ಬೆಂಗಳೂರು: ಕಾಂಗ್ರೆಸ್ ಪಕ್ಷವು ದೇಶದಲ್ಲಿ ಅರಾಜಕತೆ ಹುಟ್ಟು ಹಾಕಲು, ಪರಿಸ್ಥಿತಿಯ ದುರ್ಲಾಭ ಪಡೆಯಲು, ಪ್ರಧಾನಿಗ ನರೇಂದ್ರ ಮೋದಿ ಮತ್ತು ದೇಶದ ಅವಹೇಳನಕ್ಕೆ ಒಂದು ಷಡ್ಯಂತ್ರ ನಡೆಸಿ ‘ಟೂಲ್ಕಿಟ್’ ಮಾಡಿದೆ. ಕಾಂಗ್ರೆಸ್ ಪಕ್ಷ ಇದನ್ನು ನಕಲಿ ಟೂಲ್ಕಿಟ್ ಎನ್ನುತ್ತಿದೆ. ಆದರೆ, ಅದು ನಕಲಿ ಆಗಿದ್ದರೆ ಟೂಲ್ಕಿಟ್ನಲ್ಲಿ ಇದ್ದ ರೀತಿಯಲ್ಲೇ ಕಾಂಗ್ರೆಸ್ ಕ್ರಿಯೆ ಮತ್ತು ಪ್ರತಿಕ್ರಿಯೆ ಕೇವಲ ಕಾಕತಾಳೀಯವೇ ಅಥವಾ ಟೂಲ್ಕಿಟ್ ಮಾದರಿಯಲ್ಲೇ ಅವಹೇಳನ ಮತ್ತು ಅಪಪ್ರಚಾರ ನಡೆಯಿತೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಪ್ರಶ್ನಿಸಿದ್ದಾರೆ. ಇದು ಕೇವಲ ಕಾಕತಾಳೀಯ ಅಲ್ಲ ಎಂಬುದನ್ನು ಸಾಂದರ್ಭಿಕ ಸಾಕ್ಷಿಗಳು ಪುಷ್ಟೀಕರಿಸುತ್ತವೆ. ಇದು ಪೂರ್ವಯೋಜಿತ ಕುಕೃತ್ಯ ಎಂಬುದು ಸಾಬೀತಾಗುವಂತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರಾಖಂಡದ ಕುಂಭಮೇಳದ ಕುರಿತು “ಸೂಪರ್ ಸ್ಪ್ರೆಡರ್” ಎಂದು ಬಿಂಬಿಸಲು ಟೂಲ್ಕಿಟ್ನಲ್ಲಿ ಸೂಚಿಸಿದಂತೆ ಕಾಂಗ್ರೆಸ್ ಮುಖಂಡರು ಮತ್ತು ಬೆಂಬಲಿಗರು, ಕೆಲವು ಮಾಧ್ಯಮಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅದೇ ಶಬ್ದವನ್ನು ಪ್ರಯೋಗಿಸಿದ್ದಾರೆ. ಕೋವಿಡ್ ಪ್ರಕರಣವನ್ನು ಗಮನಿಸಿದರೆ ಮಹಾರಾಷ್ಟ್ರ ಗರಿಷ್ಠ ಸಂಖ್ಯೆಯನ್ನು ಹೊಂದಿದೆ. ಕೇರಳ ಎರಡನೇ ಸ್ಥಾನದಲ್ಲಿದೆ. 2 ಲಕ್ಷಕ್ಕೂ ಹೆಚ್ಚು ಜನ ಕುಂಭ ಮೇಳದಲ್ಲಿ ಭಾಗವಹಿಸಿದವರನ್ನು ಪರೀಕ್ಷೆ ಮಾಡಿದರೆ, 1,700 ಜನರಷ್ಟೇ ಪಾಸಿಟಿವ್ ಆಗಿದ್ದಾರೆ ಎಂದು ವಿವರಿಸಿದರು.
ದೇಶದಲ್ಲಿ ಸಾವುಗಳ ವೈಭವೀಕರಣದ ಸೂಚನೆಯೂ ಪಾಲನೆಯಾಗಿದೆ. ರೋಗಿಗಳಲ್ಲಿ ಹಾಹಾಕಾರ ಹಾಗೂ ಆತಂಕ ಸೃಷ್ಟಿಸುವ ಪ್ರಯತ್ನವೂ ನಡೆದಿದೆ. ಬೆಡ್ ಬ್ಲಾಕಿಂಗ್ಗೂ ಕಾಂಗ್ರೆಸ್ ಪಕ್ಷದವರು ನೆರವಾಗಿದ್ದಾರೆ. ಪ್ರಧಾನಿಯವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಸೂಚನೆಯಂತೆ ಮೋದಿ ಸ್ಟ್ರೀನ್, ಇಂಡಿಯನ್ ಸ್ಟ್ರೀನ್ ಪದ ಬಳಕೆ ಮಾಡಲಾಗಿದೆ. ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಟ್ವೀಟ್ ವೇಳೆ ಇದೇ ಪದ ಬಳಸಿದ್ದು ಕಾಕತಾಳೀಯವೇ ಎಂದು ಪ್ರಶ್ನಿಸಿದರು. ಇವರಿಗೆ ಚೀನಾ ವೈರಸ್ ಎನ್ನಲು ಧೈರ್ಯ ಇಲ್ಲ ಎಂದೂ ಆಕ್ಷೇಪ ವ್ಯಕ್ತಪಡಿಸಿದರು.
“ಶ್ರೀ ಅಮಿತ್ ಶಾ ನಾಪತ್ತೆ” ಎಂಬುದಾಗಿ ಪದ ಬಳಸಲು ಸೂಚನೆ ಇತ್ತು. ಅದನ್ನೇ ಟ್ವೀಟ್ನಲ್ಲಿ ಅನುಸರಿಸಲಾಯಿತು. ದೇಶದ ಬಗ್ಗೆ ಅಪಪ್ರಚಾರಕ್ಕೆ ಸಾಧ್ಯ ಇರುವ ಎಲ್ಲಾ ಪ್ರಯತ್ನ ನಡೆಯಿತು. ದೇಶಕ್ಕೆ ಅಪಮಾನ ಮಾಡಲು ಟೂಲ್ಕಿಟ್ನಲ್ಲಿ ಇರುವಂತೆಯೇ ಎಲ್ಲವೂ ನಡೆದಿದೆ. ಎಲ್ಲಾ ಘಟನೆಗಳು ಕಾಕತಾಳೀಯ ಆಗಲಾರದು. ವೆಂಟಿಲೇಟರ್ ಬಾಕ್ಸ್ ತೆರೆಯದೆ ವೆಂಟಿಲೇಟರ್ ಕಳಪೆ ಎಂದು ಆರೋಪಿಸಲಾಯಿತು. ನಾಲ್ಕು ತಿಂಗಳು ಬಾಕ್ಸ್ ಬಿಚ್ಚದೆ ಆರೋಪ ಮಾಡಲಾಯಿತು. ಪಿಎಂ ಕೇರ್ಸ್ ನಿಧಿ ಕೊಟ್ಟವರನ್ನು ಟ್ಯಾಗ್ ಮಾಡಲಾಯಿತು ಎಂದು ಅವರು ಆರೋಪಿಸಿದರು.
ಸೆಂಟ್ರಲ್ ವಿಸ್ಟಾ ಯೋಜನೆ ಮತ್ತು ಪಿಎಂ ಕೇರ್ ಟ್ಯಾಗ್ ಮಾಡಿ “ಮೋದಿ ಹೌಸ್” ಎಂದು ಟೀಕಿಸಲಾಯಿತು. ಇವೆಲ್ಲವೂ ಕಾಕತಾಳೀಯ ಅಲ್ಲ ಎಂಬುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟ. ಕಾಂಗ್ರೆಸ್ ಪದಾಧಿಕಾರಿ ಸಂಯುಕ್ತ ಬಸು, ಟೂಲ್ಕಿಟ್ ಮೂಲಕ ಉತ್ತಮ ಕೆಲಸ ನಡೆದಿದೆ ಎಂದು ಸ್ಪಷ್ಟಪಡಿಸಿದ್ದರು. ಇದೆಲ್ಲವೂ ಪೂರ್ವಯೋಜಿತ ಎಂಬುದನ್ನು ಸ್ಪಷ್ಟಪಡಿಸುತ್ತದೆ. ದೇಶವನ್ನು ಕೆಳಮಟ್ಟದಲ್ಲಿ ತೋರಿಸುವ ಕಾಂಗ್ರೆಸ್ನ ಪ್ರಯತ್ನ ರಾಜಕೀಯ ಅಂತ್ಯಕಾಲ ಎಂದು ಸಿ.ಟಿ.ರವಿ ಆಕ್ರೋಶ ಹೊರಹಾಕಿದರು.
ಭಾರತದ ವಿರುದ್ಧ ಕಾಂಗ್ರೆಸ್ ಷಡ್ಯಂತ್ರ ರೂಪಿಸಿದ್ದರಿಂದ ಜನರ ಸಂಕಷ್ಟ ಹೆಚ್ಚಾಗಿದೆ. ಬೆಡ್ ಬ್ಲಾಕಿಂಗ್ ಮೂಲಕ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಮುಂದಾಯಿತು. ದೇಶದ ವಿಜ್ಞಾನಿಗಳು, ವೈದ್ಯರ ಮೇಲೆ ಕಾಂಗ್ರೆಸ್ಸಿಗರಿಗೆ ನಂಬಿಕೆಯಿಲ್ಲ. ಕಾಂಗ್ರೆಸ್ಸಿನ ಅಧಿನಾಯಕಿ ವಿದೇಶಕ್ಕೆ ಚಿಕಿತ್ಸೆಗೆ ಹೋಗುತ್ತಾರೆ. ಐದು ದಶಕಕ್ಕೂ ಹೆಚ್ಚು ಕಾಲ ಆಳ್ವಿಕೆ ನಡೆಸಿದ ಕಾಂಗ್ರೆಸ್ ಮುಖಂಡರಿಗೆ ವೈದ್ಯಕೀಯ ಕ್ಷೇತ್ರದಲ್ಲಿನ ಕೊರತೆಗಳಿಗೆ ಬಿಜೆಪಿಯವರನ್ನು ಟೀಕಿಸಲು ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಅಧಿಕಾರದ ಹಪಾಹಪಿತನ ಮತ್ತು ಅರಾಜಕತೆ ಸೃಷ್ಟಿಗೆ ಪ್ರಯತ್ನ ಖಂಡನೀಯ ಎಂದರು.
ದೇಶದಲ್ಲಿ ಸುಮಾರು 2.95 ಲಕ್ಷ ಜನರು ನಿಧನರಾಗಿರುವುದು ದುರದೃಷ್ಟಕರ. 2.27 ಕೋಟಿಗೂ ಅಧಿಕ ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಅಪಪ್ರಚಾರ ನಡೆಸುವ ವೇಳೆ ಅಮೆರಿಕಾ, ಯುರೋಪ್ ದೇಶಗಳ ಸಾವಿನ ಸಂಖ್ಯೆಯನ್ನು ಮರೆಮಾಚಲಾಗಿದೆ ಎಂದು ಅವರು ವಿವರಿಸಿದರು.
ಮಾರ್ಚ್ 17ರಂದು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದ ಪ್ರಧಾನಿಯವರು ಮುಂಜಾಗ್ರತಾ ಕ್ರಮಗಳ ಕುರಿತು ಮುನ್ಸೂಚನೆ ನೀಡಿದ್ದರು. ವರ್ಷದೊಳಗೇ ಎರಡು ಲಸಿಕೆ ಕಂಡುಹಿಡಿಯಲಾಯಿತು. ಆಗ ವಿಜ್ಞಾನಿಗಳನ್ನು ಅವಹೇಳನ ಮಾಡಿ “ಮೋದಿ ವ್ಯಾಕ್ಸಿನ್” ಎಂದು ಲೇವಡಿ ಮಾಡಿದ ಕಾಂಗ್ರೆಸ್ಸಿಗರು, ವಿದೇಶಿ ಮಾನಸಿಕತೆಯ ಹಿನ್ನೆಲೆ ಉಳ್ಳವರಾಗಿದ್ದಾರೆ. ಅಲ್ಲದೇ, ಈಗ ವ್ಯಾಕ್ಸಿನ್ಗಾಗಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ, ಅದು ಅವರ ಇಬ್ಬಂದಿತನಕ್ಕೆ ಸಾಕ್ಷಿ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡರು ನಾಟಕ ಆಡುವುದನ್ನು ಬಿಡಬೇಕು. ಲಸಿಕೆ ಬಗ್ಗೆ ಜನರಲ್ಲಿ ಅನುಮಾನ ಮೂಡಿಸಿದ ಕಾಂಗ್ರೆಸ್ಸಿಗರು ತಾವು ಮಾಡಿದ ಅಪಪ್ರಚಾರಕ್ಕೆ ಸಂಬಂಧಿಸಿ ದೇಶದ ಜನರ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು.
ಡಿಸೆಂಬರ್ ಅಂತ್ಯಕ್ಕೆ 76 ಕೋಟಿ ಕೋವಿಶೀಲ್ಡ್, 68 ಕೋಟಿ ಕೋವ್ಯಾಕ್ಸಿನ್, 25.72 ಕೋಟಿ ಸ್ಫುಟ್ನಿಕ್ ಸೇರಿದಂತೆ ವಿವಿಧ ಕಂಪೆನಿಗಳ 259 ಕೋಟಿ ಲಸಿಕೆ ಉತ್ಪಾದನೆ ಗುರಿ ಇದೆ. ಮೇ ಅಂತ್ಯಕ್ಕೆ ಸುಮಾರು 8.30 ಕೋಟಿ ಲಸಿಕೆ, ಜೂನ್ ಅಂತ್ಯಕ್ಕೆ ಸುಮಾರು 10 ಕೋಟಿ, ಜುಲೈ ಅಂತ್ಯಕ್ಕೆ ಸುಮಾರು 17 ಕೋಟಿ, ಆಗಸ್ಟ್ ಅಂತ್ಯಕ್ಕೆ ಸುಮಾರು 19.10 ಕೋಟಿ- ಹೀಗೆ ಲಸಿಕೆ ಉತ್ಪಾದನೆ ಹೆಚ್ಚಲಿದೆ ಎಂದು ವಿವರ ನೀಡಿದರು.
ಭಾರತವು ಜಗತ್ತಿನ 95 ದೇಶಗಳಿಗೆ ಲಸಿಕೆ ಸಹಾಯ ಮಾಡಿದ್ದರಿಂದ ದೇಶಕ್ಕೆ 83 ದೇಶಗಳಿಂದ ಆಕ್ಸಿಜನ್, ಕಾನ್ಸನ್ಟ್ರೇಟರ್ ಸೇರಿ ವೈದ್ಯಕೀಯ ನೆರವು ಹರಿದುಬಂದಿದೆ. ಆದರೆ, ಅಪಪ್ರಚಾರ ಮಾಡಿದವರು ಗುಟ್ಟಾಗಿ ವ್ಯಾಕ್ಸಿನ್ ಹಾಕಿಸಿಕೊಂಡು ಅಪಪ್ರಚಾರ ಮಾಡಿಲ್ಲ ಎಂದು ಹೇಳಿರುವುದು ಅವರ ಗೋಸುಂಬೆತನಕ್ಕೆ ಸಾಕ್ಷಿ ಎಂದರು.
ಪಿಎಂ ಕೇರ್ಗೆ ಒಂದು ರೂಪಾಯಿಯನ್ನೂ ಕೊಡದ ಕಾಂಗ್ರೆಸ್ನಿಂದ ಅಪಪ್ರಚಾರದಿಂದ ಪ್ರಚಾರ ಪಡೆಯುತ್ತಿದೆ. ಎತ್ತಿನ ಗಾಡಿಯಿಂದ ರಾಜಕೀಯ ಆರಂಭಿಸಿದ ಕಾಂಗ್ರೆಸ್ನ ಕೆಲವು ಮುಖಂಡರು ಈಗ ಖಾಸಗಿ ಜೆಟ್ನಲ್ಲಿ ಹಾರಾಟ ನಡೆಸುವಷ್ಟು ಶ್ರೀಮಂತರಾಗಿದ್ದಾರೆ. ಆದರೆ, ಸ್ವಂತ ನೆಲೆಯಲ್ಲಿ ದೇಶಕ್ಕೆ ಮತ್ತು ದೇಶದ ಜನತೆಗೆ ಸಹಾಯ ಮಾಡಿಲ್ಲ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಆಕ್ಸಿಜನ್ ಕೊರತೆ ಯಾವತ್ತೂ ಕಾಡದಂತೆ ಉತ್ಪಾದನೆ- ವಿತರಣಾ ಜಾಲವನ್ನು ಪ್ರಧಾನಿಯವರು ಬಲಪಡಿಸಿದ್ದಾರೆ. ಕೋವಿಡ್ ಸಂಕಷ್ಟದ ವಿಚಾರ ಮಾತ್ರವಲ್ಲದೆ, ಅಪಪ್ರಚಾರದ ವಿರುದ್ಧ ನಾವು ಗೆಲ್ಲಲಿದ್ದೇವೆ. ಬಿಜೆಪಿ ಪಕ್ಷದ ನೆಲೆಯಲ್ಲಿ “ಸೇವಾ ಹೀ ಸಂಘಟನ್” ಮೂಲಕ ಆಹಾರ ವಿತರಣೆ, ಆಕ್ಸಿಜನ್ ನೆರವು, ಬೆಡ್ ಒದಗಿಸುವುದು ಮತ್ತಿತರ ಮಾನವೀಯ ನೆಲೆಯಲ್ಲಿ ಕೆಲಸ ಮಾಡಿದೆ. ಆದರೆ, ಕಾಂಗ್ರೆಸ್ ಮುಖಂಡರು ಟೂಲ್ಕಿಟ್ ಮೂಲಕ ಅಪಪ್ರಚಾರ ಮಾಡಿದ್ದಾರೆ. ಭಗವಂತನೂ ಕ್ಷಮಿಸಲಾರದಂಥ ಘೋರ ಅಪರಾಧವನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಜನರ ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮ “ಇಕೋ ಸಿಸ್ಟಮ್”ನ ಆದ್ಯತೆಯಾಗಿತ್ತು. ಟೂಲ್ ಕಿಟ್ ಕಾಂಗ್ರೆಸ್ನ ಆದ್ಯತೆಯಾಗಿತ್ತು. ಸರಕಾರದ ಕಾರ್ಯಗಳನ್ನು ವಿಫಲಗೊಳಿಸುವುದು, ಸಾವಿನ ವಿಜೃಂಭಣೆ ಕಡೆ ಕಾಂಗ್ರೆಸ್ ಪಕ್ಷ ಚಿಂತನೆ ನಡೆಸಿತು. ಸಾಂದರ್ಭಿಕ ಸಾಕ್ಷಿಗಳು ಮತ್ತು ಕಾಂಗ್ರೆಸ್ ನಡವಳಿಕೆಗಳು ಟೂಲ್ಕಿಟ್ನ ನಮ್ಮ ಆರೋಪವನ್ನು ಪುಷ್ಟೀಕರಿಸುವಂತಿದೆ ಎಂದರು.
ಕುಂಭಮೇಳವನ್ನು ಸೂಪರ್ ಸ್ಪ್ರೆಡರ್ ಎಂದು ಗುರಿ ಮಾಡಿದವರು ಹಿಂದೂಗಳ ವಿರುದ್ಧದ ತಮ್ಮ ಮಾನಸಿಕತೆಯನ್ನು ಪ್ರತಿಬಿಂಬಿಸಿದ್ದಾರೆ. ಹೈದರಾಬಾದ್, ಪಶ್ಚಿಮ ಬಂಗಾಳದಲ್ಲಿ ದೊಡ್ಡ ಪ್ರಮಾಣದಲ್ಲಿ ರಂಜಾನ್ ಆಚರಣೆ ನಡೆದುದನ್ನು ಸೂಪರ್ ಸ್ಪ್ರೆಡರ್ ಎಂದು ಕಾಂಗ್ರೆಸ್ಸಿಗರು ಕರೆದಿಲ್ಲವೇಕೆ ಎಂದು ರವಿ ಪ್ರಶ್ನಿಸಿದರು.
ಕಚ್ಚಾವಸ್ತು ಬರಲು ವಿಳಂಬದಿಂದ ಲಸಿಕೆ ಉತ್ಪಾದನೆ ಸ್ವಲ್ಪ ತಡವಾಗಿದೆ. ಕಾಂಗ್ರೆಸ್ನ 58 ಜನರು ಸೇರಿ ವಿವಿಧ ವಿರೋಧ ಪಕ್ಷಗಳ ಮುಖಂಡರು ಲಸಿಕೆ ಕುರಿತು ಅಪಪ್ರಚಾರ ಮಾಡಿದ್ದಾರೆ. ಈಗಾಗಲೇ 19 ಕೋಟಿ ಲಸಿಕೆ ವಿತರಣೆಯಾಗಿದೆ. ಲಸಿಕೆ ಹಾಕಿಸಿಕೊಂಡರೆ ಜೀವಭಯ ಇದೆ ಎಂದು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷದವರು ವ್ಯವಸ್ಥಿತ ಪ್ರಚಾರ ನಡೆಸಿದರು. ಆದರೆ, ಪ್ರಧಾನಿಗಳಾದ ಶ್ರೀ ಮೋದಿ ಅವರಿಗೆ ತಮ್ಮ ಪ್ರಾಣ ಮುಖ್ಯವಾಗಿರಲಿಲ್ಲ. ಜನಪ್ರತಿನಧಿಗಳ ಪ್ರಾಣಕ್ಕೆ ಅವರು ಆದ್ಯತೆ ನೀಡಲಿಲ್ಲ. ವೈದ್ಯರು, ಕೋವಿಡ್ ವಾರಿಯರ್ಗಳ ಜೀವ ಪ್ರಮುಖವಾಗಿತ್ತು. ಅದೇ ಕಾರಣಕ್ಕೆ ಅವರು ವಾರಿಯರ್ಗಳಿಗೆ ಪ್ರಥಮ ಆದ್ಯತೆಯಲ್ಲಿ ಲಸಿಕೆ ಕೊಡಿಸಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಜೀವ ಉಳಿಸಿದರು. ಇದರಿಂದಾಗಿ ಈಗ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿ ಸಮಸ್ಯೆ ಅನುಭವಿಸುತ್ತಿಲ್ಲ ಎಂದು ತಿಳಿಸಿದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನ ಪರಿಷತ್ ಸದಸ್ಯರೂ ಆದ ಎನ್.ರವಿಕುಮಾರ್, ಪಕ್ಷದ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರು ಮತ್ತು ರಾಜ್ಯ ವಕ್ತಾರ ಛಲವಾದಿ ನಾರಾಯಣಸ್ವಾಮಿ, ಶಾಸಕರು ಮತ್ತು ರಾಜ್ಯ ವಕ್ತಾರರೂ ಆದ ರಾಜ್ಕುಮಾರ್ ಪಾಟೀಲ ತೇಲ್ಕೂರ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.