ಬೆಂಗಳೂರು: ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರು ತಮ್ಮ ಬಹುಕಾಲದ ಬೇಡಿಕೆಗಳ ಈಡೇರಿಕೆಗಾಗಿ ಮತ್ತೆ ಅಖಾಡಕ್ಕೆ ಧುಮುಕಿದ್ದಾರೆ. ಈ ಬಾರಿ ವಿಧಾನಸೌಧ ಚಲೋ ಹೋರಾಟ ಮೂಲಕ ರಾಜ್ಯ ಸರ್ಕಾರಕ್ಕೆ ಸವಾಲೊಡ್ಡಿದೆ. ಫೆಬ್ರವರಿ ೧೩ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಜಮಾಯಿಸಿ ಅಹೋರಾತ್ರಿ ಹೋರಾಟ ಕೈಗೊಂಡಿರುವ ಆಶಾ ಕಾರ್ಯಕರ್ತೆಯರು ಬುಧವಾರವೂ ಧರಣಿ ಮುಂದುವರಿಸಿದರು.
ಆರೋಗ್ಯ ಸಚಿವರು ಮಂಗಳವಾರ ಪ್ರತಿಭಟನಾ ಸ್ಥಳಕ್ಕೆ ಧಾವಿಸಿ ಕೆಲವು ಭರವಸೆಗಳನ್ನು ನೀಡಿದ್ದರೂ ತೃಪ್ತರಾಗದ ಆಶಾ ಕಾರ್ಯಕರ್ತೆಯರು, ತಮ್ಮ ಪ್ರಮುಖ ಬೇಡಿಕೆಗಳು ಈಡೇರಿಲ್ಲ ಎಂದು ಹೋರಾಟವನ್ನು ಬುಧವಾರವೂ ಮುಂದುವರಿಸಿದರು. ಜೊತೆಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳ ಬಗ್ಗೆ ಗಮನಸೆಳೆದರು. ಆಶಾ ಸಂಘದ ರಾಜ್ಯ ಅಧ್ಯಕ್ಷರು, ರಾಜ್ಯ ಕಾಯದರ್ಶಿಗಳು ಹಾಗೂ ರಾಜ್ಯ ಮುಖಂಡರನ್ನೊಳಗೊಂಡ ನಿಯೋಗ ಸಿಎಂ-ಡಿಸಿಎಂ ಅವರನ್ನು ಭೇಟಿಯಾಗಿ ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಸೆಳೆಯುವಲ್ಲಿ ಯಶಸ್ವಿಯಾಯಿತು.
ಆಶಾ ನಿಯೋಗದ ಜೊತೆ ಚರ್ಚಿಸಿದ ಸಿಎಂ ಸಿದ್ದರಾಮಯ್ಯ, ಹಲವಾರು ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ಉಪಮುಖ್ಯಮಂತ್ರಿ ಡಿಕೆಶಿ ಅವರೂ ಆಶಾಗಳ ಗಂಭೀರ ಸಮಸ್ಯೆಗಳ ಬಗ್ಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಆಗಿರುವ ಅನ್ಯಾಯಗಳನ್ನು ಬಗೆಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು. ಆಶಾಗಳ ಗಂಭೀರ ಸಮಸ್ಯೆಗಳನ್ನು ಚರ್ಚಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ, ಆರೋಗ್ಯ ಸಚಿವರು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳನ್ನೊಳಗೊಂಡ ವಿಸ್ತೃತ ಸಭೆಯನ್ನು ಫೆಬ್ರವರಿ 23ರ ನಂತರ ಕರೆಯಲಾಗುವುದು ಎಂಬ ಭರವಸೆ ಸಿಎಂ-ಡಿಸಿಎಂ ಅವರಿಂದ ಸಿಕ್ಕಿದೆ ಎಂದು ಸಂಘದ ಪ್ರಮುಖರಾದ ಟಿ.ಸಿ.ರಮಾ ಅವರು ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ಈ ನಡುವೆ, ಮುಖ್ಯಮಂತ್ರಿಗಳ ಜೊತೆಗಿನ ಮಾತುಕತೆಯ ನಂತರ, ತುರ್ತು ಸಭೆ ನಡೆಸಿದ ಆಶಾ ಸಂಘನೆಯ ಮುಖಂಡರು, ಮುಖ್ಯಮಂತ್ರಿಗಳು ವಿಸ್ತೃತ ಸಭೆ ಕರೆದಿರುವ ಹಿನ್ನಲೆಯಲ್ಲಿ ಹೋರಾಟವನ್ನು ಮುಂದೂಡುವ ತೀರ್ಮಾನ ಕೈಗೊಂಡರು. ಸರ್ಕಾರದ ತೆಗೆದುಕೊಳ್ಳುವ ತೀರ್ಮಾನಗಳನ್ನು ಆಧರಿಸಿ ಮುಂದಿನ ನಡೆಯನ್ನು ಸಂಘವು ನಿರ್ಧರಿಸಲಿದೆ ಎಂದು ಸಂಘದ ಪ್ರಮುಖರಾದ ಟಿ.ಸಿ.ರಮಾ ಅವರು ತಿಳಿಸಿದ್ದಾರೆ.





























































