ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಈವರೆಗೆ 12,062 ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 11 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 12,062ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯದಲ್ಲಿ ಪ್ರತೀ ದಿನ ಸಾವಿರಕ್ಕೂ ಹೆಚ್ಚು ಸೋಂಕುಗಳು ದೃಢಪಡುತ್ತಿದ್ದರೆ ಭಾನುವಾರದ ಅಂಕಿ ಅಂಶ ಗಮನಿಸಿದರೆ ಈ ಅಬ್ಬರ ಕಡಿಮೆಯಾಗುತ್ತಿದೆ ಎಂಬ ಆಶಾವಾದ ವ್ಯಕ್ತವಾಗಿದೆ. ಭಾನುವಾರ 911 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 9,16,256ಕ್ಕೆ ಏರಿಕೆಯಾಗಿದೆ. ಭಾನುವಾರ ಬೆಂಗಳೂರಿನಲ್ಲಿ 542 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಇದೇ ವೇಳೆ, ಭಾನುವಾರ 1214 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 13,080 ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ 209 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.