ಕೋವಿಡ್ ಸಂಕಟ ಕಾಲದಲ್ಲಿ ಅವೆಷ್ಟೋ ಘಟನೆಗಳು ನಡೆದು ಹೋಗುತ್ತಿವೆ. ಆ ಘಟನೆಗಳ ಪಟ್ಟಿಯಲ್ಲೀಗ ಈ ಮದುವೆಯ ಸನ್ನಿವೇಶವೂ ಸೇರಿಕೊಂಡಿದೆ.
ಮದುವೆ ಸಮಾರಂಭದಲ್ಲಿ ತಾಳಿ ಕಟ್ಟುವ ಸಂದರ್ಭದಲ್ಲೇ ವಧು ಸಾವನ್ನಪ್ಪಿದ್ದು, ಅದೇ ಮಂಟಪದಲ್ಲಿ ವರನು ಮೃತ ವಧುವಿನ ತಂಗಿಯನ್ನೇ ವರಿಸಿದ ಪ್ರಸಂಗ ನಡೆದಿದೆ. ಇದು ಸಿನಿಮಾ ಅಲ್ಲ ನಿಜ.
ಈ ಪ್ರಸಂಗ ನಡೆದಿರುವುದು ಉತ್ತರಪ್ರದೇಶದ ಇಟವಾ ಜಿಲ್ಲೆಯ ಸನಾದ್ಪುರ ಎಂಬಲ್ಲಿ.
ಮನೋಜ್ ಕುಮಾರ್ ಮತ್ತು ಸುರಭಿ ಎಂಬ ಜೋಡಿ ನಡುವೆ ಮದುವೆ ಏರ್ಪಟ್ಟಿತ್ತು. ಕೋವಿಡ್ ಮಾರ್ಗಸೂಚಿ ಪಾಲಿಸುತ್ತಲೇ ನಡೆದ ಈ ಮದುವೆ ಸಮಾರಂಭದಲ್ಲಿ, ವರನು ವಧುವಿಗೆ ತಾಳಿ ಕಟ್ಟುವಾಗಲೇ ಬಯಾನಕ ಸನ್ನಿವೇಶ ನಡೆದುಹೋಗಿದೆ. ತಾಳಿ ಕಟ್ಟಿಸಿಕೊಂಡ ವಧು ಸುರಭಿ ಇದ್ದಕಿದ್ದಂತೆ ಕುಸಿದುಬಿದ್ದು ಕೊನೆಯುಸಿರೆಳೆದಿದ್ದಾಳೆ. ಈಕೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವುದನ್ನು ದೃಢಪಡಿಸಲಾಗಿದೆ.
ವಧುವಿನ ಸಾವಿನಿಂದಾಗಿ ಮದುವೆ ಮಂಟಪದಲ್ಲಿ ಕೋಲಾಹಲದ ಸನ್ನಿವೇಶ ಉಂಟಾಯಿಯಿತು.
ಅಷ್ಟೇ ಅಲ್ಲ, ಮದುವೆ ಸಮಾರಂಭದಲ್ಲಿ ಮುಂದಿನ ನಿರ್ಧಾರ ಏನು ಎಂಬ ಗಲಿಬಿಲಿಯೂ ಉಂಟಾಯಿತು. ಮದುವೆ ಕಾರ್ಯಕ್ರಮ ನಿಂತುಹೋದರೆ ಗಂಡು ಹಾಗೂ ಹಣ್ಣು ಕಡೆಯವರೆಲ್ಲರಿಗೂ ಒಳಿತಲ್ಲವಂತೆ. ಹಾಗಾಗಿ ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿದ್ದವರಿಗೆ ಯಾರೋ ಒಬ್ಬರು ಅಲ್ಲೇ ಹೊಸ ವಧುವನ್ನು ಹುಡುಕುವ ಸಲಹೆ ಮಾಡಿದ್ದಾರೆ. ಅದರಂತೆ ಮೃತ ವಧುವಿನ ತಂಗಿ ನಿಶಾ ಜೊತೆ ಮದುವೆಯ ತೀರ್ಮಾನವನ್ನು ಹಿರಿಯರು ಕೈಗೊಂಡರು.
ಮದುವೆ ಮನೆಯ ಒಂದು ಕೋಣೆಯಲ್ಲಿ ಮೃತದೇಹ ಇದ್ದಂತೆಯೇ ಮತ್ತೊಂದು ಕೊಠಡಿಯಲ್ಲಿ ವಿವಾಹ ಸಮಾರಂಭ ನೆರವೇರಿದೆ. ಈ ರೀತಿಯ ವಿವಾಹದ ಪ್ರಸಂಗ ಅಪರೂಪದಲ್ಲಿ ಅಪರೂಪವಾಗಿದ್ದರಿಂದಾಗಿ ದೇಶವ್ಯಾಪಿ ಅಚ್ಚರಿಯ ಸುದ್ದಿಯೆನಿಸಿದೆ.