ಸಿಲಿಕಾನ್ ಸಿಟಿ ಬೆಂಗಳೂರು ಇದೀಗ ಹೈಟೆಕ್ ನಗರಿ.. ಹಬ್ಬಗಳು ಬಂದಾಗಲೆಲ್ಲಾ ಹಳ್ಳಿ ಸೊಗಡಿನ ಸಿಂಗಾರಿಯಾಗಿ ರಾಜಧಾನಿ ಗಮನಸೆಳೆಯುತ್ತದೆ. ಅದರಲ್ಲೂ ಉತ್ತರಾಯಣ ಪರ್ವಕಾಲದ ‘ಸಂಕ್ರಾಂತಿ ಸಡಗರ’ವು ಉದ್ಯಾನ ನಗರಿಯಲ್ಲೊಂದು ಅನನ್ಯ ಸೊಬಗು-ಸೊಗಸಿಗೆ ಸಾಕ್ಷಿಯಾಯಿತು.
ಇದು ಬೆಂಗಳೂರಿನ ಬಿಟಿಎಂ ಲೇಔಟ್ ಪರಿಸರದ ದೃಶ್ಯಸೊಬಗಿ. ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿಯವರು ಪ್ರತಿನಿಧಿಸುತ್ತಿರುವ ಬಿಟಿಎಂ ಲೇಔಟ್ ಕ್ಷೇತ್ರದ ಬಡಾವಣೆಗಳು ಎಂದಿಲ್ಲದಂತೆ ಸಿಂಗಾರಗೊಂಡಿದ್ದವು. ಗ್ರಾಮೀಣ ಸೊಗಡಿನ ಸೊಗಸು-ಸೊಬಗು ಅದ್ದೂರಿಯ ಸಂಕ್ರಾಂತಿ ಹಬ್ಬದ ಸಡಗರದಲ್ಲಿ ಸಮ್ಮಿಳಿತವಾಗಿತ್ತು.
ಬಡಾವಣೆಯು ಬೀದಿಗಳಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನರು ಸಂಕ್ರಾಂತಿ ಸಂಭ್ರಮದಲ್ಲಿ ಮಿಂದೆದ್ದರು. ಎಲ್ಲೆಲ್ಲೂ ಅಲಂಕಾರ, ಹೂಗಳ ಶೃಂಗಾರ, ರಂಗೋಳಿಯ ಚಿತ್ತಾರ ಈ ಸಡಗರಕ್ಕೆ ರಂಗು ತಂದುಕೊಟ್ಟಿತು. ಸ್ವತಃ ಸಚಿವ ರಾಮಲಿಂಗ ರೆಡ್ಡಿ ಅವರು ಪತ್ನಿ, ಚಾಮುಂಡೇಶ್ವರಿ, ಪುತ್ರಿ ಸೌಮ್ಯ ರೆಡ್ಡಿ ಜೊತೆ ಕುಟುಂಬ ಸಮೇತರಾಗಿ ಊರ ಜನರ ಜೊತೆ ಹಬ್ಬದಾಚರಣೆ ಮಾಡಿ ಎಲ್ಲರ ಕುತೂಹಲದ ಕೇಂದ್ರಬಿಂದುವಾದರು.
ಬಣ್ಣಬಣ್ಣದ ಸಿಂಗಾರವಷ್ಟೇ ಅಲ್ಲ, ಗ್ರಾಮೀಣ ಪರಂರೆಯಂತೆ ಗೋವುಗಳಿಗೆ ಗೌರವ ಸಲ್ಲಿಸುವ ಕೈಂಕರ್ಯವೂ ಇಲ್ಲಿತ್ತು ಸ್ವತಃ ಸಚಿವ ರಾಮಲಿಂಗ ರೆಡ್ಡಿ ಅವರೇ ಗೋವುಗಳಿಗೆ ಪೂಜೆ ನೆರವೇರಿಸಿ ತಿನಿಸುಗಳನ್ನು ನೀಡಿದ ಪ್ರಸಂಗವಯ ಕ್ಷೇತ್ರದ ಜನರಲ್ಲಿನ ಸುಗ್ಗಿಯ ಹಿಗ್ಗನ್ನು ಹೆಚ್ಚಿಸಲು ಕಾರಣವಾದಂತಿತ್ತು.
ಬಿಟಿಎಂ ವಿಧಾನಸಭಾ ಕ್ಷೇತ್ರದ 8 ವಾರ್ಡ್ಗಳಲ್ಲಿ 50ಕ್ಕೂ ಹಸುಗಳಿಗೆ ಗೋ ಪೂಜೆ ನೆರವೇರಿಸಲಾಯಿತು. 19 ಕಾರ್ಯಕ್ರಮಗಳು ಬೆಳಗ್ಗೆ 10 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಏರ್ಪಡಿಸಲಾಗಿತ್ತು. ಅವರೆಕಾಯಿ ರಾಶಿ, ರಾಗಿ ರಾಶಿ, ಧಾನ್ಯಗಳ ರಾಶಿ ಮಾಡಿ ಪೂಜೆ ಮಾಡಿ ಸುಗ್ಗಿಯನ್ನು ಹಿಗ್ಗಿ ಬರ ಮಾಡಿಕೊಳ್ಳಲಾಯಿತು. ಊರ ಜನರೊಂದಿಗೆ ಜನನಾಯಕರೂ ಎಳ್ಳು-ಬೆಲ್ಲ-ಕಬ್ಬು ಹಂಚಿ ಸಂಭ್ರಮಿಸಿದರು. ಅವರೆಕಾಳು, ಕಡಲೆಕಾಯಿ, ಗೆಣಸು ಹಂಚಿ ನಾಡಿನ ಏಳಿಗೆಯನ್ನು ಆಶಿಸಿದರು. ಶುಭಾಶಯಗಳ ವಿನಿಮಯದ ಅಂಗಳವಾಗಿ ಈ ಕ್ಷೇತ್ರ ಮಾರ್ಪಾಡಾಗಿತ್ತು.
ವಿವಿಧ ಮನರಂಜನಾ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆ, ರಂಗೋಲಿ, ಜೋಕಾಲಿ, ಸಂಗೀತ ಕುರ್ಚಿ, ಸಂಗೀತ ಸ್ಪರ್ಧೆಗಳು ಸಂಕ್ರಾಂತಿ ಸಡಗರವನ್ನು ನೂರ್ಮಡಿಗೊಳಿಸಿತ್ತು. ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಪುರಸ್ಕಾರ ನೀಡಿದ್ದೂ ಈ ಸಂಕ್ರಾಂತಿಯ ವಿಶೇಷ.
ಸ್ಥಳೀಯ ಮುಖಂಡರಾದ ಮಂಜುನಾಥ್ ರೆಡ್ಡಿ, ಮುರುಗೇಶ್, ಬಿ.ಮೋಹನ್, ಜಿ.ಎನ್.ಆರ್.ಬಾಬು, ರಾಮಚಂದ್ರ, ಚಂದ್ರಪ್ಪ, ಜಿ.ಮಂಜುನಾಥ್, ಗೋವರ್ಧನ ರೆಡ್ಡಿ, ಆನಂದ್, ಹರೀಶ್ ಬಾಬು, ಸೂರ್ಯಕುಮಾರ್, ಗಣೇಶ್, ಗೇಟ್ ವೆಂಕಟೇಶ್, ನಂದಕುಮಾರ್, ವಿಶ್ವನಾಥ್, ನಾಗರಾಜ್, ಕಿಷನ್ ನಾಯ್ಕ್, ಪ್ಯಾಟ್ರಿಕ್ ರಾಜು, ಲಕ್ಕಸಂದ್ರ ಶಿವರಾಂ, ತಾವರೆಕೆರೆ ಮುನಿರಾಜು, STD ಮಂಜುನಾಥ್, ಕೋರಮಂಗಲ ವೆಂಕಟೇಶ್, ಚಂದ್ರಪ್ಪ ನಗರದ ಮಂಜುನಾಥ್, ಸಿ.ಆರ್ ಗೋಪಾಲ್ ಬ್ರದರ್ಸ್, ಚಿಕ್ಕ ಆಡುಗೋಡಿ ಮಹಿಳಾ ಮುಖಂಡರುಗಳಾದ ಮಂಜುಳಾ ಸಂಪತ್. ಜಯಶ್ರೀ, ಕವಿತಾ, ಲಕ್ಷಿ ಚಲಪತಿ, ಹಾಗೂ 8ನೇ ಬ್ಲಾಕ್ ಕೋರಮಂಗಲ ಅಸೋಸಿಯೇಷನ್ ಸದಸ್ಯರು ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.