ಮೈನಾರಿಟಿ ಕಾಂಗ್ರೆಸ್ ಅಧ್ಯಕ್ಷನ ಕೊಲೆ. ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳ ಬಂಧನ..
ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಸಮೀಪ ಮೈನಾರಿಟಿ ಕಾಂಗ್ರೆಸ್ ಅಧ್ಯಕ್ಷ ಅಮ್ಜದ್ ನವಾಜ್ ನನ್ನು ಹಾಡುಹಗಲೇ ಭೀಕರವಾಗಿ ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಲ್ಲು ಅಲಿಯಾಸ್ ಖಲಂದರ್, ಅಮಿತ್, ರಘು ಅಲಿಯಾಸ್ ರಾಘವೇಂದ್ರ, ಅಕ್ಷಯ್,ಶ್ರೀನಾಥ್ ಬಂಧಿತ ಆರೋಪಿಗಳು. ಜನನಿಬಿಡ ಪ್ರದೇಶದಲ್ಲಿ ಹಾಡುಹಗಲೇ ಕಾಂಗ್ರೆಸ್ ಮುಖಂಡನ ಹತ್ಯೆ ಮಾಡಿದ ದೃಶ್ಯವನ್ನು ಕಂಡು ನಾಗರಿಕರು ಭಯಭೀತರಾಗಿ ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡನ ಹತ್ಯೆ ಮಾಡಲಾಗಿದೆ ಎಂಬ ವಿಚಾರ ಬಯಲಾಗಿದೆ.
ಅಮ್ಜದ್ ನವಾಝ್ ಸಂಬಂಧಿ ಕಲ್ಲು ಅಲಿಯಾಸ್ ಕಲಂದರ್ ಎಂಬಾತನ ಮೇಲೆ ಕೆಲ ವರ್ಷಗಳ ಹಿಂದೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಸುಮಾರು ವರ್ಷಗಳಿಂದ ಅವಕಾಶಕ್ಕೆ ಕಾಯುತ್ತಿದ್ದ ಕಲ್ಲು ಅಲಿಯಾಸ್ ಕಲಂದರ್ ಮತ್ತು ಆತನ ಸಹಚರರು ಸಂಚು ರೂಪಿಸಿ ಮೈನಾರಿಟಿ ಕಾಂಗ್ರೆಸ್ ಅಧ್ಯಕ್ಷ ಅಮ್ಜದ್ ನವಾಜ್ ಹತ್ಯೆ ನಡೆಸಿರಬಹುದೆಂಬ ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ಹಂತಕರಿಗಾಗಿ ಬಲೆ ಬೀಸಿದರು.
ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.