ನವದೆಹಲಿ: ಸಾವಿರಾರು ಮನೆ ಖರೀದಿದಾರರನ್ನು ವಂಚಿಸಿದ ಆರೋಪ ಹೊತ್ತಿರುವ ಬಿಲ್ಡರ್‌ಗಳ ವಿರುದ್ಧ ಸಿಬಿಐ ಭಾರೀ ದಾಳಿ ನಡೆಸಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ಕೋಲ್ಕತ್ತಾ, ಬೆಂಗಳೂರು ಮತ್ತು ಮುಂಬೈ ನಗರಗಳಲ್ಲಿ ಶನಿವಾರ 12 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ವಿವಿಧ ದಾಖಲೆಗಳು ಹಾಗೂ ಡಿಜಿಟಲ್ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ತಿಳಿಸಿದೆ.
ಮನೆ ಖರೀದಿದಾರರು ಸಲ್ಲಿಸಿದ್ದ ಅರ್ಜಿಗಳ ಆಧಾರದ ಮೇಲೆ ತನಿಖೆ ಆರಂಭಗೊಂಡಿದ್ದು, ಗೃಹಸಾಲದ ವಿವಾದಾತ್ಮಕ ಸಬ್ವೆನ್ಷನ್ ಯೋಜನೆ ಮೂಲಕ ಬಿಲ್ಡರ್‌ಗಳು ಮತ್ತು ಸಾಲದಾತರ ನಡುವೆ ಅಸಮರ್ಪಕ ಸಂಬಂಧವಿದೆ ಎಂದು ಸುಪ್ರೀಂ ಕೋರ್ಟ್ ಹಿಂದೆಯೇ ಗಮನಿಸಿದೆ. ಅದರಂತೆ, ಏಳು ಪ್ರಾಥಮಿಕ ವಿಚಾರಣೆಗಳನ್ನು ಸಿಬಿಐಗೆ ಒಪ್ಪಿಸಲಾಗಿತ್ತು.
ಇದಕ್ಕೂ ಮೊದಲು NCR ಪ್ರದೇಶದಲ್ಲಿ 22 ಎಫ್‌ಐಆರ್‌ಗಳನ್ನು ದಾಖಲಿಸಿದ್ದ ಸಿಬಿಐ, ಇದೀಗ NCR ಹೊರಗಿನ ಯೋಜನೆಗಳನ್ನು ಒಳಗೊಂಡ ಏಳನೇ ವಿಚಾರಣೆಯ ನಂತರ, ಸುಪ್ರೀಂ ಕೋರ್ಟ್ ಸೂಚನೆಯಂತೆ ಆರು ನಿಯಮಿತ ಪ್ರಕರಣಗಳನ್ನು ದಾಖಲಿಸಿದೆ.
ಇಥಾಕಾ ಎಸ್ಟೇಟ್ ಪ್ರೈ.ಲಿ., ಎಲ್‌ಜಿಸಿಎಲ್ ಅರ್ಬನ್ ಹೋಮ್ಸ್, ಓಜೋನ್ ಅರ್ಬಾನಾ ಇನ್ಫ್ರಾ, ಶಾಶ್ವತಿ ರಿಯಾಲ್ಟಿ, ಎಂಕೆಎಚ್‌ಎಸ್ ಹೌಸಿಂಗ್ ಹಾಗೂ ಎಸಿಎಂಇ ರಿಯಾಲಿಟೀಸ್ ಕಂಪನಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಶೋಧ ಇನ್ನೂ ಮುಂದುವರಿದಿದೆ ಎಂದು ಸಿಬಿಐ ತಿಳಿಸಿದೆ.