಲ್ಲೇಖಿಸಿದ್ದಾರೆ.
ನಿಯಮಬಾಹಿರ ಗಣಿ ಚಟುವಟಿಕೆಗಳನ್ನು ನಡೆಸಿರುವ ಆರೋಪ ಎದುರಿಸುತ್ತಿರುವ ಜಿಂದಾಲ್ ಕಂಪನಿಯು ಸರ್ಕಾರಕ್ಕೆ 259,64,14,000 ರೂಪಾಯಿ ರಾಯಲ್ಟಿ ವಂಚಿಸಿದೆ. ಅದನ್ನೂ ಪರಿಗಣಿಸುವ ಮೊದಲು ಅದೇ ಕಂಪನಿಗೆ 3,667 ಎಕ್ರೆ ಜಮೀನು ನಿರ್ಧಾರ ಕೈಗೊಂಡಿರುವುದು ನಿಯಮ ಬಾಹಿರ ಎಂದು ವಕೀಲ ದೊರೆರಾಜು ದೂರಿದ್ದಾರೆ.
ಒರಿಸ್ಸಾದ ಪ್ಯಾರಾಡೀಪ್‌ನಲ್ಲಿ ಇದೇ ಜಿಂದಾಲ್‌ನ ಬೃಹತ್ ಸ್ಟೀಲ್ ಉದ್ದಿಮ ಸ್ಥಾಪನೆಗೆಂದು ಸರ್ಕಾರ 2,700 ಎಕರೆ ಪ್ರದೇಶವನ್ನು ನೀಡಲು ಉದ್ದೇಶಿಸಿದ ಪ್ರಕರಣದಲ್ಲಿ ವಿಚಾರಣೆ ನಡೆಸಿದ್ದ ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್‌ನಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯವೂ ಇಲ್ಲಿನ ಪ್ರಕರಣಕ್ಕೂ ಅನ್ವಯವಾಗುವಂತಿದೆ ಎಂದು ಲೀಗಲ್ ನೋಟೀಸ್‌ನಲ್ಲಿ ವಕೀಲರು ಬೆಳಕುಚೆಲ್ಲಿದ್ದಾರೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಇದೇ ಜಮೀನು ಮಂಜೂರಾತಿ ಪ್ರಸ್ತಾಪ ವಿರೋಧಿಸಿ ತಮ್ಮ ಪಕ್ಷದ ಶಾಸಕರು ವಿಧಾನಮಂಡಲದ ಉಭಯ ಸದನಗಳಲ್ಲಿ ಧರಣಿ ನಢಸಿದ್ದೀರಿ. ಬಿಜೆಪಿಯ ವತಿಯಿಂದ ಹಲವೆಡೆ ಪ್ರತಿಭಟನೆಗಳನ್ನೂ ನಡೆಸಿದ್ದೀರಿ. ಆದರೆ ಇದೀಗ ತಮ್ಮ ಪಕ್ಷದ ನಿಲುವು ಹಾಗೂ ಸಿದ್ದಾಂತಗಳನ್ನು ಮೀರಿ ತಾವು ಸಂಪುಟದಲ್ಲಿ ಅಕ್ರಮ ತೀರ್ಮಾನ ಕೈಗೊಂಡಿದ್ದೀರಿ ಎಂದು ನೊಟೀಸ್‌ನಲ್ಲಿ ಬೊಟ್ಟುಮಾಡಿದ್ದಾರೆ.
ಸಚಿವರು-ಶಾಸಕರಿಂದಲೇ ವಿರೋಧ:
ಜಿಂದಾಲ್‌ಗೆ ಜಮೀನು ನೀಡುವ ಈ ಪ್ರಸ್ತಾಪವನ್ನು ಹೆಚ್.ಕೆ.ಪಾಟೀಲ್, ಹೆಚ್.ವಿಶ್ವನಾಥ್ ಅವರು ಆಕ್ಷೇಪಿಸಿದ್ದರು. ಅಷ್ಟೇ ಆಲ್ಲ, ತಮ್ಮ ಸರ್ಕಾರದ ಸಚಿವರು, ಆಡಳಿತ ಪಕ್ಷದ ಶಾಸಕರಾದ ಮಾಧುಸ್ವಾಮಿ, ಅರವಿಂದ ಲಿಂಬಾವಳಿ, ಅರವಿಂದ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್, ಸತೀಶ್ ರೆಡ್ಡಿ, ಸುನಿಲ್ ಕುಮಾರ್, ಪೂರ್ಣಿಮಾ, ಉದಯ ಗರುಡಾಚಾರ್, ಅಭಯ ಪಟೀಲ್ ಮೊದಲಾದವರೂ ತಮ್ಮ ಕ್ರಮದ ವಿರುದ್ದ ಪಕ್ಷದ ಹೈಕಮಾಂಡ್‌ಗೆ ದೂರು ನೀಡಿದ್ದಾರೆ. ಸಚಿವ ಆನಂದ್ ಸಿಂಗ್ ಅವರು ಕೂಡಾ ಜಿಂದಾಲ್‌ಗೆ ಜಮೀನು ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅನೇಕ ರಾಜಕೀಯ ಮುಖಂಡರು, ಸಾಮಾಜಿಕ ಚಿಂತಕರ ಆಕ್ಷೇಪದ ನಡುವೆಯೂ ತಾವು ನಿಯಮ ಬಾಹಿರ ಕ್ರಮಕ್ಕೆ ಮುಂದಾಗಿದ್ದೀರಿ ಎಂದು ದೊರೆರಾಜು ಆರೋಪಿಸಿದ್ದಾರೆ.
ಸರ್ಕಾರದ ಸಂಸ್ಥೆಗೆ ಈ ಜಮೀನು ಮಂಜೂರಾತಿಗೆ ನಿರಾಕರಿಸಿದ್ದ ಸರ್ಕಾರ..?
ಸಂಬಂಧಿತ ಜಮೀನಲ್ಲಿ ಪ್ರತೀವರ್ಷ 50-60 ಕೋಟಿ ರೂಪಾಯಿ ಮೌಲ್ಯದ ಬೆಳೆ ತೆಗೆಯಬಹುದು. ಇಂತಹಾ ಜಮೀನನ್ನು ಎಕರೆಗೆ 1,22,195 ರೂ.ದರದಲ್ಲಿ ನೀಡುವುದು ಸರಿಯಲ್ಲ ಎಂದು ಪ್ರತಿಪಾದಿಸಿದ್ದಾರೆ. ಈ ಹಿಂದೆ, ಅಲ್ಲಿಯೇ ಸರ್ಕಾರಿ ಉದ್ದೇಶಿತ KPCLಗೆ 994 ಎಕರೆ ಜಮೀನು ನೀಡಲು ಸಂಪುಟ ಉಪಸಮಿತಿ ನಿರಾಕರಿಸಿತ್ತು. ಇದೀಗ ಅದೇ ಜಮೀನನ್ನು ಖಾಸಗಿ ಸಂಸ್ಥೆಯಾಗಿರುವ ಜಿಂದಾಲ್‌ಗೆ ನೀಡಲು ಮಂದಾಗಿರುವ ಔಚಿತ್ಯವನ್ನು ವಕೀಲ ದೊರೆರಾಜು ಅವರು ಲೀಗಲ್ ನೊಟೀಸ್‌ನಲ್ಲಿ ಪ್ರಶ್ನಿಸಿದ್ದಾರೆ.
ಗ್ಲೋಬಲ್ ಟೆಂಡರ್ ಮೂಲಕ ಗಣಿಗಾರಿಕೆಗೆ ಅವಕಾಶ ನೀಡಿದಲ್ಲಿ ಸರ್ಕಾರಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಎಂಬ ಸಂಗತಿಯನ್ನು ಉಲ್ಲೇಖ ಮಾಡಿದ್ದಾರೆ.