ಬೆಂಗಳೂರು:ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತಷ್ಟು ಟಫ್ ರೂಲ್ಸ್ ಜಾರಿಗೆ ತಂದಿದೆ. ಇಂದು ರಾತ್ರಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಫೋಷಿಸಿದೆ.
ರಾಜ್ಯಪಾಲರ ಉಪಸ್ಥಿತಿಯಲ್ಲಿ ನಡೆದ ಸಭೆಯ ಬಳಿಕ ನಿರ್ಧಾರ ಕೈಗೊಂಡಿರುವ ಸರ್ಕಾರ 14 ದಿನಗಳ ವರೆಗೆ ಜಾರಿಗೆ ಬರುವಂತೆ ಈ ಘೋಷಣೆ ಮಾಡಿದೆ.
ಗಮನ ಸೆಳೆದ ಸರ್ವಪಕ್ಷ ಸಭೆ:
ರಾಜ್ಯದಲ್ಲಿ ಕೊರೋನಾ ವೈರಾಣು ವ್ಯಾಪಕವಾಗಿ ಹರಡುತ್ತಿದ್ದು, ಸೋಂಕಿಗೆ ಅಸಂಖ್ಯ ಜನ ಬಲಿಯಾಗಿದ್ದಾರೆ. ನಿತ್ಯವೂ ರಾಜ್ಯದಲ್ಲಿ ಸಾವಿರಾರು ಜನರು ಸೋಂಕಿಗೊಳಗಾಗಿತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ಉಪಸ್ಥಿತಿಯಲ್ಲಿ ಸಂಜೆ ನಡೆದ ವಿಧಾನ ಮಂಡಲದ ಉಭಯ ಸದನಗಳ ಪ್ರಮುಖರ ಸಭೆ ಗಮನಸೆಳೆಯಿತು.
ಬೆಂಗಳೂರು ಸಹಿತ ರಾಜ್ಯದ ಪ್ರಮುಖ ನಗರಗಳಲ್ಲಿ ಕಠಿಣ ನಿಯಮ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ರಾಜಧಾನಿ ನಗರಿ ಬೆಂಗಳೂರಿನಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಹಾಗಾಗಿ ಸಿನಿಮಾ ಮಂದಿರಗಳು, ಬಾರ್-ಪಬ್ಗಳ ಸಹಿತ ಪ್ರಮುಖ ಉದ್ದಿಮೆ ಕೇಂದ್ರಗಳ ಚಟುವಟಿಕೆಗಳಿಗೆ ಅಂಕುಶ ಹಾಕಬೇಕೆಂಬ ಆಗ್ರಹ ಕೇಳಿಬಂತು. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಸಹಿತ ಹಲವು ಮುಖಂಡರು ಲಾಕ್ಡೌನ್ನಂತಹಾ ಕಠಿಣ ನಿಯಮ ಜಾರಿಗೆ ಸಲಹೆ ಮಾಡಿದರು. ಈ ಸಲಹೆಗಳನ್ನು ಪರಿಗಣಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಈ ಸಭೆಯಲ್ಲಿ ಭರವಸೆ ನೀಡಿದರು. ಅದಾಗಲೇ ಸಭೆಯ ಅಧ್ಯಕ್ಷತೆ ವಹಿಸಿದ ರಾಜ್ಯಪಾಲ ವಜುಬಾಯಿ ವಾಲಾ ಕೂಡಾ ಲಾಕ್ಡೌನ್ ಜಾರಿಗೆ ಸಲಹೆ ಮಾಡಿದರು. ಜನರು ಸಾವಿನಿಂದ ಸಾಯುವುದಿಲ್ಲ ಎಂಬ ವಿಶ್ವಾಸ ಇದೆ. ಹಾಗಾಗಿ ಲಾಕ್ಡೌನ್ ಮಾಡೋದಾದ್ರೆ ಮಾಡಿ ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದರು.
ಆದರೆ ರಾತ್ರಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು ಲಾಕ್ಡೌನ್ ಕೊನೆಯ ಅಸ್ತ್ರವಾಗಲಿ ಎಂದು ಸಲಹೆ ಮಾಡಿದ ಹಿನ್ನೆಲೆಯಲ್ಲಿ ಬಿಎಸ್ವೈ ಸರ್ಕಾರ ನೈಟ್ ಕರ್ಫ್ಯೂ ಜೊತೆಗೆ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಘೋಷಣೆ ಮಾಡಿದೆ.