ಬೆಂಗಳೂರು: ನೆಲಮಂಗಲ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವರ ಭೇಟಿ ನಡೆದ ಸುಮಾರು ಎರಡು ವರ್ಷಗಳ ನಂತರ, ಇಂದಿನಿಂದ BMTC ಬಸ್‌ಗಳ ಕಾರ್ಯಾಚರಣೆ ಆರಂಭಗೊಂಡಿದೆ. 2023ರಲ್ಲಿ ಪ್ರಾರಂಭವಾದ ಬಸ್ ನಿಲ್ದಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದರಿಂದ ಪ್ರಯಾಣಿಕರು ಸಾರಿಗೆ ಸೌಲಭ್ಯದಿಂದ ವಂಚಿತರಾಗಿದ್ದರು.
ಸಚಿವರಿಂದ ಪರಿಶೀಲನೆ, ನಿರ್ದೇಶನ:
ಆಗಸ್ಟ್ 25ರಂದು ಸಾರಿಗೆ ಹಾಗೂ ಮುಜರಾಯಿ ಸಚಿವರು ನೆಲಮಂಗಲ ಶಾಸಕರು, ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು, ನಗರಸಭಾ ಅಧ್ಯಕ್ಷರೊಂದಿಗೆ ಬಸ್ ನಿಲ್ದಾಣ ಕಾಮಗಾರಿಯನ್ನು ಪರಿಶೀಲಿಸಿದರು. ನಾಲ್ಕು ಬಸ್ ಬೇಗಳಲ್ಲಿ ಎರಡು ಪೂರ್ಣಗೊಂಡಿದ್ದು, ಉಳಿದ ಎರಡು ಬೇಗಳನ್ನು 30 ದಿನಗಳಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಿದರು. ವಾಣಿಜ್ಯೋದ್ದೇಶ ಕಟ್ಟಡಗಳ ಕಾಮಗಾರಿಯನ್ನೂ ಪರಿಶೀಲಿಸಿದರು.
ರಸ್ತೆ ಅಗಲ ಹೆಚ್ಚಿಸಲು ಸೂಚನೆ:
ಬಸ್ ನಿಲ್ದಾಣಕ್ಕೆ ಸಂಪರ್ಕಿಸುವ ಮುಖ್ಯರಸ್ತೆ ತುಂಬಾ ಚಿಕ್ಕದಾಗಿರುವುದರಿಂದ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯನ್ನು ಶಾಸಕರು ಹಾಗೂ ನಗರಸಭೆ ಅಧ್ಯಕ್ಷರು ಗಮನಕ್ಕೆ ತಂದರು. ಇದಕ್ಕೆ ಸಚಿವರು ರಸ್ತೆಯ ಅಗಲ ಹೆಚ್ಚಿಸಿ ಯೋಜನಾಬದ್ಧವಾಗಿ ಕಾರ್ಯಾಚರಣೆ ನಡೆಸುವಂತೆ ಅಭಿಯಂತರರಿಗೆ ಸೂಚಿಸಿದರು.
ಒಂದು ವರ್ಷದೊಳಗೆ ಪೂರ್ಣಗೊಳಿಸುವ ಗುರಿ:
ಸೆಪ್ಟೆಂಬರ್ 1ರಂದು ಸಭೆ ಕರೆಯಲಾಗಿದ್ದು, ಸಾಧಕ-ಬಾಧಕ ಚರ್ಚೆಯ ಬಳಿಕ ಬಸ್ ನಿಲ್ದಾಣವನ್ನು ಒಂದು ವರ್ಷದೊಳಗೆ ಸಂಪೂರ್ಣ ಪೂರ್ಣಗೊಳಿಸಲು ಗುರಿ ನಿಗದಿ ಮಾಡಲಾಗಿದೆ. ಈಗಾಗಲೇ ನಿರ್ಮಾಣವಾದ ಎರಡು ಬಸ್ ಬೇಗಳಿಂದ ಕಾರ್ಯಾಚರಣೆ ಆರಂಭವಾಗಿದ್ದು, ಇದರಿಂದ ನಿಲ್ದಾಣದ ಮುಂಭಾಗದಲ್ಲಿ ವಾಹನ ದಟ್ಟಣೆ ಕಡಿಮೆಯಾಗಲಿದೆ.