ಚಿಕ್ಕಮಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಲಿದ್ದು ಪರಿಸ್ಥಿತಿ ನಿಭಾಯಿಸಲು ಸರ್ಕಾರ ಹರಸಾಹಸ ಪಡುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಾಸಿಟಿವ್ ಸಂಖ್ಯೆಗಳು ಹೆಚ್ಚುತ್ತಲಿದ್ದರೂ ಚಿಕ್ಕಮಗಳೂರಿನಲ್ಲಿ ಹತೋಟಿಯಲ್ಲಿದೆ. ಹೀಗಿದ್ದರೂ ಜಿಲ್ಲೆಯ ಜನರು ಚಿಕಿತ್ಸೆಯಿಂದ ವಂಚಿತರಾಗಬಾರದೆಂಬ ನಿಟ್ಟಿನಲ್ಲಿ ಮಾಜಿ ಸಚಿವರೂ ಆದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೈ ಅಲರ್ಟ್ ಆಗಿದ್ದಾರೆ. ಇಂದೂ ಕೂಡಾ ಅವರು ಆರೋಗ್ಯಾಧಿಕಾರಿಗಳು ಹಾಗೂ ಆಸ್ಪತ್ರೆ ವೈದ್ಯರ ಜೊತೆ ಕಾರ್ಯತಂತ್ರ ನಡೆಸಿ ಆರೋಗ್ಯ ಕ್ಷೇತ್ರಕ್ಕೆ ಚುರುಕು ಮುಟ್ಟಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಹೈ ಅಲರ್ಟ್..
ಕೊರೋನಾ ಸೋಂಕು ಶರವೇಗದಲ್ಲಿ ಹರಡುತ್ತಿದ್ದು ಸಾವಿನ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಈ ಕಳವಳಕಾರಿ ಸನ್ನಿವೇಶಕ್ಕೆ ಚಿಕ್ಕಮಗಳೂರು ಕೂಡಾ ಸಾಕ್ಷಿಯಾಗಬಾರದೆಂಬ ನಿಟ್ಟಿನಲ್ಲಿ ಸ್ಥಳೀಯ ಶಾಸಕರೂ ಆದ ಸಿ.ಟಿ.ರವಿ ತಾವೇ ಅಧಿಕಾರಿಗಳೊಂದಿಗೆ ಸೇರಿ ಅಖಾಡಕ್ಕೆ ಧುಮುಕಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಖುದ್ದು ಭೇಟಿಯಾಗಿ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದ ರವಿ ನಡೆಯಿಂದ ಜಿಲ್ಲೆಯ ವೈದ್ಯಾಧಿಕಾರಿಗಳ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ.
ತಾವೇ ಪಿಪಿಇ ಕಿಟ್ ಧರಿಸಿ ಕೋವಿಡ್ ಆಸ್ಪತ್ರೆಗಳತ್ತ ಸವಾರಿ ಕೈಗೊಂಡರು. ಸೋಂಕಿತರ ಆವಶ್ಯಕತೆ, ಆಸ್ಪತ್ರೆಗಳ ಅನಿವಾರ್ಯತೆ, ವೈದ್ಯರ ಸವಾಲುಗಳನ್ನು ಪಟ್ಟಿ ಮಾಡಿದ ಸಿ.ಟಿ.ರವಿ, ತಕ್ಷಣವೇ ಚಿಕ್ಕಮಗಳೂರಿನ ಕೋವಿಡ್ ಆಸ್ಪತ್ರೆಗಳ ಪ್ರಮುಖರ ಹಾಗೂ ಅಧಿಕಾರಿಗಳ ಸಭೆ ಕರೆದರು. ವೈದ್ಯಾಧಿಕಾರಿಗಳು ಹಾಗೂ ಕೋವಿಡ್ ಆಸ್ಪತ್ರೆಗಳ ವೈದ್ಯರನ್ನೂ ಸಭೆಗೆ ಕರೆಸಿ ಕೊರೋನಾ ಸೋಂಕು ನಿಯಂತ್ರಣ, ಹಾಗೂ ಸೋಂಕಿತರಿಗೆ ಅಗತ್ಯ ಚಿಕಿತ್ಸೆಗೆ ಸಂಬಂಧಿಸಿದಂತೆ ಸಮರ ಸಜ್ಜಿನ ಕ್ರಮ ಕೈಗೊಳ್ಳುವ ಸಂಬಂಧ ಕಾರ್ಯತಂತ್ರ ರೂಪಿಸಿದರು.
ಚಿಕ್ಕಮಗಳೂರಿನಲ್ಲಿ ಅರಳಗುಪ್ಪೆ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆ, ಹೋಲಿಕ್ರಾಸ್, ಆಶ್ರಯ, ಕೆಆರ್‌ಎಸ್ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅಲ್ಲಿ ಆಕ್ಸಿಜನ್ ಸಹಿತ ಯಾವುದೇ ವ್ಯವಸ್ಥೆಯ ಕೊರತೆಯಾಗದಂತೆ ಕ್ರಮಕ್ಕೆ ಸಿ.ಟಿ.ರವಿ ನಿರ್ದೇಶನ ನೀಡಿದರು.
ಈ ನಡುವೆ, ಜಿಲ್ಲಾಧಿಕಾರಿ ಹಾಗೂ ಚಿಕ್ಕಮಗಳೂರು ಜಿಲ್ಲೆಯನ್ನು ಪ್ರತಿನಿಧಿಸುವ ಸಂಸದರು ಹಾಗೂ ಶಾಸಕರ ಜೊತೆ ವರ್ಚುವಲ್ ಮೀಟಿಂಗ್ ಕೂಡಾ ಗಮನಸೆಳೆಯಿತು. ಚಿಕ್ಕಮಗಳೂರು ಜಿಲ್ಲೆಯನ್ನು ಕೊರೋನಾ ಗುಮ್ಮಾದಿಂದ ಪಾರು ಮಾಡುವ ಸಂಬಂಧ ಸಲಹೆ ಪಡೆದ ಸಿ.ಟಿ.ರವಿ, ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.
ಈ ಪರಾಮರ್ಶೆ ನಡೆಯನ್ನು ಇಂದೂ ಕೂಡಾ ಮುಂದುವರಿಸಿದ ರವಿ, ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆ ಬಗೆಹರಿಸುವ ಬರವಸೆ ನೀಡಿದ್ದಾರೆ. ಇವರ ಜೊತೆ ಕಾರ್ಯಕರ್ತರ ಸಮೂಹವೂ ಕೈಜೋಡಿಸಿರುವುದು ಆಶಾವಾದದ ಬೆಳವಣಿಗೆ.