ರಾಜ್ಯಗಳಿಗೆ 6.69 ಲಕ್ಷ ರೆಮ್ಡೆಸಿವಿರ್ ಪೂರೈಕೆ: ಕೇಂದ್ರ ಸಚಿವ ಸದಾನಂದ ಗೌಡ
ದೆಹಲಿ: ರಾಜ್ಯಗಳಿಗೆ ಕಳೆದ ಐದು ದಿನಗಳಲ್ಲಿ 6.69 ಬಾಟಲಿ ರೆಮ್ಡೆಸಿವಿರ್ ಚುಚ್ಚುಮದ್ದನ್ನು ಪೂರೈಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.
ಔಷಧ ಇಲಾಖೆಯನ್ನೂ (Pharmaceutical Dept) ನಿರ್ಹಹಿಸುವ ಸದಾನಂದ ಗೌಡರು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್ಸುಖ್ ಮಾಂಡವಿಯಾ, ಔಷಧ ಇಲಾಖೆ ಕಾರ‍್ಯದರ್ಶಿ ಎಸ್ ಅಪರ್ಣಾ, ಎನ್ಪಿಪಿಏ (National Pharmaceutical Pricing Authority) ಅಧ್ಯಕ್ಷೆ ಶುಭ್ರಾ ಸಿಂಗ್, ಡಿಸಿಜಿಐ (Drug Controller General of India) ಡಾ ವಿ ಜಿ ಸೋಮಾನಿ, ಆಪ್ತ ಕಾರ್ಯದರ್ಶಿ ಸುಬೋಧ ಕುಮಾರ್ ಮತ್ತಿತರ ಹಿರಿಯ ಅಧಿಕಾರಿಗಳ ಜೊತೆ ಕೊರೊನಾ ಸಂಬಂಧಿತ ಔಷಧಗಳ ಉತ್ಪಾದನೆ ಮತ್ತು ವಿತರಣೆ ಬಗ್ಗೆ ಸಭೆ ನಡೆಸಿದರು.
ನಂತರ ಮಾಧ್ಯಮ ಹೇಳಿಕೆ ನೀಡಿದ ಸಚಿವರು ರೆಮ್ಡೆಸಿವರ್ ಉತ್ಪಾದನೆ ಈ ತಿಂಗಳು 28.63 ಲಕ್ಷ ಬಾಟಲಿಯಿಂದ 41 ಲಕ್ಷ ಬಾಟಲಿಗೆ ಏರಿಕೆಯಾಗಲಿದೆ ಎಂದರು. ಕೊರೊನಾ ಚಿಕಿತ್ಸೆಯಲ್ಲಿ ಬಳಸುವ ಔಷಧಗಳು ವಿಶೇಷವಾಗಿ ರೆಮ್ಡೆಸಿವಿರ್ ಚುಚ್ಚುಮದ್ದನ್ನು ಹೆಚ್ಚು ಉತ್ಪಾದಿಸುವ ಬಗ್ಗೆ ಈಗಾಗಲೇ ಹಲವು ಕ್ರಮ ಕೈಗೊಳ್ಳಲಾಗಿದೆ. ಭಾರತದಲ್ಲಿ ಏಳು ಔಷಧ ಕಂಪನಿಗಳು ರೆಮ್ಡೆಸಿವಿರ್ ಉತ್ಪಾದನಾ ಲೈಸನ್ಸ್ ಹೊಂದಿವೆ. ಈ ಮುಂಚೆ ತಿಂಗಳೊಂದಕ್ಕೆ ರೆಮ್ಡೆಸಿವಿರ್ ಉತ್ಪಾದನಾ ಸಾಮರ್ಥ್ಯ 38.8 ಲಕ್ಷ ಬಾಟಲಿಯಿತ್ತು. ಈಗ ಉತ್ಪಾದನಾ ಸಾಮರ್ಥ್ಯಕ್ಕೆ ಇನ್ನೂ 10 ಲಕ್ಷ ಬಾಟಲಿ ಸೇರಿಸಲಾಗಿದೆ. ಈಗಾಗಲೇ ರೆಮ್ಡೆಸಿವಿರ್ ರಫ್ತು ನಿಷೇಧಿಸಲಾಗಿದೆ. ಹೀಗಾಗಿ ಈ ಚುಚ್ಚುಮದ್ದಿನ ಪೂರೈಕೆಯಲ್ಲಿ ಇನ್ನಷ್ಟು ಸುಧಾರಣೆ ಕಂಡುಬರಲಿದೆ ಎಂದು ಅವರು ವಿವರಿಸಿದರು.
ಸರ್ಕಾರದ ಮಧ‍್ಯಪ್ರವೇಶದಿಂದ ರೂ. 5400ಕ್ಕೆ ಮಾರಾಟವಾಗುತ್ತಿದ್ದ ರೆಮ್ಡೆಸಿವಿರ್ ಚುಚ್ಚುಮದ್ದು ಈಗ ರೂ 3500 ಲಭ್ಯವಾಗಉತ್ತಿದೆ. ಆಸ್ಪತ್ರೆ/ಸಾಂಸ್ಥಿಕ ಮಟ್ಟದ ಬೇಡಿಕೆಯ ಪೂರೈಕೆಯನ್ನು ಈಡೇರಿಸಲು ಆದ್ಯತೆ ನೀಡುವಂತೆ ಉತ್ಪಾದಕರಿಗೆ ಸೂಚಿಸಲಾಗಿದೆ. ಹಾಗೆಯೇ ರೆಮ್ಡೆಸಿವರ್ ಅಕ್ರಮ ದಾಸ್ತಾನು, ಅಧಿಕ ಬೆಲೆಗೆ ಮಾರಾಟ ಮಾಡುವಂತಹ ಪ್ರಕರಣಗಳು ಕಂಡುಬಂದರೆ ಕಠಿಣ ಕ್ರಮ ಜರುಗಿಸುವಂತೆ ಡಿಸಿಜಿಐ, ಎನ್ಪಿಪಿಐ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.
ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕೋವಿಡ್19 ಉತ್ಪಾದನೆ ನಿರೀಕ್ಷಿತ ಮಟ್ಟದಲ್ಲಿ ಮುಂದುವರಿದಿದೆ. ಕೋವಿಡ್ ಲಸಿಕಾ ಅಭಿಯಾನಕ್ಕೆ ಇನ್ನಷ್ಟು ವೇಗ ನೀಡಲು ರಷ್ಯಾದಿಂದ ಸ್ಪುಟ್ನಿಕ್-5 ಲಸಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.