ಗದಗ : ಖಾಸಗಿ ಆಸ್ಪತ್ರೆಯ ಯಡವಟ್ಟು ಹಾಗೂ ಗ್ರಾಮಸ್ಥರ ಆಮಾನವೀಯತೆಯಿಂದಾಗಿ ಇಲ್ಲೊಂದು ಕುಟುಂಬ ಕಣ್ಣೀರು ಹಾಕುವಂತಾಗಿದೆ.
ಅಂತ್ಯ ಸಂಸ್ಕಾರಕ್ಕೆಂದು ಬಂದ ಕುಟುಂಬಸ್ಥರಿಗೆ ಗ್ರಾಮಸ್ಥರು ಗ್ರಾಮದೊಳಗೆ ಬಿಡುತ್ತಿಲ್ಲ. ರೋಣ ತಾಲೂಕಿನ ಬಾಸಲಾಪೂರ ಗ್ರಾಮದಲ್ಲಿಯೇ ಇಂತಹ ಮನಕಲುಕುವ ಘಟನೆ ನಡೆದಿದೆ. ಗ್ರಾಮದಲ್ಲಿನ ವ್ಯಕ್ತಿಯೊಬ್ಬರು ಬಾದಾಮಿ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಈ ವ್ಯಕ್ತಿ ಕೊರೊನಾದಿಂದ ಸೋಮವಾರ ತಡರಾತ್ರಿ ಸಾವನ್ನಪ್ಪಿದ್ದರು ಎನ್ನಲಾಗಿದೆ.
ಆಸ್ಪತ್ರೆಯ ಸಿಬ್ಬಂದಿ ಮಾತ್ರ ಕೋವಿಡ್‌ನ ಅಗತ್ಯ ನಿಯಮ ಅನುಸರಿಸದೆ ಮೃತದೇಹ ಹಸ್ತಾಂತರಿಸಿದ್ದರು. ಆಂಬುಲೆನ್ಸ್ ನಲ್ಲಿ ಸ್ವಗ್ರಾಮಕ್ಕೆ ಶವ ಆಗಮಿಸಿತ್ತು. ಶವ ಬಂದ ಕೂಡಲೇ ಗ್ರಾಮಸ್ಥರು, ಕೋವಿಡ್ ನಿಂದಲೇ ಈ ವ್ಯಕ್ತಿ ಸಾವನ್ನಪ್ಪಿದ್ದಾರೆ. ಹೀಗಾಗಿ ಒಳಗೆ ಪ್ರವೇಶ ಮಾಡಲು ಅವಕಾಶ ನೀಡುವುದಿಲ್ಲ ಎಂದು ವಾಹನವನ್ನು ಹೊರಗಡೆಯೇ ನಿಲ್ಲಿಸಿದ್ದರು.
ಹೀಗಾಗಿ ಶವದ ಜೊತೆಗೆ ರಸ್ತೆಯಲ್ಲಿಯೇ ಕುಟುಂಬಸ್ಥರು ಕಣ್ಣೀರು ಹಾಕುವಂತಾಯಿತು. ಅಲ್ಲದೇ, ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಕೂಡ ಗ್ರಾಮಸ್ಥರು ಬಿಡಲಿಲ್ಲ. ಹೀಗಾಗಿ ಕುಟುಂಬಸ್ಥರು ಆಂಬುಲೆನ್ಸ್ ನಲ್ಲಿಯೇ ಶವ ಇಟ್ಟುಕೊಂಡು ಕಣ್ಣೀರು ಹಾಕುತ್ತಿದ್ದರು.