ಚಿಕ್ಕಮಗಳೂರು: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ನೀರಾವರಿ ಯೋಜನೆಗಳ ನಿರ್ವಹಣೆಯಲ್ಲಿ ಲೋಪ ಕಂಡುಬಂದಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ತಕ್ಷಣ ದುರಸ್ತಿ ಕಾರ್ಯ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸುವಂತೆ ಸೂಚಿಸಿದರು.
ಬೈರಾಪುರ ಪಿಕಪ್‌ನಿಂದ ಲಕ್ಯಾ ಮಾದರಸನ ಕೆರೆಗೆ ನೀರು ತುಂಬಿಸುವ ಯೋಜನೆಯ ಪಂಪ್‌ಹೌಸ್ ಹಾಗೂ ಕರಗಡ ಏತ ನೀರಾವರಿ ಯೋಜನೆ ವ್ಯಾಪ್ತಿಗೆ ಭೇಟಿ ನೀಡಿದ ಅವರು ಕಾಮಗಾರಿಗಳ ಸ್ಥಿತಿಗತಿಯನ್ನು ಪರಿಶೀಲಿಸಿದರು.
ಟ್ರಾನ್ಸ್‌ಫಾರ್ಮರ್, ಮೋಟಾರ್ ದುರಸ್ತಿಗೆ ಸೂಚನೆ
ಸ್ಥಳ ಪರಿಶೀಲನೆ ವೇಳೆ ಟ್ರಾನ್ಸ್‌ಫಾರ್ಮರ್‌ಗಳ ನಿರ್ವಹಣೆ ಸಮರ್ಪಕವಾಗಿಲ್ಲದಿರುವುದು, ಮೋಟಾರ್‌ಗಳು ಕಾರ್ಯನಿರ್ವಹಿಸದಿರುವುದು ಹಾಗೂ ಕಾಲುವೆಗಳಲ್ಲಿ ಗಿಡಗಂಟೆ ಮತ್ತು ಹೂಳು ತುಂಬಿರುವುದು ಗಮನಕ್ಕೆ ಬಂದಿತು. ಇದರಿಂದ ಕೆರೆಗಳಿಗೆ ನೀರು ಸಮರ್ಪಕವಾಗಿ ಹರಿಸಲು ಅಡಚಣೆಯಾಗುತ್ತಿದೆ ಎಂದು ರವಿ ಅಸಮಾಧಾನ ವ್ಯಕ್ತಪಡಿಸಿದರು.

ಸಂಬಂಧಪಟ್ಟ ಎಕ್ಸಿಕ್ಯೂಟಿವ್ ಇಂಜಿನಿಯರ್ ಹಾಗೂ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ವಿದ್ಯುತ್ ಸರಬರಾಜು ವ್ಯವಸ್ಥೆ ಸರಿಪಡಿಸಿ, ಸ್ಥಗಿತಗೊಂಡ ಮೋಟಾರ್‌ಗಳನ್ನು ತಕ್ಷಣ ಚಾಲನೆಗೊಳಿಸುವಂತೆ ಸೂಚಿಸಿದರು. ಕಾಲುವೆಗಳಲ್ಲಿ ತುಂಬಿರುವ ಹೂಳು ಮತ್ತು ಗಿಡಗಂಟೆಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ವಿಶೇಷವಾಗಿ ಕಳಸಾಪುರ ಊರಮುಂದಿನ ಕೆರೆ, ತಿಮ್ಮಪ್ಪನ ಕೆರೆ ಹಾಗೂ ಈಶ್ವರಹಳ್ಳಿ ಕೆರೆಗಳಿಗೆ ಯಾವುದೇ ಅಡಚಣೆಯಿಲ್ಲದೆ ನೀರು ತಲುಪುವಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
₹37.50 ಕೋಟಿ ವೆಚ್ಚ
ಬೈರಾಪುರ ಪಿಕಪ್‌ನಿಂದ ಲಕ್ಯಾ ಮಾದರಸನ ಕೆರೆಗೆ ಏತ ನೀರಾವರಿ ಮೂಲಕ ನೀರು ತುಂಬಿಸುವ ಯೋಜನೆಗೆ ಸುಮಾರು ₹28 ಕೋಟಿ, ಕರಗಡ ಏತ ನೀರಾವರಿ ಯೋಜನೆಗೆ ₹9.50 ಕೋಟಿ ವೆಚ್ಚ ಮಾಡಲಾಗಿದೆ. ಒಟ್ಟಾರೆ ₹37.50 ಕೋಟಿ ವೆಚ್ಚದ ಈ ಯೋಜನೆಗಳ ಉದ್ದೇಶ ರೈತರು ಹಾಗೂ ಸಾರ್ವಜನಿಕರಿಗೆ ನೀರಿನ ಸೌಲಭ್ಯ ಕಲ್ಪಿಸುವುದಾಗಿದೆ.
“ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಯೋಜನೆಗಳು ರೈತರಿಗೆ ಅಗತ್ಯವಿರುವ ಸಂದರ್ಭದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸ್ಥಗಿತಗೊಳ್ಳುವುದು ಅಕ್ಷಮ್ಯ. ಯೋಜನೆ ನಿರ್ಮಿಸುವುದಷ್ಟೇ ಅಲ್ಲ, ಅದರ ನಿರಂತರ ನಿರ್ವಹಣೆ ಹಾಗೂ ಪ್ರಯೋಜನ ಜನರಿಗೆ ತಲುಪುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ” ಎಂದು ಸಿ.ಟಿ.ರವಿ ಹೇಳಿದರು.
ಬರಗಾಲದ ಹಿನ್ನೆಲೆಯಲ್ಲಿ ನೀರಿನ ಲಭ್ಯತೆ ಪ್ರಮುಖವಾಗಿರುವುದರಿಂದ ನಿರ್ವಹಣಾ ಲೋಪದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ತುರ್ತು ಕ್ರಮ ಕೈಗೊಂಡು ನೀರು ಪೂರೈಕೆ ಪುನಃಸ್ಥಾಪಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.






































































