ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಿಯಲ್ಲಿ ತೊಡಗಿದ್ದು, ಸ್ಪರ್ಧಾಕಾಂಕ್ಷಿಗಳು ಟಿಜೆಟ್ ಪಡೆಯಲು 2 ಲಕ್ಷ ರೂಪಾಯಿ ಪಾವತಿಸಬೇಕಿದೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಗೆ ಸಜ್ಜಾಗುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಬಯಸಿರುವವರು ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗಿದೆ ಎಂದರು. ನವೆಂಬರ್ 5 ರಿಂದ 15 ರವರೆಗೆ ಅರ್ಜಿ ಹಾಕಬಹುದು. ಅರ್ಜಿಗೆ 5 ಸಾವಿರ ರೂ. ಶುಲ್ಕ ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸುವಾಗ ಸಾಮಾನ್ಯ ವರ್ಗದವರು 2 ಲಕ್ಷ ರೂಪಾಯಿ ಡಿಡಿ, ಕಾಂಗ್ರೆಸ್ ಸದಸ್ಯತ್ವ ವಿವರ ಲಗತ್ತಿಸಬೇಕು. ಪರಿಶಿಷ್ಟ ವರ್ಗದವರಿಗೆ ಶೇ. 50 ರಷ್ಟು ವಿನಾಯಿತಿ ನೀಡಲಾಗಿದೆ. ಈ ಹಣ ಪಕ್ಷದ ಕಟ್ಟಡ ಕಾಮಗಾರಿ ನಿಧಿಗೆ ಜಮೆ ಆಗಲಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
2023 ರ ಚುನಾವಣೆಯಲ್ಲಿ ಹಾಲಿ ಶಾಸಕರ ಸಮೇತ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು. ನಾನು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲು ಈ ಅರ್ಜಿ ಹಾಕಬೇಕು. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದರು.







































































