ಬೆಂಗಳೂರು: ತಮ್ಮ ಇಲಾಖೆಯ ಕೆಲಸಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾನೂನು ಮೀರಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು, ರಾಜ್ಯಪಾಲರು ಹಾಗೂ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ದೆಹಲಿಯ ವರಿಷ್ಠರಿಗೆ ದೂರು ನೀಡಿದ್ದಾರೆ. ಈ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಕಳೆದ ಒಂದುವರೆ ವರ್ಷದಿಂದ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವನಾಗಿ ಕೆಲಸ ಮಾಡುತ್ತಿರುವ ತಮ್ಮ ಗಮನಕ್ಕೆ ಬಾರದಂತೆ ಸಿಎಂ ಯಡಿಯೂರಪ್ಪ ಇಲಾಖೆಯ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹಿರಿಯ ಸಚಿವನಾಗಿರುವ ತಮಗೆ ಇದರಿಂದ ನೋವಾಗಿದೆ ಎಂದು ಬಿಎಸ್‌ವೈ ದೂರಿದ್ದಾರೆನ್ನಲಾಗಿದೆ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ವಕ್ತಾರ ರಮೇಶ್ ಬಾಬು, ಒಬ್ಬ ಸಂಪುಟ ದರ್ಜೆಯ ಸಚಿವರು ತಮ್ಮ ನಾಯಕನ ವಿರುದ್ಧ ಲಿಖಿತವಾಗಿ ರಾಜ್ಯಪಾಲರು ಮತ್ತು ಕೇಂದ್ರ ನಾಯಕರಿಗೆ ದೂರು ನೀಡಿರುವುದು ರಾಜ್ಯದ ಇತಿಹಾಸದಲ್ಲೇ ಮೊದಲು ಎಂದು ವಿಶ್ಲೇಷಣೆ ಮಾಡಿದ್ದಾರೆ.


ರಾಜ್ಯ ಬಿಜೆಪಿ ಸರ್ಕಾರದಲ್ಲಿ ಇರುವ ಲಜ್ಜೆಗೇಡಿತನದ ಗುಂಪು ಗಾರಿಕೆಗೆ ನೇರ ಸಾಕ್ಷಿ. ಬಿಜೆಪಿ ನಾಯಕರು ಇದು ಕಾಂಗ್ರೆಸ್ ಕೈವಾಡ ಎಂದು ಹೇಳದ್ದಿದ್ದರೆ ಅದು ಜನರ ಪುಣ್ಯ ಎಂಂದಿರುವ ರಮೇಶ್ ಬಾಬು, ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಬಿಡುಗಡೆಯಾಗಿರುವ 1200 ಕೋಟಿ ರೂ.ಗೆ ಸಂಬಂಧಿಸಿದಂತೆ ಕಾನೂನು ಮೀರಿ ಸುಖಾಸುಮ್ಮನೆ ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಆರ್ಡಿಪಿಆರ್ ಇಲಾಖೆಯ ಅನುದಾನವನ್ನು ನೇರವಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಂಚಿದ್ದಾರೆ ಎಂದು ರಾಜ್ಯಪಾಲ ವಜುಭಾಯಿವಾಲಾ ಅವರನ್ನು ಭೇಟಿ ಮಾಡಿ ಈಶ್ವರಪ್ಪ ಅವರು ಲಿಖಿತ ದೂರು ನೀಡಿದ್ದಾರೆ. ಇದರಿಂದ ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ತೀವ್ರ ಸ್ವರೂಪ ಪಡೆದುಕೊಂಡಿದೆ ಎಂದು ಬಣ್ಣಿಸಿದ್ದಾರೆ.
ಸಿಎಂ ರಾಜೀನಾಮೆಗೆ ಆಗ್ರಹ
ಮುಖ್ಯಮಂತ್ರಿಗಳ ವಿರುದ್ಧ ಅವರ ಸಂಪುಟದ ಹಿರಿಯ ಸಚಿವರು ರಾಜ್ಯಪಾಲರು ಹಾಗೂ ಅವರ ಪಕ್ಷದ ವರಿಷ್ಟರಿಗೆ ದೂರು ನೀಡಿರುವುದು ಮುಖ್ಯಮಂತ್ರಿಗಳು ತಮ್ಮ ಸಹದ್ಯೋಗಿಗಳ ವಿಶ್ವಾಸ ಕಳೆದುಕೊಂಡಿದ್ದಾರೆನ್ನುವುದಕ್ಕೆ ಸಾಕ್ಷಿಯಾಗಿದೆ. ಹಾಗಾಗಿ ಕೂಡಲೆ ಯಡಿಯೂರಪ್ಪ ತಮ್ಮ ತಪ್ಪಿನ ನೈತಿಕತೆ ಜವಾಬ್ದಾರಿ ಹೊತ್ತು ತಮ್ಮ ಹುದ್ದೆಗೆ ರಾಜಿನಾಮೆ ನೀಡಬೇಕು, ಇಲ್ಲವೇ ತಮ್ಮ ವಿರುದ್ಧ ಆರೋಪ ಮಾಡಿರುವ ಮಂತ್ರಿಯನ್ನ ಸಂಪುಟದಿಂದ ವಜಾ ಮಾಡಬೇಕು ಎಂದು ರಮೇಶ್ ಬಾಬು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಗಳು ತಾವು ಕೈಗೊಂಡಿರುವ ಎಕಪಕ್ಷೀಯ ನಿರ್ಧಾರವನ್ನು ತಡೆ ಹಿಡಿಯಬೇಕು.
ಇಲ್ಲವಾದಲ್ಲಿ ಮುಖ್ಯಮಂತ್ರಿಗಳು ತಮ್ಮ ಪರಮಾಧಿಕಾರವನ್ನು ಪ್ರಶ್ನಿಸಿರುವ ಹಿರಿಯ ಸಚಿವ ಈಶ್ವರಪ್ಪ ಅವರನ್ನು ಕೂಡಲೆ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸುತ್ತೇನೆ. ಕೇಂದ್ರ ಬಿಜೆಪಿ ನಾಯಕರು ಸುಳ್ಳು ಹೇಳುವುದನ್ನು ಬಿಟ್ಟು ರಾಜ್ಯ ಬಿಜೆಪಿ ಗುಂಪು ಗಾರಿಕೆಗೆ ಚಿಕೆತ್ಸೆ ನೀಡಲಿ ಎಂದು ರಮೇಶ್ ಬಾಬು ಹೇಳಿದ್ದಾರೆ.
ರಾಜ್ಯದ ಜನರು ಕೋವಿಡ್ ಅಲೆ ಇಂದ ಬದುಕಿಗಾಗಿ ಹೊರಾಡುತ್ತಿದ್ದರೆ, ರಾಜ್ಯ ಬಿಜೆಪಿ ಸರ್ಕಾರ ಹಣದ ಹಂಚಿಕೆಗಾಗಿ ಬೀದಿ ಹೋರಾಟ ಮಾಡುತ್ತಿದೆ. ಹಿಂದೆ ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಪರ್ಸೆಂಟೇಜ್ ಆರೋಪ ಮಾಡಿದ್ದ ಪ್ರಧಾನಿ ಮೋದಿ ಅವರೇ ಈಗ ಏನು ಉತ್ತರ ಹೇಳುವಿರಿ? ಎಂದು ಕಾಂಗ್ರೆಸ್ ನಾಯಕ ರಮೇಶ್ ಬಾಬು ಪ್ರಶ್ನಿಸಿದ್ದಾರೆ.