ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತಿ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಇದೀಗ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ಡಿ. 22ರಂದು ಮೊದಲ ಹಂತದ ಮತದಾನವಾದರೆ ಭಾನುವಾರ 109 ತಾಲೂಕುಗಳಲ್ಲಿ ಎರಡನೇ ಹಂತದ ಮತದಾನ ನಡೆದಿದೆ. ಶೇ. 80ಕ್ಕಿಂತ ಹೆಚ್ಚು ಮತದಾನವಾಗಿದ್ದು, ಡಿ. 30ರಂದು ಪ್ರಕಟವಾಗುವ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.
ರಾಜ್ಯದಲ್ಲಿ ಒಟ್ಟು 6,004 ಗ್ರಾಮ ಪಂಚಾಯತಿಗಳಿದ್ದು, 92,121 ಸದಸ್ಯರ ಆಯ್ಕೆಗೆ ಅವಕಾಶ ಇದೆ. ಡಿ. 22ರಂದು ಮೊದಲ ಹಂತದ ಚುನಾವಣೆಯಲ್ಲಿ 3,019 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆದಿದೆ. ಭಾನುವಾರ 2ನೇ ಹಂತದಲ್ಲಿ 2,709 ಗ್ರಾಮ ಪಂಚಾಯಿತಿಗಳ 39,378 ಸದಸ್ಯರ ಆಯ್ಕೆಗೆ ಮತದಾನ ನಡೆಯಿತು.