ಬೆಂಗಳೂರು: ಕೋವಿಡ್ ಲಸಿಕೆಯನ್ನು ಹೆಚ್ಚಿನ ಹಿರಿಯ ನಾಗರಿಕರು ಪಡೆಯುವಂತೆ ಮಾಡಲು ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ ದೊರೆಯುವಂತೆ ಮಾಡಲು ಚರ್ಚಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸದ್ಯಕ್ಕೆ ತಾಲೂಕು ಆಸ್ಪತ್ರೆಗಳಲ್ಲಿ ಮಾತ್ರ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಹೆಚ್ಚಿನವರು ಲಸಿಕೆ ಪಡೆಯಲು ಇದನ್ನು ಪಿಎಚ್‍ಸಿ, ಸಮುದಾಯ ಆರೋಗ್ಯ ಕೇಂದ್ರಕ್ಕೂ ವಿಸ್ತರಿಸಲಾಗುವುದು. ಈ ಕುರಿತು ಸಭೆ ನಡೆಸಿ ಚರ್ಚಿಸಲಾಗುವುದು ಎಂದರು.
ಕೋವಿಡ್ ಲಸಿಕೆಯನ್ನು 60 ವರ್ಷ ಮೇಲ್ಪಟ್ಟವರಿಗೆ ಹಾಗೂ ಕೋಮಾರ್ಬಿಡಿಟಿ ಇರುವವರಿಗೆ ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ನೈತಿಕ ಸ್ಪೂರ್ತಿ ನೀಡುವ ಕೆಲಸವೂ ನಡೆಯುತ್ತಿದೆ. ಲಸಿಕೆ ನೀಡುತ್ತಿರುವುದರಿಂದ ಬಹಳ ಪ್ರಯೋಜನವಾಗುತ್ತಿದೆ. ಲಸಿಕೆ ಪಡೆದವರಿಗೆ ಮುಂದೆ ಸೋಂಕು ಬಂದರೂ ಹೆಚ್ಚು ಸಮಸ್ಯೆ ಉಂಟಾಗುವುದಿಲ್ಲ. ಇನ್ನು ಮುಂದೆ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ದೇಸಿ ಲಸಿಕೆ ಪಡೆದಿದ್ದಾರೆ. ಹೀಗಾಗಿ ಎಲ್ಲರೂ ವಿಶ್ವಾಸದಿಂದ ಲಸಿಕೆ ಪಡೆಯಬಹುದು. ಮನೆಗಳಲ್ಲಿ ಯುವಜನರು ಹಿರಿಯ ನಾಗರಿಕರನ್ನು ಕರೆದುಕೊಂಡು ಬರುತ್ತಿದ್ದಾರೆ. ಲಸಿಕೆ ಪಡೆದವರಿಗೆ ಯಾವುದೇ ಅಡ್ಡ ಪರಿಣಾಮವಾಗಿಲ್ಲ ಎಂದರು.
ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಮೂಲಸೌಕರ್ಯ ನೋಡಿಕೊಂಡು ಲಸಿಕೆ ವಿತರಣೆಗೆ ಅಲ್ಲಿಯೂ ಅವಕಾಶ ನೀಡಲಾಗುವುದು. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಲಸಿಕೆ ವಿತರಣೆಗೆ ಅವಕಾಶ ನೀಡಲಾಗುವುದು ಎಂದರು.