ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಸುಳಿವು ವ್ಯಕ್ತವಾದ ನಂತರ ಬಿಜೆಪಿ ಪಾಳಯ ಸರಣಿ ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತಿದೆ. ಈ ವರೆಗೂ ಸಿಎಂ ಬದಲಾವಣೆ ಇಲ್ಲವೇ ಇಲ್ಲ ಎನ್ನುತ್ತಿದ್ದ ಸಿಎಂ ಯಡಿಯೂರಪ್ಪ ಆಪ್ತ ಬಳಗ ಇದೀಗ ಮಾತು ಬದಲಿಸಿರುವುದೇ ಅಚ್ಚರಿ.
ಬಿಜೆಪಿ ಕೇಂದ್ರ ಕಚೇರಿ ಮೂಲಗಳ ಪ್ರಕಾರ ಸಿಎಂ ಬದಲಾವಣೆ ಖಚಿತ. ಆದರೆ ಬಿಎಸ್‌ವೈ ಪಾಲಿಗೆ ಮುಂದೇನು? ರಾಜ್ಯದ ಪಾಲಿಗೆ ಮುಂದೆ ಯಾರು? ಎಂಬ ಕುತೂಹಲ ಎಲ್ಲರದ್ದು. ಈ ನಡುವೆ ಬಿಎಸ್‌ವೈ ಅವರು ಮೌನಕ್ಕೆ ಶರಣಾಗಿದ್ದೇಕೆ ಎಂಬುದೇ ಆಪ್ತರ ಆತಂಕ. ಯಡಿಯೂರಪ್ಪರ ಈ ನಡೆ ಆರೆಸ್ಸೆಸ್ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಏನಿದು ಬೇಗುದಿ..?
ಬಿಜೆಪಿ ಪಾಳಯದಲ್ಲಿ ಯಾವತ್ತೋ ನಡೆಯಬೇಕಾದ ಬದಲಾವಣೆ ಈಗಷ್ಣೇ ಅರಂಭವಾಗಿದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಬಿಎಸ್‌ವೈ ಅವರಿಂದ ಸಂಘಟನೆಗೆ ಆಗಿರುವ ಅನುಕೂಲಗಳೂ ಅಷ್ಟೇನೂ ಇಲ್ಲ. ಬದಲಾಗಿ, ಸಂಘ ಕಟ್ಟಿದ ಸಾಮ್ರಾಜ್ಯದಲ್ಲಿ ಅಧಿಪತಿಯಾಗಿರುವ ಯಡಿಯೂರಪ್ಪ ಅವರಿಂದ ಸಂಘದ ವರ್ಚಸ್ಸಿಗೆ ಘಾಸಿ ಆಗಿರುವುದೇ ಹೆಚ್ಚು ಎನ್ನುತ್ತಿದ್ದಾರೆ ಕಾರ್ಯಕರ್ತರು.
ನಾಯಕತ್ವ ಬದಲಾವಣೆಯ ಸುಳಿವು ಯಾವಾಗ ಸಿಕ್ಕಿತೋ ಅಂದಿನಿಂದ ಬಿಎಸ್‌ವೈ ಪುತ್ರ ಕಾದುನೋಡುವ ತಂತ್ರಕ್ಕೆ ಮೊರೆಹೋಗುವ ಬದಲು, ಹೈಕಮಾಂಡ್ ವಿರುದ್ದ ಸಿಡಿದೇಳಲು ಸ್ವಾಮೀಜಿಗಳ ಮೊರೆ ಹೋದರು. ಕೆಲವೇ ದಿನಗಳಲ್ಲಿ ಬಹುತೇಕ ಲಿಂಗಾಯತ ಮಠಗಳನ್ನು ಸುತ್ತಿ ರಣತಂತ್ರ ರೂಪಿಸಿದ್ದರು. ಅದರ ಫಲವಾಗಿಯೇ ಮಂಗಳವಾರ ಸ್ವಾಮಿಗಳ ತಂಡ ಬೆಂಗಳೂರಿಗೆ ಧಾವಿಸಿ ಹೈವೋಲ್ಟೇಜ್ ಬೆಳವಣಿಗೆಗೆ ಮುನ್ನುಡಿ ಬರೆದಿರುವುದು. ಅಷ್ಟೇ ಅಲ್ಲ, ಯಡಿಯೂರಪ್ಪ ಅವರ ಪದಚ್ಯುತಿ ವಿರೋಧಿಸಿ ಸಾವಿರಾರು ಸ್ವಾಮೀಜಿಗಳು ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನ ನಡೆಸುವುದಾಗಿ ರವಾನಿಸಿರುವ ಸಂದೇಶ ಕೂಡಾ ಆರೆಸ್ಸೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
ಬಿಎಸ್‌ವೈಗೆ ಎಲ್ಲವನ್ನೂ ಕೊಟ್ಟಿರುವ ಬಿಜೆಪಿ:
ಸಂಘದ ಪ್ರಚಾರಕರು ಸೇರಿದಂತೆ ಸಾವಿರಾರು ಮಂದಿ ಪ್ರಭಾವಿಗಳು, ಸಮರ್ಥರು ಇದ್ದರೂ ಕೂಡಾ ಬಿಎಸ್‌ವೈಗೆ ಸಕಲ ಸ್ಥಾನವನ್ನು ಕೊಡಲಾಗಿದೆ. ಪ್ರತಿಪಕ್ಷ ನಾಯಕರನ್ನಾಗಿಸಿ, ಪಕ್ಷದ ಅಧ್ಯಕ್ಷರನ್ನಾಗಿಸಿ, ಮುಖ್ಯಮಂತ್ರಿ ಪಟ್ಟವನ್ನೂ ಕಟ್ಟಿಕೊಡಲಾಯಿತು. ಪಕ್ಷ, ಸಂಘಟನೆಯಿಂದ ದೂರವಾದವರಿಗೆ ಜವಾಬ್ಧಾರಿಯನ್ನೇ ವಹಿಸಿಕೊಡದ ಸಂಘ, ಬಿಎಸ್‌ವೈ ಅವರಿಗೆ ಇದೆಲ್ಲವನ್ನೂ ಕೊಟ್ಟಿದೆ. ಅವರ ಪುತ್ರನನ್ನೂ ಪಕ್ಷದ ಉಪಾಧ್ಯಕ್ಷರನ್ನಾಗಿ ಮಾಡಿದೆ. ಬಿಎಸ್‌ವೈ ವಿಚಾರದಲ್ಲಿ ವಯಸ್ಸಿನ ಮಾನದಂಡವನ್ನೂ ಪರಿಗಣಿಸಿಲ್ಲ. ಮುರಳಿ ಮನೋಹರ್ ಜೋಷಿ ಸಹಿತ ಹಲವು ನಾಯಕರಿಗೆ ಸಿಗದ ಪ್ರಾಶಸ್ತ್ಯ ಬಿಎಸ್‌ವೈಗೆ ಸಿಕ್ಕಿದೆ. ಅದರಲ್ಲೂ ಬರೋಬ್ಬರಿ ನಾಲ್ಕು ಬಾರಿ ಸಿಎಂ ಅವಕಾಶ ಸಿಕ್ಕಿರುವುದು ಇವರಿಗೆ ಮಾತ್ರ ಎನ್ನುತ್ತಿದ್ದಾರೆ ಸಂಘದ ಪ್ರಮುಖರು.
ಹಿರಿಯರ ಮಾತನ್ನೇ ವೇದವಾಕ್ಯ ಎಂದು ಪರಿಗಣಿಸಿ ಮುನ್ನಡೆಯುವ ಸಂಪ್ರದಾಯವಿರುವ ಸಂಘದ ವಿವಿಧ ಕ್ಷೇತ್ರಗಳಲ್ಲಿ ಇದೀಗ ಬಿಎಸ್‌ವೈ ನಡೆ ಆಕ್ಷೇಪಕ್ಕೆ ಕಾರಣವಾಗಿದೆ. ಬಿಜೆಪಿ ಹೈಕಮಾಂಡ್ ನಡೆ ವಿರುದ್ದ ಸ್ವಾಮೀಜಿಗಳನ್ನೇ ಎತ್ತಿಕಟ್ಟಿ ಹೋರಾಟಕ್ಕೆ ಅಖಾಡ ಸೃಷ್ಟಿಸಿರುವುದು ಸರಿಯಲ್ಲ ಎಂಬುದು ಆರೆಸ್ಸೆಸ್ ಕಾರ್ಯಕರ್ತರ ಅಭಿಪ್ರಾಯ.