ಬೆಂಗಳೂರು: ಕೊರೋನಾ ಸೋಂಕಿನ ತಲ್ಲಣ ವಿಚಾರದಲ್ಲಿ ಸರ್ಕಾರದತ್ತ ಛಾಟಿ ಬೀಸುತ್ತಲೇ ಇದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ಬಾರಿ ಸೋಂಕು ನಿಯಂತ್ರಣ ಸಂಬಂಧ 11 ಸೂತ್ರಗಳನ್ನು ರಾಜ್ಯ ಸರ್ಕಾರದ ಮುಂದಿಟ್ಟಿದ್ದಾರೆ. ಈ ಸಂಬಂಧ ಸಿಎಂ ಯಡಿಯೂರಪ್ಪ ಅವರಿಗೆ ಸಿದ್ದರಾಮಯ್ಯ ಬರೆದಿರುವ ಪತ್ರ ಗಮನಸೆಳೆದಿದೆ.
ಕೊರೊನಾ ಸೋಂಕು ನಿಯಂತ್ರಣ, ಸೋಂಕಿತರಿಗೆ ಚಿಕಿತ್ಸೆ ನೀಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೋರಿ ಹಾಗೂ ಸಾರ್ವಜನಿಕರ ರಕ್ಷಣೆಗೆ ಸರ್ಕಾರ ಯಾವ ರೀತಿ ಮುಂದಾಗಬೇಕು ಎಂಬುದರ ಬಗ್ಗೆ ಸಲಹೆಗಳನ್ನು ನೀಡಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಸಿದ್ದ ಸೂತ್ರದ ಸಿದ್ದು ಪತ್ರ ಹೀಗಿದೆ:
ದೇಶದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡು 15 ತಿಂಗಳಾದವು. ರಾಜ್ಯದಲ್ಲಿ 14 ತಿಂಗಳುಗಳಾದವು. ಕಳೆದ ಒಂದು ತಿಂಗಳಿನಿಂದೀಚೆಗೆ ಎರಡನೆ ಅಲೆ ಪ್ರಾರಂಭವಾಗಿದೆ. ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಕಳೆದ ವರ್ಷದ ಆರಂಭದಲ್ಲಿ ಕಾಣಿಸಿಕೊಂಡ ಕೋವಿಡ್ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಕಾಣಿಸಿಕೊಂಡಿತು. ಇದರ ಮೊದಲ ಹಂತದಲ್ಲಿ ಕೋವಿಡ್ ಸೋಂಕು ವ್ಯಾಪಿಸಲು ನಿಸರ್ಗದಲ್ಲಿನ ಏರುಪೇರುಗಳೂ ಸಹ ಕಾರಣವಾಗಿದ್ದವು. ಎಂದು ಹೇಳಬಹುದು. ಆದರೆ, ಎರಡನೆ ಅಲೆಯ ಸಂದರ್ಭದಲ್ಲಿ ಉಂಟಾಗುತ್ತಿರುವ ಸಾವು-ನೋವುಗಳಿಗೆ ನೇರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅದಕ್ಷತೆ ಮತ್ತು ನಿರ್ಲಕ್ಷ್ಯಗಳೇ ಕಾರಣ.
2020ರ ನವೆಂಬರ್ 21 ರಂದು ಸಂಸತ್ತಿನ ಸ್ಥಾಯಿ ಸಮಿತಿಯು ಕೇಂದ್ರ ಸರ್ಕಾರಕ್ಕೆ ಕೊರೋನಾ ಎರಡನೇ ಅಲೆ ಬರುವ ಬಗ್ಗೆ ಅದಕ್ಕಾಗಿ ಮಾಡಿಕೊಳ್ಳಬೇಕಾದ ಸಿದ್ದತೆಗಳ ಕುರಿತು ವರದಿ ನೀಡಿತ್ತು. ಅದೇ ತಿಂಗಳ ಅಂತ್ಯದಲ್ಲಿ ನಮ್ಮಲ್ಲಿ ರಾಜ್ಯ ಸರ್ಕಾರ ರಚಿಸಿರುವ ತಾಂತ್ರಿಕ ಸಲಹೆಗಾರರ ತಂಡ ರಾಜ್ಯ ಸರ್ಕಾರಕ್ಕೆ ಎರಡನೆ ಅಲೆಯ ಕುರಿತು ಸಲಹೆಗಳನ್ನು ನೀಡಿತ್ತು. ಈ ವರದಿಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಸಂಪೂರ್ಣ ನಿರ್ಲಕ್ಷಿಸಿದವು. ಈ ವರದಿಗಳನ್ನು, ಎಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಹಾಸಿಗೆ, ಆಂಬುಲೆನ್ಸ್, ಔಷಧ, ಐ.ಸಿ.ಯು. ಆಕ್ಸಿಜನ್ ವ್ಯವಸ್ಥೆಗಳನ್ನು ವ್ಯಾಪಕ ಲಸಿಕಾ ಅಭಿಯಾನಗಳನ್ನು ನಡೆಸಬೇಕಾಗಿತ್ತು. ಆದರೆ ನೀವೇನು ಮಾಡಿದಿರಿ ಎಂದು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ. 2021ರ ಜನವರಿ 20, 21 ರ ಆರಂಭದಲ್ಲಿ ಇದ್ದ ಪರಿಸ್ಥಿತಿಯಲ್ಲಿ ಈಗ ಏನಾದರೂ ಬದಲಾವಣೆ ಆಗಿದೆಯೇ? ಇದ್ದರೆ ಸಾರ್ವಜನಿಕರಿಗೆ ತಿಳಿಸಿ.
ಹೊಸದಾಗಿ ಎಷ್ಟು ಬೆಡ್ಗಳನ್ನು, ಎಷ್ಟು ಐ.ಸಿ.ಯು.ಬೆಡ್ಗಳನ್ನು, ಎಷ್ಟು ಆಕ್ಸಿಜನ್ ವ್ಯವಸ್ಥೆಯಿರುವ ಬೆಡ್ಗಳನ್ನು ಹೆಚ್ಚಿಸಿದ್ದೀರಿ?, ರೆಮ್ಡಿಸಿವಿಯರ್ ಉತ್ಪಾದನೆಯನ್ನು ಎಷ್ಟು ಹೆಚ್ಚಿಸಲಾಗಿದೆ?, ಆಕ್ಸಿಜನ್ ಉತ್ಪಾದನೆಯನ್ನು ಎಷ್ಟು ಹೆಚ್ಚಿಸಲಾಗಿದೆ? ತಿಳಿಸಿ.
ವೈದ್ಯಕೀಯ ಕ್ಷೇತ್ರದಲ್ಲಿ ತಜ್ಞರಾಗಿರುವ ಡಾ|| ದೇವಿಪ್ರಸಾದ್ ಶೆಟ್ಟಿ ಯವರ ಪ್ರಕಾರ ಕೋವಿಡ್ ಎರಡನೆ ಅಲೆಯಲ್ಲಿ ಹೆಚ್ಚು ಸೋಂಕಿತರಾಗಿರುವವರು ಮತ್ತು ಐ.ಸಿ.ಯು. ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರು, ಸಣ್ಣ ಸಣ್ಣ ವಯಸ್ಸಿನವರು. ಇವರ ಕುಟುಂಬಗಳ ದುಡಿಮೆಗೆ ಜೀವನಾಧಾರವಾಗಿರುವ ಯುವಕರೇ ಆಗಿದ್ದಾರೆ. ದುರಂತವೆಂದರೆ ಹೆಚ್ಚು ಮರಣ ಹೊಂದುತ್ತಿರುವವರೂ ಸಹ ಯುವಜನತೆ. ಕುಟುಂಬಗಳಲ್ಲಿ ದುಡಿಯುವ ವಯಸ್ಸಿನವರು ಮರಣ ಹೊಂದಿದರೆ ಇಡೀ ಕುಟುಂಬದ ಬದುಕು ಸಂಪೂರ್ಣ ಅಸ್ತವ್ಯಸ್ತವಾಗುತ್ತದೆ ಮತ್ತು ದುರಂತಕ್ಕೆ ಸಿಲುಕಿಕೊಳ್ಳುತ್ತದೆ.
ಡಾ|| ದೇವಿಪ್ರಸಾದ್ಶೆಟ್ಟಿಯವರ ಪ್ರಕಾರ ವರದಿಯಾಗುತ್ತಿರುವುದಕ್ಕಿಂತ ಕನಿಷ್ಟ 5 ಪಟ್ಟು ಹೆಚ್ಚು ಜನ ಸೋಂಕಿತರಾಗುತ್ತಿದ್ದಾರೆ. ರಾಜ್ಯದಲ್ಲಿ 35 ರಿಂದ 40 ಸಾವಿರ ಜನ ಪ್ರತಿದಿನ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದರೆ, ವಾಸ್ತವದಲ್ಲಿ ಕನಿಷ್ಟ 2 ಲಕ್ಷ ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆಂದೇ ಅರ್ಥ. ಇದರಲ್ಲಿ ಕನಿಷ್ಟ ಶೇ.5 ರಷ್ಟು ಜನಕ್ಕೆ ವೆಂಟಿಲೇಟರ್ ಅಗತ್ಯವಿದೆ ಎಂದರೂ 10,000 ವೆಂಟಿಲೇಟರ್ಗಳ ಅಗತ್ಯವಿರುತ್ತದೆ. ಒಬ್ಬ ರೋಗಿ 10 ದಿನ ಐ.ಸಿ.ಯು.ನಲ್ಲಿ ಇರುತ್ತಾನೆಂದುಕೊಂಡರೆ 10 ದಿನಕ್ಕೆ ಒಂದು ಲಕ್ಷ ವೆಂಟಿಲೇಟರ್ಗಳು ಬೇಕಾಗುತ್ತವೆ. ಆದರೆ ರಾಜ್ಯದಲ್ಲಿ 10 ಸಾವಿರ ಐ ಸಿ ಯು ಬೆಡ್ ಗಳೂ ಇಲ್ಲ. ಅತಿ ಹೆಚ್ಚು ಸೋಂಕಿತರಿರುವ ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿರುವ ಐ.ಸಿ.ಯು.ಬೆಡ್ಗಳು ಕೇವಲ 952 ಮಾತ್ರ. ಅದರಲ್ಲಿ ವೆಂಟಿಲೇಟರ್ ಸೌಲಭ್ಯವಿರುವ ಬೆಡ್ಗಳ ಸಂಖ್ಯೆ ಕೇವಲ 434 ಮಾತ್ರ. ಇಂಥ ಪರಿಸ್ಥಿತಿಯಲ್ಲಿ ರೋಗಿಗಳು ಮರಣ ಹೊಂದಿದರೆ ಅದಕ್ಕೆ ಯಾರನ್ನು ಹೊಣೆ ಮಾಡಬೇಕು? ಕಳೆದ ಒಂದು ತಿಂಗಳಿನಿಂದಾದರೂ ಎಷ್ಟು ಐ.ಸಿ.ಯು.ಬೆಡ್ಗಳನ್ನು, ಆಕ್ಸಿಜನ್ ವ್ಯವಸ್ಥೆಯನ್ನು ಹೆಚ್ಚಿಸಿದ್ದೀರಿ? ಸಾರ್ವಜನಿಕರಿಗೆ ತಿಳಿಸಿ.
ರಾಜ್ಯದ ಜನರ ಸಂಕಟಗಳನ್ನು ನೋಡಲಾಗುತ್ತಿಲ್ಲ. ಆಕ್ಸಿಜನ್ ವ್ಯವಸ್ಥೆಯೂ ಇದೇ ರೀತಿ ಇದೆ. 1,400 ಟನ್ ಆಕ್ಸಿಜನ್ ಅಗತ್ಯವಿರುವ ಕಡೆ ಕೇವಲ 300-400 ಟನ್ ಆಕ್ಸಿಜನ್ ಹಂಚಿಕೆ ಮಾಡಲಾಗಿದೆ. ವೈರಸ್ಗಳ ನಿಯಂತ್ರಣಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ರೆಮ್ಡಿಸಿವಿರ್ ಔಷಧಿ ಬೇಡಿಕೆಗೆ ಹೋಲಿಸಿದರೆ ಶೇ.20 ರಷ್ಟೂ ಸರಬರಾಜು ಆಗುತ್ತಿಲ್ಲ. ಘನತೆಯಿಂದ ಶವಸಂಸ್ಕಾರವನ್ನೂ ಮಾಡಲಾಗದ ಪರಿಸ್ಥಿತಿಯನ್ನು ರಾಜ್ಯದಲ್ಲಿ ನಿರ್ಮಿಸಿದ್ದೀರಿ. ಇಂಥ ಸಂದರ್ಭದಲ್ಲಿ ನಾಗರಿಕ ಸರ್ಕಾರವೊಂದು ನಡೆದುಕೊಳ್ಳಬೇಕಾದ ರೀತಿ ಇದೇನಾ ಎಂದು ಜನ ಕೇಳುತ್ತಿದ್ದಾರೆ. ಆದ್ದರಿಂದ ಸರ್ಕಾರ ತನ್ನೆಲ್ಲಾ ಶಕ್ತಿಯನ್ನು ಬಳಸಿ ಸಾರ್ವಜನಿಕರ ರಕ್ಷಣೆಗೆ ನಿಲ್ಲಬೇಕೆಂದು ಒತ್ತಾಯಿಸುತ್ತೇನೆ. ಅದಕ್ಕಾಗಿ ಈ ಸಲಹೆಗಳನ್ನು ನೀಡಬಯಸುತ್ತೇನೆ.
- ರಾಜ್ಯದಲ್ಲಿ ಈಗ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳನ್ನು ಕನಿಷ್ಟ 50 ಪಟ್ಟು ಹೆಚ್ಚಿಸಬೇಕು. ಅವಶ್ಯವಿದ್ದರೆ ಶಾಲೆ, ಕಾಲೇಜುಗಳ ಹಾಸ್ಟೆಲ್, ಹೋಟೆಲ್, ಕಲ್ಯಾಣ ಮಂಟಪ, ಸಮುದಾಯ ಭವನ ಮುಂತಾದ ಕಡೆ ತಾತ್ಕಾಲಿಕವಾಗಿ ಬೆಡ್ಗಳ ವ್ಯವಸ್ಥೆ ಮಾಡಬೇಕು.
- ಸೋಂಕಿತರನ್ನು ನೋಡಿಕೊಳ್ಳಲು ನುರಿತ ತಜ್ಞರ ತಂಡದ ಜೊತೆಗೆ ವೈದ್ಯಕೀಯ ವ್ಯಾಸಂಗದ ಅಂತಿಮ ವರ್ಷಗಳಲ್ಲಿರುವ ವೈದ್ಯಕೀಯ, ಅರೆವೈದ್ಯಕೀಯ ವಿದ್ಯಾರ್ಥಿಗಳನ್ನು, ದಾದಿಯರನ್ನು ನೇಮಿಸಬೇಕು. ಜೊತೆಗೆ ಸ್ವ-ಇಚ್ಛೆಯಿಂದ ಮುಂದೆ ಬರುವ ರಾಜಕೀಯೇತರ ಸ್ವಯಂ ಸೇವಕರಿಗೆ ಕ್ಷಿಪ್ರ ತರಬೇತಿಗಳನ್ನು ನೀಡಿ, ತಜ್ಞ ವೈದ್ಯರ ನೇತೃತ್ವದಲ್ಲಿ ತಂಡಗಳನ್ನು ರಚಿಸಿ, ಚಿಕಿತ್ಸೆ ನೀಡಲು ಪ್ರಾರಂಭಿಸಬೇಕು. ಇದರ ಜೊತೆಗೆ ನಿವೃತ್ತ ವೈದ್ಯರು, ದಾದಿಯರನ್ನೂ ಸಹ ತಾತ್ಕಾಲಿಕವಾಗಿ ಮರುನೇಮಕ ಮಾಡಿಕೊಳ್ಳಬೇಕು. ಈ ಎಲ್ಲಾ ವೈದ್ಯ ಸಿಬ್ಬಂದಿಗಳಿಗೆ ಆಕರ್ಷಕವಾದ ಸಂಬಳ, ಸಾರಿಗೆ, ಜೀವ ವಿಮೆ ವ್ಯವಸ್ಥೆ ಕಲ್ಪಿಸಬೇಕು
- ಪ್ರಸ್ತುತ ರಾಜ್ಯದಲ್ಲಿ ಲಭ್ಯವಿರುವ ವೆಂಟಿಲೇಟರ್ ವ್ಯವಸ್ಥೆ, ಆಕ್ಸಿಜನ್ ವ್ಯವಸ್ಥೆ ಮತ್ತು ಬೆಡ್ಗಳನ್ನು ಸಹ ಕನಿಷ್ಟವೆಂದರೂ 30-40 ಪಟ್ಟು ಹೆಚ್ಚಿಸಬೇಕು. ರಾಜ್ಯ, ಕೇಂದ್ರಗಳಲ್ಲಿ ಲಭ್ಯವಿಲ್ಲದಿದ್ದರೆ, ಲಭ್ಯವಿರುವ ದೇಶಗಳಿಂದ ಆಮದು ಮಾಡಿಕೊಳ್ಳಬೇಕು. ಇವುಗಳನ್ನು ಮುಂದಿನ 4-5 ದಿನಗಳಲ್ಲಿ ಮಾಡಿ ಮುಗಿಸಬೇಕು. ಅದುವರೆಗೆ ನಮ್ಮಲ್ಲಿರುವ ವೆಂಟಿಲೇಟರ್ಗಳು, ಆಕ್ಸಿಜನ್ ಸಿಲಿಂಡರ್ಗಳು, ಅವುಗಳಿಗೆ ಪೂರಕವಾದ ಉಪಕರಣಗಳನ್ನು ಸರ್ವ ಸಮರ್ಥವಾಗಿ ಬಳಕೆ ಮಾಡಿಕೊಳ್ಳಬೇಕು.
- ರೆಮ್ಡಿಸಿವಿರ್ ಸೇರಿದಂತೆ ಎಲ್ಲಾ ಜೀವ ರಕ್ಷಕ ಔಷಧಗಳನ್ನು ಕೇಂದ್ರದಿಂದ ಒತ್ತಾಯ ಮಾಡಿ ಪಡೆದುಕೊಳ್ಳಬೇಕು. ಇಡೀ ಜಗತ್ತಿನಲ್ಲಿಯೇ ಅತಿ ಹೆಚ್ಚು ಔಷಧಗಳ ಉತ್ಪಾದನೆ ನಮ್ಮ ದೇಶದಲ್ಲಿಯೇ ಆಗುತ್ತದೆ. ಕಳೆದ ಕೆಲವು ತಿಂಗಳುಗಳಲ್ಲಿ ಕೋವಿಡ್ ಸಮಸ್ಯೆ ಭೀಕರತೆ ತಲುಪಿರುವಾಗಲೇ ದೇಶ 11 ಲಕ್ಷ ರೆಮ್ಡಿಸಿವಿಯರ್ ಲಸಿಕೆಗಳನ್ನು ರಫ್ತು ಮಾಡಿದೆ. ನಿರ್ಲಕ್ಷ್ಯದ ಪರಮಾವಧಿ ಇದು. ಕೂಡಲೇ ರಫ್ತನ್ನು ನಿಲ್ಲಿಸಿ, ಉತ್ಪಾದನೆಯನ್ನು ಹೆಚ್ಚಿಸುವಂತೆ ಹಾಗೂ ಅಗತ್ಯವಿರುವಷ್ಟು ರೆಮ್ಡಿಸಿವಿರ್ ಔಷಧಗಳನ್ನು ಒದಗಿಸುವಂತೆ ಕೇಂದ್ರವನ್ನು ಆಗ್ರಹಿಸಿ, ಲಸಿಕೆಗಳನ್ನು ಪಡೆದು ಚಿಕಿತ್ಸೆ ನೀಡಬೇಕು.
- ರಾಜ್ಯದಲ್ಲಿ ಪ್ರತಿದಿನ ಎಷ್ಟು ಆಕ್ಸಿಜನ್ ವ್ಯವಸ್ಥೆಯುಳ್ಳ ಬೆಡ್ಗಳನ್ನು ಹೆಚ್ಚಿಸಲಾಯಿತು? ಎಷ್ಟು ವೆಂಟಿಲೇಟರ್ ವ್ಯವಸ್ಥೆಯುಳ್ಳ ಹಾಸಿಗೆಗಳನ್ನು ಹೆಚ್ಚಿಸಲಾಯಿತು? ಎಂದು ಪ್ರತಿದಿನ ಪ್ರಕಟಣೆ ಹೊರಡಿಸಬೆಕು.
- ಪ್ರಸ್ತುತ ಮಾಧ್ಯಮಗಳ ಗಮನವೆಲ್ಲಾ ಬೆಂಗಳೂರನ್ನು ಕೇಂದ್ರೀಕರಿಸಲಾಗಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲೂ ಪರಿಸ್ಥಿತಿ ಭೀಕರವಾಗುತ್ತಿದೆ. ಹೀಗಾಗಿ ಪ್ರತಿ ಜಿಲ್ಲೆ, ತಾಲ್ಲೂಕುಗಳಲ್ಲೂ ಅಗತ್ಯವಿರುವ ವ್ಯವಸ್ಥೆಯನ್ನು ಮಾಡಬೇಕು. ಏನು ಮಾಡಲಾಗಿದೆ ಎಂದು ಪ್ರಕಟಣೆಗಳನ್ನು ಹೊರಡಿಸಿ, ಜನರಲ್ಲಿ ಧೈರ್ಯ ಹುಟ್ಟಿಸಬೇಕು.
- ರಾಜ್ಯದಲ್ಲಿ ಅನೇಕ ಜೀವ ರಕ್ಷಕ ಔಷಧಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿಗಳು ಬರುತ್ತಿವೆ. ಈ ಕುರಿತಂತೆ ಔಷಧ ನಿಯಂತ್ರಣ ಮಂಡಳಿ, ಪೊಲೀಸರು ನಿರಂತರ ದಾಳಿಗಳನ್ನು ನಡೆಸಿ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.
- ಹಾಸನ ಮುಂತಾದ ಜಿಲ್ಲಾ ಕೇಂದ್ರಗಳಲ್ಲಿರುವ ಖಾಸಗಿ ಆಸ್ಪತ್ರೆಗಳು ಪ್ರತಿ ರೋಗಿಯಿಂದ ದಿನಕ್ಕೆ 40-50 ಸಾವಿರ ರೂಪಾಯಿಗಳನ್ನು ವಸೂಲಿ ಮಾಡುತ್ತಿರುವ ದೂರುಗಳು ಬರುತ್ತಿವೆ. ಸರ್ಕಾರ ಈ ಕುರಿತು ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಬೇಕು. ಅವುಗಳನ್ನು ಪಾಲಿಸದವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು.
- ಕೋವಿಡ್ ಸೋಂಕು ದೇಶಕ್ಕೆ ಬಂದು 15 ತಿಂಗಳುಗಳಾದರೂ ಸಹ ರೋಗದ ಕುರಿತು, ಚಿಕಿತ್ಸೆಯ ಕುರಿತು, ಔಷಧಗಳ ಕುರಿತು, ಲಸಿಕೆಗಳ ಕುರಿತು ಸ್ಪಷ್ಟವಾದ ವೈಜ್ಞಾನಿಕ ಮಾರ್ಗಸೂಚಿಗಳನ್ನು ಹೊರಡಿಸಿಲ್ಲ. ಈ ಕೂಡಲೆ ಮಾರ್ಗಸೂಚಿಗಳನ್ನು ಹೊರಡಿಸಿ, ಅವು ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಕೋವಿಡ್ ಸೋಂಕಿತರಿಗೆ ಈ ಸೋಂಕು ತಗಲುವ ಮೊದಲೆ ಸಕ್ಕರೆ ಖಾಯಿಲೆ, ರಕ್ತದೊತ್ತಡ, ಥೈರಾಯ್ಡ್ ಸಮಸ್ಯೆ, ಹೃದಯ, ಕಿಡ್ನಿ, ಲಿವರ್, ಮೆದುಳು ಸಮಸ್ಯೆಗಳಿದ್ದರೆ ಅವುಗಳಿಗೆ ನಿಯಮಿತವಾಗಿ ನೀಡಲಾಗುವ ಔಷಧಗಳನ್ನು ನೀಡುವುದರ ಜೊತೆಯಲ್ಲಿಯೇ ಕೊರೊನಾಗೆ ಚಿಕಿತ್ಸೆ ನೀಡಬೇಕು. ಅನೇಕ ರೋಗಿಗಳಿಗೆ ಈ ಔಷಧಗಳನ್ನು ನೀಡದೆ ಬರೀ ಕೊರೊನಾ ವೈರಸ್‌ಗೆ ಮಾತ್ರ ಚಿಕಿತ್ಸೆ ನೀಡಲಾರಂಭಿಸಿರುವುದರಿಂದ ರೋಗಿಗಳು ಮರಣ ಹೊಂದುತ್ತಿದ್ದಾರೆಂದು ದೂರುಗಳು ಬರುತ್ತಿವೆ. ಈ ಕೂಡಲೇ ಈ ಅವ್ಯವಸ್ಥೆ ತಪ್ಪಿಸಬೇಕು.
- ಕೋವಿಡ್ ಸೋಂಕಿಗೆ ನೀಡಲಾಗುತ್ತಿರುವ ಲಸಿಕೆಗಳ ವಿಚಾರದಲ್ಲಿಯೂ ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಜನರಿಗೆ ದ್ರೋಹ ಮಾಡುತ್ತಿವೆ. ತಜ್ಞರ ಸಲಹೆ ಮೇರೆಗೆ ಅರ್ಹರಾಗಿರುವ ಎಲ್ಲಾ ವಯೋಮಾನದವರಿಗೂ ಸಹ ಉಚಿತವಾಗಿ ಲಸಿಕೆಗಳನ್ನು ನೀಡಬೇಕು.
- ಈ ದೇಶದಲ್ಲಿ ಕಳೆದ 70 ವರ್ಷಗಳಿಂದ ಸಿಡುಬು, ದಡಾರ, ಪೋಲಿಯೊ ಮುಂತಾದ ಲಸಿಕೆಗಳನ್ನು ಉಚಿತವಾಗಿ, ಸಾರ್ವಜನಿಕ ಆಂದೋಲನಗಳ ಮೂಲಕ ನೀಡಿ ಆ ರೋಗಗಳನ್ನು ನಿವಾರಿಸಲಾಗಿದೆ. ಆದರೆ ಕೋವಿಡ್ ವಿಚಾರದಲ್ಲಿ ಮೋದಿ ಸರ್ಕಾರವು ಜನರಿಂದ ಹಣ ಸಂಗ್ರಹಿಸುವ ಮೂಲಕ ದೇಶದ ಉದಾತ್ತ ಪರಂಪರೆಯನ್ನು ಮುರಿದು ಜನದ್ರೋಹಿ, ಜನಪೀಡಕÀ ಪರಂಪರೆಯನ್ನು ಪ್ರಾರಂಭಿಸುತ್ತಿದೆ. ಕೋವಿಡ್ ವ್ಯಾಪಿಸಲು ಸ್ವತಃ ತಾನೇ ಕಾರಣವಾಗಿದ್ದರೂ ಕೇಂದ್ರವು ಲಸಿಕೆಗೆ ಅಂಗಡಿಯಲ್ಲಿ ಬೆಲೆ ನಿಗದಿ ಪಡಿಸಿದಂತೆ 400-600 ರೂಗಳನ್ನು ನಿಗಧಿಪಡಿಸುತ್ತಿದೆ. ಸೀರಮ್ ಇನ್ಸ್ಟಿಟ್ಯೂಟ್ನ ಆದಾರ್ ಪೂನಾವಾಲ ಕೇವಲ ರೂ.150/- ಗಳಿಗೆ ಲಸಿಕೆ ಮಾರಾಟ ಮಾಡಿದರೂ ತನಗೆ ಲಾಭವಿದೆಯೆಂದು ಹೇಳುತ್ತಾರಾದರೂ ಈ ಕೆಟ್ಟ ಸಂದರ್ಭದಲ್ಲಿ ಸೂಪರ್ ಪ್ರಾಫಿಟ್ ಮಾಡಿಕೊಳ್ಳಲು ಹೊರಟಿದ್ದಾರೆ. ಕೇಂದ್ರ ಸರ್ಕಾರವು ಅವರ ಲಾಭಕೋರತನಕ್ಕೆ ನೇರವಾಗಿ ಅವಕಾಶ ಮಾಡಿಕೊಡುತ್ತಿದೆ. ಇದು ಭೀಕರ ಕಾರ್ಪೊರೇಟ್ ಭ್ರಷ್ಟಾಚಾರವಲ್ಲದೇ ಬೇರೇನೂ ಅಲ್ಲ. ರಾಜ್ಯ ಸರ್ಕಾರ ಕನಿಷ್ಟ 10 ಕೋಟಿಯಷ್ಟು ಲಸಿಕೆಗಳನ್ನು, ಪ್ರತಿ ಲಸಿಕೆಗೆ ರೂ.400/-ಗಳನ್ನು ನೀಡಿ ಖರೀದಿಸುತ್ತದೆ ಎಂದರೆ ರೂ.4000 ಕೋಟಿಗಳಷ್ಟು ಜನರ ತೆರಿಗೆಯ ಹಣವನ್ನು ಪಾವತಿಸಿ ಪಡೆಯುತ್ತದೆ ಎಂದು ಅರ್ಥ. ಕೇಂದ್ರ ಸರ್ಕಾರ ತನ್ನ ಬಜೆಟ್ನಲ್ಲಿ ರೂ.35 ಸಾವಿರ ಕೋಟಿಗಳನ್ನು ಲಸಿಕೆ ವಿತರಿಸಲು ವಿನಿಯೋಗಿಸುವುದಾಗಿ ಹೇಳಿತ್ತು. ಅದರಂತೆ ರಾಜ್ಯ ಮತ್ತು ರಾಷ್ಟ್ರದ ಜನರಿಗೆ ಉಚಿತವಾಗಿ ಲಸಿಕೆಗಳನ್ನು ನೀಡಬೇಕು. ರಾಜ್ಯವು ನಯಾ ಪೈಸೆಯನ್ನು ನೀಡದೆ ಲಸಿಕೆಗಳನ್ನು ಪಡೆದುಕೊಳ್ಳಬೇಕು. ಇದಕ್ಕಾಗಿ ರಾಜ್ಯದ ಸಂಸದರು ಪ್ರಧಾನಿಗಳನ್ನು ಒತ್ತಾಯಿಸಬೇಕು.
ರಾಜ್ಯದಿಂದ ರೂ.2.5 ಲಕ್ಷ ಕೋಟಿಗಳಿಗೂ ಹೆಚ್ಚು ತೆರಿಗೆ ಸಂಗ್ರಹಿಸುವ ಕೇಂದ್ರವು ಈ ವರ್ಷ ರಾಜ್ಯಕ್ಕೆ ತೆರಿಗೆ ಹಂಚಿಕೆ ಮಾಡಿರುವುದು ಕೇವಲ ರೂ.21,694 ಕೋಟಿಗಳು ಮಾತ್ರ. ಕೇಂದ್ರ ಸರ್ಕಾರದ ನೀತಿಗಳಿಂದ ರಾಜ್ಯ ನಿರಂತರವಾಗಿ ಬಸವಳಿದು ಹೋಗುತ್ತಿದೆ. ಇಂತಹ ಸಂದರ್ಭದಲ್ಲಿ ಲಸಿಕೆಗಳಿಗೆ ಹಣ ಪಡೆಯುವುದನ್ನು ಸರ್ಕಾರ, ಮುಖ್ಯಮಂತ್ರಿಗಳು, ಸಂಸದರು ಬಾಯಿ ಮುಚ್ಚಿಕೊಂಡಿರುವುದನ್ನು ಸಹಿಸಲಾಗುವುದಿಲ್ಲ. ನಿಮ್ಮ ಮೌನದಿಂದಲೆ ರಾಜ್ಯ ದಿವಾಳಿಯಾಗುತ್ತಿದೆ. ಆದ್ದರಿಂದ ಈಗಲಾದರೂ ಧ್ವನಿ ಎತ್ತರಿಸಿ, ಪ್ರಶ್ನಿಸಿ, ಪ್ರತಿಭಟಿಸಿ, ಲಸಿಕೆಗಳನ್ನು ಉಚಿತವಾಗಿ ಪಡೆದು ಆಂದೋಲನದ ಮಾದರಿಯಲ್ಲಿ ಲಸಿಕೆ ನೀಡಬೇಕು.
ಜವಾಬ್ದಾರಿಯುತ ವಿರೋಧ ಪಕ್ಷವಾದ ನಾವು ಸರ್ಕಾರ ಮಾಡುವ ಜನಪರ ಕೆಲಸವನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತೇವೆಯೇ ಹೊರತು ಜನದ್ರೋಹಿ ಕೆಲಸವನ್ನು ಸಹಿಸುವುದಿಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಬಯಸುತ್ತೇನೆ. ಆದ್ದರಿಂದ ಈ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ರಾಜ್ಯದಲ್ಲಿ ಯಾರೊಬ್ಬರೂ ಅನ್ಯಾಯವಾಗಿ ಮರಣ ಹೊಂದದಂತೆ ಎಚ್ಚರಿಕೆ ವಹಿಸಿ, ಕೊರೊನಾ ಮಹಾಮಾರಿಯನ್ನು ಎದುರಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಈ ಪತ್ರದಲ್ಲಿ ಬರೆದುಕೊಂಡಿದ್ದಾರೆ.