ಬೆಂಗಳೂರು: ಬಹುಕೋಟಿ ರೂಪಾಯಿ ಬೃಂದಾವನ ಪ್ರಾಪರ್ಟಿ ಹಗರಣ ಕುರಿತ ಪೊಲೀಸ್ ತನಿಖೆ ಬಗ್ಗೆ ಸಂತ್ರಸ್ತರು ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸ್ ತನಿಖೆ ಸಮರ್ಪಕವಾಗಿ ನಡೆಯುತ್ತಿಲ್ಲ. ಹಾಗಾಗಿ ಸಿಐಡಿ ತನಿಖೆ ನಡೆಸಬೇಕೆಂದು ಸಂತ್ರಸ್ತರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತಂತೆ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಕರ್ನಾಟಕ ಜನಪರ ಸಮಾನ ವೇದಿಕೆಯ ಪ್ರಮುಖರು ಸುದ್ದಿಗೋಷ್ಠಿ ನಡೆಸಿದರು. ಬೃಂದಾವನ ಪ್ರಾಪರ್ಟೀಸ್‌ನಿಂದ ವಂಚನೆಗೊಳಗಾಗಿರುವ ಸಾವಿರಾರು ಮಂದಿ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಪೊಲೀಸರು ಸಂತ್ರಸ್ತರ ಪರವಾಗಿ ನಿಂತಿಲ್ಲವಂತೆ. ಹಾಗಾಗಿ ಕಾನೂನು ಹೋರಾಟವನ್ನು ತೀವ್ರಗೊಳಿಸುವ ಸಂಬಂಧ ಕರ್ನಾಟಕ ಜನಪರ ಸಮಾನ ವೇದಿಕೆ ಎಂಬ ಸಂಘಟನೆಯನ್ನು ಸ್ಥಾಪಿಸಿದ್ದಾರೆ.
ವೆಂಕಟರೆಡ್ಡಿ, ದಿವಾಕರ್ ಮಾತನಾಡಿ, ರಾಜಾಜಿನಗರದಲ್ಲಿ ಕಚೇರಿ ಹೊಂದಿದ್ದ ಬೃಂದಾವನ ಪ್ರಾಪರ್ಟೀಸ್ ಸಂಸ್ಥೆ ಸಾವಿರಾರು ಅಮಾಯಕರಿಗೆ ನಿವೇಶನ ನೀಡುವುದಾಗಿ ಹಣ ಪಡೆದು ವಂಚಿಸಿದೆ. ಸುಮಾರು 2800 ಮಂದಿ ನೀಡಿರುವ ದೂರಿನ ಕಥೆ ಏನಾಯಿತು ಎಂದು ಕೇಳಿದರೆ, ನಿಮಗೆ ನ್ಯಾಯ ಕೊಡಿಸುತ್ತೇವೆ ಎಂದಷ್ಟೇ ಪೊಲೀಸ್ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ತಪ್ಪಿತಸ್ತರ ವಿರುದ್ದ ಕ್ರಮ ಕೈಗೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದರು.
ಒಂದು ವೇಳೆ ಅಪರಾಧಿಗಳನ್ನು ಬಂಧಿಸಿದ್ದರೆ ಆ ಬಗ್ಗೆ ಮಾಹಿತಿ ಬಹಿರಂಗ ಪಡಿಸಲಿ ಎಂದು ಮನವಿ ಮಾಡಿದ ಅವರು, ಈ ಪ್ರಕರಣವನ್ನು ಬಹುಕೋಟಿ ಹಗರಣವೆಂದು ಪರಿಗಣಿಸಿ, ಸಿಐಡಿ ತನಿಖೆಗೆ ಒಪ್ಪಿಸಬೇಕು. ಆ ಮೂಲಕ ವಂಚನೆಗೊಳಗಾಗಿರುವ ಸಾರ್ವಜನಿಕರಿಗೆ ನ್ಯಾಯ ಒದಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಅಪ್ರಾಪ್ತೆ ಮೇಲೆ ಅತ್ಯಾಚಾರ.. ಕೀಚಕನಿಗೆ ಬರೋಬ್ಬರಿ 20 ವರ್ಷ ಶಿಕ್ಷೆ..