ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ರಾಜ್ಯದ ವಿವಿಧ ಜಿಲ್ಲೆಗಳ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ವಿಡಿಯೊ ಸಂವಾದ ನಡೆಸಿ, ಅವರ ಕಾರ್ಯನಿರ್ವಹಣೆ, ಸಮಸ್ಯೆಗಳು, ಸವಾಲುಗಳು ಮತ್ತು ಇತರ ವಿಷಯಗಳ ಕುರಿತು ಚರ್ಚಿಸಿದರು.
ಕೋವಿಡ್-19 ಸೋಂಕಿನ ನಿಯಂತ್ರಣದಲ್ಲಿ ತಳಹಂತದಲ್ಲಿ ಅಂಗನವಾಡಿ ಕಾರ್ಯಕರ್ತೆಯರೂ, ಗಮನಾರ್ಹ ಸೇವೆ ಸಲ್ಲಿಸುತ್ತಿದ್ದಾರೆ. ಆರು ವರ್ಷದೊಳಗಿನ ಮಕ್ಕಳು, ಗರ್ಭಿಣಿ, ಬಾಣಂತಿಯರ ಆರೋಗ್ಯ ರಕ್ಷಣೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಅತಿ ಮುಖ್ಯವಾದುದು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.
ಮೂರನೇ ಅಲೆಯಲ್ಲಿ ಕೋವಿಡ್-19 ಸೋಂಕು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣೆಯಲ್ಲಿ ನಿಮ್ಮ ಪಾತ್ರ ಅತಿ ಮುಖ್ಯವಾದುದು.
ಅಪೌಷ್ಟಿಕ ಮಕ್ಕಳು, ಅನಾರೋಗ್ಯ ಪೀಡಿತ ಮಕ್ಕಳನ್ನು ಗುರುತಿಸಿ, ಅವರ ಆರೊಗ್ಯ ರಕ್ಷಣೆಗೆ ಆದ್ಯತೆ ನೀಡಬೇಕಾಗಿದೆ. ಈ ದಿಸೆಯಲ್ಲಿ ಆರೋಗ್ಯ ಇಲಾಖೆಯೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಸೋಂಕು ನಿಯಂತ್ರಣಕ್ಕೆ ಆಸ್ಥೆಯಿಂದ ಶ್ರಮಿಸಬೇಕೆಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು.
ಕೋವಿಡ್-19ರ ಸಂದರ್ಭದಲ್ಲಿ ಮನೆ-ಮನೆ ಭೇಟಿ ನೀಡಿ ಅರಿವು ಮೂಡಿಸುವುದು, ಗ್ರಾಮ ಪಂಚಾಯಿತಿ ಟಾಸ್ಕ್ ಫೋರ್ಸ್‍ನಲ್ಲಿ ಕಾರ್ಯನಿರ್ವಹಣೆ ಜೊತೆಗೆ ಅಂಗನವಾಡಿಗಳು ಮುಚ್ಚಿದ ಕಾರಣ ಫಲಾನುಭವಿ ಮಕ್ಕಳು, ಬಾಣಂತಿಯರು, ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕ ಆಹಾರ ಸಾಮಗ್ರಿಗಳನ್ನು ಮನೆಗೆ ತಲುಪಿಸುವ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ರಾಜ್ಯದಲ್ಲಿ ಶೇ. 85.91ರಷ್ಟು ಅಂಗನವಾಡಿ ಕಾರ್ಯಕರ್ತೆಯರು / ಸಹಾಯಕಿಯರು ಲಸಿಕೆ ಪಡೆದಿರುವ ಕುರಿತು ಸಂತಸ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಅಂಗನವಾಡಿ ಕಾರ್ಯಕರ್ತೆಯರನ್ನು ಸಹ ಕೊರೊನಾ ವಾರಿಯರ್ಸ್ ಎಂದು ಘೋಷಿಸಲಾಗಿದ್ದು, ಕೋವಿಡ್ ನಿಂದ ಮೃತಪಟ್ಟ ಕಾರ್ಯಕರ್ತೆಯರಿಗೆ 30 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಮೊದಲ ಅಲೆಯ ಸಂದರ್ಭದಲ್ಲಿ ಒಟ್ಟು 20 ಜನ ಕಾಯಕರ್ತೆಯರು / ಸಹಾಯಕಿಯರು ಮೃತಪಟ್ಟಿದ್ದು, ಅವರಿಗೆ ತಲಾ 30 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು.
ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ವಿವಿಧ ವರ್ಗಗಳಿಗೆ ಪರಿಹಾರದ ಪ್ಯಾಕೇಜನ್ನು ಘೋಷಿಸಿದ್ದು, ಅಂಗನವಾಡಿ ಕಾರ್ಯಕರ್ತೆಯರಿಗೂ ತಲಾ 2,000 ರೂ. ಪರಿಹಾರ ಘೋಷಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಅಂಗನವಾಡಿ ಕಾರ್ಯಕರ್ತೆಯರು ಪಂಚಾಯತ್ ಮಟ್ಟದ ಟಾಸ್ಕ್ ಫೋರ್ಸ್ ಗಳಲ್ಲಿ ತಾವು ನಿರ್ವಹಿಸುತ್ತಿರುವ ಕರ್ತವ್ಯ, ಮನೆ ಮನೆ ಭೇಟಿ ನೀಡಿ ಅರಿವು ಮೂಡಿಸುವುದು, ಸೋಂಕಿತರ ಸಂಪರ್ಕಿತರನ್ನು ಗುರುತಿಸಿ ವರದಿ ಮಾಡುವುದು, ವಿಶೇಷ ಚೇತನರಿಗೆ ಲಸಿಕೆ ಒದಗಿಸುವುದು ಜೊತೆಗೆ ತಮ್ಮ ಇಲಾಖೆಯ ಕರ್ತವ್ಯ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಮೂರನೇ ಅಲೆಗೆ ಸಿದ್ಧತೆಯಾಗಿ ತಾಯಂದಿರಿಗೆ ಮಕ್ಕಳ ಆರೋಗ್ಯದ ಕುರಿತು ಕಾಳಜಿ ವಹಿಸುವಂತೆ ಹಾಗೂ ಪೌಷ್ಟಿಕ ಆಹಾರದ ಮಹತ್ವದ ಕುರಿತಂತೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಕೋವಿಡ್ ಸೋಂಕಿಗೆ ಪತಿಯನ್ನು ಕಳೆದುಕೊಂಡ ಗಿರಿಜಾ ಅವರಿಗೆ ಸಾಂತ್ವನ ಹೇಳಿದ ಮುಖ್ಯಮಂತ್ರಿಗಳು, ಆರೋಗ್ಯದ ಕುರಿತು ಕಾಳಜಿ ವಹಿಸುವಂತೆ ಸಲಹೆ ನೀಡಿದರು.
ಬೆಳಗಾವಿ ಜಿಲ್ಲೆಯ ಮಂಜುಳಾ ಸಂಗಮೇಶ್ ಅವರು, ಮುಖ್ಯಮಂತ್ರಿಯವರು ತಮ್ಮೊಂದಿಗೆ ಸಂವಾದ ನಡೆಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು. ಬೆಂಗಳೂರಿಗೆ ಬಂದಿದ್ದೀರಾ ಎಂದಾಗ ಇಲ್ಲವೆಂದ ಮಂಜುಳಾಗೆ, ಬೆಂಗಳೂರಿಗೆ ಬಂದಾಗ ನಮ್ಮ ಮನೆಗೆ ಬಂದು ಕಾಫಿ ಕುಡಿದು ಹೋಗಿ ಎಂದು ಮುಖ್ಯಮಂತ್ರಿ ಆಹ್ವಾನ ನೀಡಿದರು.
ಉತ್ತರ ಕನ್ನಡದ ಬ್ರಿಜಿಟ್ ಬ್ರಗಾಂಝಾ ಅವರು ತಮ್ಮ ವ್ಯಾಪ್ತಿಯ ಗರ್ಭಿಣಿಯರ ಆರೋಗ್ಯ ಕುರಿತು ನಿಗಾ ವಹಿಸಿದ್ದು, ಏರುಪೇರಾದರೆ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ ಎಂದು ವಿವರಿಸಿದರು.
ಕೋಲಾರ ಜಿಲ್ಲೆಯ ಸಾವಿತ್ರಮ್ಮ ಕಳೆದ ಮೂವತ್ತು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದು, ಕೋವಿಡ್ 19 ಮೊದಲ ಅಲೆಯ ಸಂದರ್ಭದಲ್ಲಿ ಜನರಿಗೆ ಭಯವಿತ್ತು. ಕ್ವಾರಂಟೈನ್ ನಿಯಮಗಳನ್ನು ಪಾಲಿಸುತ್ತಿದ್ದರು. ಎರಡನೇ ಅಲೆ ಸಂದರ್ಭದಲ್ಲಿ ಸಾವು ನೋವು ಹೆಚ್ಚಾಗಿ ಸಂಭವಿಸಿದರೂ, ಜನರಲ್ಲಿ ಹಿಂದಿನ ಭೀತಿ, ನಿಯಮ ಪಾಲನೆಯ ಕಾಳಜಿ ಇಲ್ಲ ಎಂದು ಅಭಿಪ್ರಾಯಪಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು ನಿಯಮ ಪಾಲಿಸುವಂತೆ ಜನರ ಮನವೊಲಿಸಬೇಕೆಂದು ಸಲಹೆ ನೀಡಿದರು.
ದೇವನಹಳ್ಳಿಯ ಲೀಲಾವತಿಯವರು, ತಮ್ಮ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆ ಇಲ್ಲ. ಟಾಸ್ಕ್ ಫೋರ್ಸ್ ಸದಸ್ಯರಾಗಿ ಮನೆ ಮನೆ ಭೇಟಿ ನೀಡಿ, ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸ್ವಾಬ್ ಪರೀಕ್ಷೆ ನಡೆಸಿ, ಸೋಂಕಿತರನ್ನು ಪತ್ತೆ ಹಚ್ಚಿ ಕೋವಿಡ್ ಕೇರ್ ಸೆಂಟರಿಗೆ ದಾಖಲಿಸಲಾಗುತ್ತಿದೆ. ವಿಶೇಷ ಶಿಬಿರ ನಡೆಸಿ, ವಿಶೇಷ ಚೇತನರೂ ಸೇರಿದಂತೆ 150ಕ್ಕೂ ಹೆಚ್ಚು ಜನರಿಗೆ ಲಸಿಕೆ ಹಾಕಿಸಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಶೇ. ನೂರರಷ್ಟು ಪ್ರಯತ್ನ ಪಟ್ಟು ಕೆಲಸಮಾಡುತ್ತಿರುವುದಾಗಿ ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಶಿಲ್ಪ ಅವರು ಇದೀಗ ತಮ್ಮ ಗ್ರಾಮ ಕೋವಿಡ್ ಮುಕ್ತವಾಗಿದೆ ಎಂದು ಹೆಮ್ಮೆಯಿಂದ ತಿಳಿಸಿದರು.
ಬಳ್ಳಾರಿ ಜಿಲ್ಲೆಯ ನಾಗರತ್ನ ಅವರು, ತಮ್ಮ ವ್ಯಾಪ್ತಿಯ ಇಬ್ಬರು ಅಪೌಷ್ಟಿಕ ಮಕ್ಕಳನ್ನು ನಿನ್ನೆಯಷ್ಟೆ ಪ್ರಾರಂಭವಾಗಿರುವ ಬಾಲ ಚೈತನ್ಯ ಮಕ್ಕಳ ಆರೈಕೆ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ತಿಳಿಸಿದರು.
ಕೊಪ್ಪಳ ಜಿಲ್ಲೆಯ ಸುಮಂಗಲಾ ಬಂಡಿ ಅವರು ಕೋವಿಡ್ 19ರ ಕರ್ತವ್ಯಗಳೊಂದಿಗೆ ತಮ್ಮ ಅಂಗನವಾಡಿ ಮಕ್ಕಳು ವಿವಿಧ ಸಂಸ್ಥೆಗಳು ಆನ್ ಲೈನ್ ಮೂಲಕ ನಡೆಸಿದ ಅಭಿನಯಗೀತೆ ಮತ್ತಿತರ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪತ್ರ ಪಡೆದಿರುವ ಕುರಿತು ಹೆಮ್ಮೆಯಿಂದ ಹೇಳಿಕೊಂಡರು.
ಉಡುಪಿ ಜಿಲ್ಲೆಯ ಸುಮಲತಾ ಅವರು, ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾಗ ಮನೆ ಮನೆಗೆ ಭೇಟಿ ನೀಡಿ ಆಹಾರ ಧಾನ್ಯಗಳನ್ನು ವಿತರಿಸುವುದು ಕಷ್ಟವಾಗುತ್ತಿದೆ ಎಂದು ತಮ್ಮ ಸಮಸ್ಯೆ ಹೇಳಿಕೊಂಡರು.
ತಮ್ಮ ಇಲಾಖೆಯ ಕರ್ತವ್ಯಗಳೊಂದಿಗೆ ಇತರ ಇಲಾಖೆಗಳ ಸಮೀಕ್ಷೆ ಮತ್ತಿತರ ಕೆಲಸಗಳ ಒತ್ತಡ ಹೆಚ್ಚುತ್ತಿದೆ. ಈ ಒತ್ತಡ ನಿವಾರಿಸುವಂತೆ ಹಲವು ಕಾರ್ಯಕರ್ತೆಯರು ಮನವಿ ಮಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ಸಹ ಇದಕ್ಕೆ ದನಿಗೂಡಿಸಿದರು.
ಮುಂದಿನ ದಿನಗಳಲ್ಲಿ ಈ ಸಮಸ್ಯೆ ಕುರಿತು ಪರಿಶೀಲಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.