ಬೆಂಗಳೂರು : ರಾಜ್ಯದಲ್ಲಿ ಇನ್ನೂ ಕೂಡಾ ಕೋವಿಡ್ ವೈರಾಣು ಮರಣ ಮೃದಂಗ ಭಾರಿಸುತ್ತಿದೆ. ನೆರೆಯ ಕೇರಳದಲ್ಲಿ ಸೋಂಕು ತಾಂಡವವಾಡುತ್ತಿದ್ದು ಇದರಿಂದಾಗಿ ಗಡಿ ಸಮೀಪದ ಪ್ರದೇಶಗಳಲ್ಲೂ ತಲ್ಲಣ ಸೃಷ್ಟಿಯಾಗಿದೆ. ಹಾಗಾಗಿ ಪಾಸಿಟಿವಿಟಿ ದರ ಹೆಚ್ಚಿರುವ ಗಡಿ ಜಲ್ಲೆಯಲ್ಲಿ ಕೋವಿಡ್ ಸೋಂಕು ತಡೆ ಸಂಬಂಧದ ಕಠಿಣ ನಿಯಮಗಳಲ್ಲಿ ಯಾವುದೇ ಸಡಿಕೆ ಇಲ್ಲ.
ಕೋವಿಡ್ ಪ್ರಕರಣಗಳು ಹೆಚ್ಚಿರುವ ಎಂಟು ಜಿಲ್ಲೆಗಳಲ್ಲಿ ಮತ್ತೆ ವೀಕೆಂಡ್ ಕರ್ಫ್ಯೂ ಮುಂದುವರೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ.
ರಾಜ್ಯಲ್ಲಿನ ಕೋವಿಡ್ ಮೂರನೇ ಅಲೆ ಆತಂಕ ಹಿನ್ನೆಲೆಯಲ್ಲಿ ಕೋವಿಡ್ ತಾಂತ್ರಿಕ ಸಲಹಾ ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸದ್ಯಕ್ಕೆ ಲಾಕ್ ಡೌನ್ ಅಥವಾ ಯಾವುದೇ ಹೊಸ ನಿಯಮಗಳ ಜಾರಿ ಬೇಡ, ಅಗತ್ಯ ಬಿದ್ದರೆ ವೀಕೆಂಡ್ ಕರ್ಫ್ಯೂ ಜಾರಿಗೊಳಿಸೋಣ ಎಂದರು. ಆದರೆ, ಕರಾವಳಿ ತೀರದ ದಕ್ಷಿಣ ಕನ್ನಡ, ಸಹಿತ ಸೋಂಕಿನ ಪ್ರಮಾಣದಲ್ಲಿ ನಿರೀಕ್ಷೆಯಷ್ಟು ಇಳಿಕೆ ಕಾಣದ ಜಿಲ್ಲೆಗಳಲ್ಲಿ ನಿಯಮ ಸಡಿಲಿಕೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಕೋವಿಡ್ ಪ್ರಕರಣ ಹೆಚ್ಚಿರುವ ಜಿಲ್ಲೆಗಳಲ್ಲಿ ಈಗಾಗಲೇ ರಾತ್ರಿ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿತ್ತು ಅದೇ ನಿಯಮಗಳನ್ನು ಮುಂದಿನ ದಿನಗಳಿಗೂ ಮುಂದುವರೆಸುವಂತೆ ತೀರ್ಮಾನ ಕೈಗೊಳ್ಳಲಾಯಿತು.