ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿಯಲ್ಲಿ ನಿಲ್ಲಿಸಲಾಗಿದ್ದ ಮಹೀಂದ್ರಾ XUV300 ಕಾರು ಸ್ಫೋಟಗೊಂಡು ಭಾರಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮಾಹಿತಿಯ ಪ್ರಕಾರ, ನಿನ್ನೆ ಸಂಜೆ ಸುಮಾರು 4.30ಕ್ಕೆ ಕಾರನ್ನು ಬಾರ್‌ವೊಂದರ ಬಳಿ ನಿಲ್ಲಿಸಲಾಗಿತ್ತು. ರಾತ್ರಿ ಮನೆಗೆ ತೆರಳಲು ಸಿದ್ಧವಾಗಿದ್ದ ವೇಳೆ ಏಕಾಏಕಿ ಭಾರೀ ಸ್ಫೋಟ ಸಂಭವಿಸಿದ್ದು, ಸ್ಫೋಟದ ಶಬ್ದದಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಸ್ಫೋಟದ ದೃಶ್ಯ ಸಮೀಪದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ತಿಳಿದುಬಂದಿದೆ.
ಸ್ಫೋಟದ ತೀವ್ರತೆಗೆ ಕಾರಿನ ಭಾಗಗಳು ಸುತ್ತಮುತ್ತ ಚದುರಿಬಿದ್ದಿದ್ದು, ಸಮೀಪದ ಮನೆಗಳ ಶೀಟ್‌ಗಳು ಹಾರಿಹೋಗಿವೆ. ಅಲ್ಲದೆ, ಪಕ್ಕದಲ್ಲಿದ್ದ ವೈನ್ ಶಾಪ್ ಗೋಡೆಯ ಸಿಮೆಂಟ್ ಉದುರಿದ್ದು, ಬಿಯರ್ ಹಾಗೂ ಕೂಲ್‌ಡ್ರಿಂಕ್ಸ್ ಬಾಟಲಿಗಳು ನೆಲಕ್ಕುರುಳಿವೆ ಎಂದು ತಿಳಿದುಬಂದಿದೆ.

ಘಟನೆ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಬಳಿಕ ಜಮಖಂಡಿ ಗ್ರಾಮೀಣ ಪೊಲೀಸರು ಹಾಗೂ ಸೊಕೊ (SOCO) ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ.
ಸ್ಫೋಟದ ತೀವ್ರತೆಯನ್ನು ಗಮನಿಸಿದರೆ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಘಟನೆಯ ವೇಳೆ ಸುತ್ತಮುತ್ತಲಿನ ಪ್ರದೇಶದಲ್ಲಿ ಧೂಳು ಆವರಿಸಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಸ್ಫೋಟದ ಹಿಂದಿನ ಕಾರಣ ಪತ್ತೆಹಚ್ಚಲು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.






































































