ಬೆಂಗಳೂರು: ಎಲ್ಲ ರಾಜ್ಯಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿದ್ದು, ಎರಡನೇ ಅಲೆ ಆರಂಭವಾಗಿರುವುದು ಕಂಡುಬಂದಿದೆ. ಆದ್ದರಿಂದ ಸಾರ್ವಜನಿಕರು ಹೆಚ್ಚು ಎಚ್ಚರ ವಹಿಸಬೇಕಿದೆ.
8-10 ರಾಜ್ಯಗಳಲ್ಲಿ ಅತಿ ಹೆಚ್ಚು ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ 2.82 ಲಕ್ಷ, ಕೇರಳದಲ್ಲಿ 24 ಸಾವಿರ, ಪಂಜಾಬ್ ನಲ್ಲಿ 22 ಸಾವಿರ, ಕರ್ನಾಟಕದಲ್ಲಿ 19 ಸಾವಿರ ಸಕ್ರಿಯ ಪ್ರಕರಣಗಳಿವೆ. ಎಲ್ಲ ರಾಜ್ಯಗಳಲ್ಲಿ ಕೋವಿಡ್ ಅಲೆ ಆರಂಭವಾಗಿದೆ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ ನಮ್ಮ ಚಟುವಟಿಕೆಗಳಲ್ಲಿ ನಿಯಂತ್ರಣ ಮಾಡಿದ್ದರೆ ಅಪಾಯ ತಪ್ಪಿದ್ದಲ್ಲ.
ಈ ಕುರಿತಂತೆ ಅಂಕಿಅಂಶ ಒದಗಿಸಿರುವ ಆರೋಗ್ಯ ಸಚಿವ ಡಾ.ಸುಧಾಕರ್, ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವ, ಭೌತಿಕ ಅಂತರ ಕಾಯ್ದುಕೊಳ್ಳುವ ನಿಯಮ ಪಾಲಿಸಬೇಕು. ಎಲ್ಲರೂ ಲಸಿಕೆಯನ್ನು ಪಡೆಯಬೇಕು. ರಾಜ್ಯದಲ್ಲೀಗ ಪಾಸಿಟಿವಿಟಿ ದರ 1.6% ಆಗಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಈಗ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರತಿ ದಿನ ಪರೀಕ್ಷೆ ಮಾಡಲಾಗುತ್ತಿದೆ. ರಾಷ್ಟ್ರೀಯ ಸರಾಸರಿ ಪಾಸಿಟಿವಿಟಿ ದರ 1.5% ಇದ್ದು, ನಮ್ಮ ರಾಜ್ಯದ ಪಾಸಿಟಿವಿಟಿ ದರ ಹೆಚ್ಚಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಆರೋಗ್ಯ ಸಿಬ್ಬಂದಿ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವ ಗುರಿಯಲ್ಲಿ, ಬೀದರ್ 113%, ಧಾರವಾಡ 107%, ಗದಗ 103% ಲಸಿಕೆ ಗುರಿ ಸಾಧಿಸಿದೆ. ಬೆಂಗಳೂರು ನಗರ 61%, ಬಾಗಲಕೋಟೆ 64%, ದಾವಣಗೆರೆ ಹಾಗೂ ಕೊಪ್ಪಳ 65% ಗುರಿ ಸಾಧಿಸಿದೆ. ಇಲ್ಲಿವರೆಗೆ 2,22,377 ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಡೋಸ್ ನೀಡಲಾಗಿದೆ. 3,34,110 ಆರೋಗ್ಯ ಸಿಬ್ಬಂದಿಗೆ ಎರಡನೇ ಡೋಸ್ ನೀಡಲಾಗಿದೆ ಎಂದರು.
60 ವರ್ಷ ವಯಸ್ಸು ಮೇಲ್ಪಟ್ಟ 16,18,150 ಮಂದಿಗೆ ಲಸಿಕೆ ನೀಡಲಾಗಿದೆ. 45 ವರ್ಷದಿಂದ 60 ವರ್ಷದವರೆಗಿನ ಸಹ ಅಸ್ವಸ್ಥತೆ ಹೊಂದಿದ 4,70,602 ಮಂದಿ ಲಸಿಕೆ ಪಡೆದಿದ್ದಾರೆ. 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವಲ್ಲಿ ಚಿತ್ರದುರ್ಗ 37%, ರಾಮನಗರ 37.8%, ಕೊಡಗು 38%, ಚಾಮರಾಜನಗರ 38%, ಕೊಪ್ಪಳ 48% ಗುರಿ ಸಾಧಿಸಿವೆ. ನಾಳೆ ನಾಡಿದ್ದರಲ್ಲಿ 12 ಲಕ್ಷ ಡೋಸ್ ಬರಲಿದೆ ಎಂದು ತಿಳಿಸಿದರು.
ಕೋವಿಡ್ ನಿಯಂತ್ರಣ ಕ್ರಮ ಈಗಾಗಲೆ ಜಾರಿಯಲ್ಲಿದೆ. ಜಾತ್ರೆ ಆಚರಣೆಗೆ ಅನುಮತಿ ನೀಡುತ್ತಿಲ್ಲ. ಕ್ರಮೇಣ ಇನ್ನೂ ಬಿಗಿಯಾದ ಕ್ರಮ ಕೈಗೊಳ್ಳಲಾಗುವುದು. ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚು ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಕೋರಲಾಗಿದೆ. ಮುಖ್ಯಮಂತ್ರಿಗಳೇ ಈ ವಿಚಾರದಲ್ಲಿ ನಿರ್ಣಯ ಕೈಗೊಳ್ಳುತ್ತಾರೆ ಎಂದರು.