ಬೆಂಗಳೂರು: ಬಸ್ ಯಾತ್ರೆಗೂ ಮುನ್ನ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಅನಿಶ್ಚಿತ.
ಈ ಕುರಿತಂತೆ ಬೆಂಗಳೂರಿನಲ್ಲಿ ಮಾಹಿತಿ ಹಂಚಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘ಪಕ್ಷದ ಅಭ್ಯರ್ಥಿ ಪಟ್ಟಿ ಪ್ರಕಟಿಸಲು ಒಳ್ಳೆಯ ಮುಹೂರ್ತ ಬೇಕು. ಎಲ್ಲರೂ ಪ್ರತಿ ಜಿಲ್ಲೆಗೆ ಹೋಗಿ ಚರ್ಚೆ ನಡೆಸಿದ್ದಾರೆ. ಒಂದೆರಡು ಜಿಲ್ಲೆಗಳು ಬಾಕಿ ಇವೆ. ನಾನು ಅವರ ಸಲಹೆಗೆ ಕಾಯುತ್ತಿದ್ದೇನೆ. ಅವರು ಸಲಹೆ ಸಲ್ಲಿಸಿದ ತಕ್ಷಣ ಸಭೆ ಮಾಡಿ, ಚರ್ಚಿಸಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಕೇಂದ್ರ ಪರಿಶೀಲನಾ ಸಮಿತಿ ಸದ್ಯದಲ್ಲೇ ಪ್ರಕಟಿಸಲಿದೆ. ಅಭ್ಯರ್ಥಿ ಆಯ್ಕೆ ವಿಚಾರವಾಗಿ ಎಲ್ಲ ಪ್ರಕ್ರಿಯೆ ನಡೆಯುತ್ತಿದೆ. ಕಾರ್ಯಕರ್ತರು, ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಭಿಪ್ರಾಯ ಪಡೆಯಲಾಗುತ್ತಿದೆ. ಅವರು ಎರಡು ಮೂರು ಹೆಸರು ನೀಡುತ್ತಿದ್ದಾರೆ. ಇದರ ಜತೆಗೆ ಪಕ್ಷದ ವತಿಯಿಂದ ಸಮೀಕ್ಷೆ ನಡೆಸಲಾಗುತ್ತಿದೆ. ಅದರಲ್ಲಿ ಜನರ ಅಭಿಪ್ರಾಯ ಪಡೆಯಲಾಗುವುದು ಎಂದ ಡಿಕೆಶಿ, ಪಕ್ಷದಲ್ಲಿ 78 ಲಕ್ಷ ಸದಸ್ಯರಿದ್ದು ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು. ಆದಷ್ಟು ಬೇಗ ಈ ಎಲ್ಲ ಪ್ರಕ್ರಿಯೆ ಮುಗಿಸುತ್ತೇವೆ’ ಎಂದು ತಿಳಿಸಿದರು.
ದೆಹಲಿ ಪ್ರಯಾಣದ ಬಗ್ಗೆ ಸುದ್ದಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಭಾರತ ಜೋಡೋ ಯಾತ್ರೆಯಲ್ಲಿ ಭಾಗವಹಿಸಲು ಅಲ್ಲಿಗೆ ಹೋಗಿ ಹೆಜ್ಜೆ ಹಾಕಬೇಕು ಎಂಬ ಆಸೆ ಇದೆ. ಕರ್ನಾಟಕದಲ್ಲಿ ಯಾತ್ರೆ ಮುಗಿದ ಬಳಿಕ ನಾವು ಎಲ್ಲಿಯೂ ಹೋಗಿ ಭಾಗವಹಿಸಿಲ್ಲ. ಹೀಗಾಗಿ ಅಲ್ಲಿ ಹೋಗಿ ಭಾಗವಹಿಸಬೇಕಿದೆ’ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳನ್ನು ನಾಯಿ ಮರಿಗೆ ಹೋಲಿಕೆ ಮಾಡಿದ್ದಾರೆ ಎಂಬ ವಿಚಾರವಾಗಿ ಕೇಳಿದಾಗ, ‘ಸಿದ್ದರಾಮಯ್ಯ ಸಿಎಂರನ್ನ ನಾಯಿ ಮರಿಗೆ ಹೋಲಿಸಿ ಮಾತನಾಡಿದ್ದು ನನಗೆ ಗೊತ್ತಿಲ್ಲ. ನಮ್ಮ ಮನೆಯಲ್ಲೂ ನಾಯಿ ಇದೆ. ನಾಯಿ ಬಗ್ಗೆ ನನಗೆ ಗೌರವ ಇದೆ. ಕಳ್ಳರನ್ನ ಹಿಡಿಯೋಕೆ ರಕ್ಷಣೆಗೆ ನಾಯಿಬೇಕು. ಕಷ್ಟಕ್ಕೆ ಸುಖಕ್ಕೆ ನಾಯಿ ಬೇಕು. ನಾಯಿ ನಾರಾಯಣ ಅಂತಾರೆ. ನಾಯಿ ನನಗೆ ಬಹಳ ಪ್ರಿಯವಾದ ಪ್ರಾಣಿ. ಸಿದ್ದರಾಮಯ್ಯ ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ’ ಎಂದು ತಿಳಿಸಿದರು.