ದಾವಣಗೆರೆ :.ರಾಜ್ಯದ ಕೆಲವೆಡೆ ಕಾಣಿಸಿಕೊಂಡಿರುವ ಬ್ಲಾಕ್ ಫಂಗಸ್ ರೋಗದ ಬಗ್ಗೆ ಕೆಲವರು ವದಂತಿಗಳನ್ನು ಹರಡಿಸುತ್ತಿದ್ದು ಈ ಬಗ್ಗೆ ಜನತೆ ಭಯ ಭೀತರಾಗುವ ಅಗತ್ಯವಿಲ್ಲ. ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಇದೊಂದು ಶಿಲೀಂದ್ರದಿಂದ ಉಂಟಾಗುವ ರೋಗ. ಇದಕ್ಕೆ ಅನೇಕ ಕಾರಣಗಳಿವೆ. ಅತಿಯಾದ ಸ್ಟಿರಾಯ್ಡ್ ಸೇವನೆ, ಹೆಚ್ಚಿನ ಆಕ್ಸಿಜನ್ ಬಳಕೆ, ಹೆಚ್ಚು ಅವಧಿಗೆ ಐಸಿಯುನಲ್ಲಿರುವುದು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು, ಮಧುಮೇಹ, ಮೂತ್ರಪಿಂಡ, ಕ್ಯಾನ್ಸರ್ ಮುಂತಾದ ರೋಗಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಆಗಿದ್ದಲ್ಲಿ ಅಂತವರಿಗೆ ಕೋವಿಡ್ ಬಂದು ಹೋದ ನಂತರ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದೆ ಎಂದು ಕೋವಿಡ್ ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ದಾವಣಗೆರೆಯಲ್ಲಿ ಮಾತನಾಡಿದರು.
ಈಗಾಗಲೇ ಈ ರೋಗದ ಪತ್ತೆ, ಚಿಕಿತ್ಸೆ ಮತ್ತು ಔಷಧೋಪಚಾರಗಳ ಬಗ್ಗೆ ವರದಿ ನೀಡಲು ತಜ್ಞರ ಸಮಿತಿ ರಚಿಸಲಾಗಿದೆ. ಇಂದು ಅವರು ವರದಿ ನೀಡುವ ನಿರೀಕ್ಷೆಯಿದೆ. ಆರಂಭಿಕ ಹಂತದಲ್ಲಿ ಇಎನ್‌ಟಿ ತಜ್ಞರು ಪರಿಶೀಲನೆ ನಡೆಸಬೇಕು. ಹೀಗಾಗಿ ಕೋವಿಡ್ ನಿಂದ ಗುಣಮುಖರಾದ ಎಲ್ಲರಲ್ಲಿ ಈ ಕಾಯಿಲೆ ಸಂಬಂಧ ತಪಾಸಣೆ ನಡೆಸಬೇಕು ಎಂದು ಸೂಚನೆ ನೀಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.
ಫಂಗಸ್ ಚಿಕಿತ್ಸೆಗೆ ಸಂಬಂಧಿಸಿದ ಔಷಧದ ಸರಬರಾಜು ಕಡಿಮೆಯಿದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯಕ್ಕೆ ಕಳುಹಿಸಿಕೊಡುವಂತೆ ಕೇಂದ್ರ ಸಚಿವ ಸದಾನಂದಗೌಡರಿಗೆ ಮನವಿ ಮಾಡಲಾಗಿದೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಔಷಧ ಲಭ್ಯವಾಗಲಿದೆ. ಈಗಾಗಲೇ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವಂತೆ ಸೂಚನೆಯನ್ನೂ ನೀಡಲಾಗಿದೆ. ಹೀಗಾಗಿ ಜನರು ಆತಂಕ ಪಡುವ ಭಯಭೀತರಾಗುವ ಅಗತ್ಯವಿಲ್ಲ ಎಂದರು.
ಇನ್ನೂ ಕೋವಿಡ್ ಎರಡನೇ ಅಲೆ ಕೆಲ ಜಿಲ್ಲೆಗಳಲ್ಲಿ ಹೊರತುಪಡಿಸಿ ಹೆಚ್ಚಿನ ಜಿಲ್ಲೆಗಳಲ್ಲಿ ಇಳಿಮುಖ ಸ್ಥಿತಿಯಲ್ಲಿದೆ. ಇದು ಸಮಾಧಾನಕರ ಅಂಶ. ರಾಜ್ಯ ಸರ್ಕಾರ ಕೈಗೊಂಡ ಕಠಿಣ ಕ್ರಮ ಮತ್ತು ಜನತೆಯ ಸಹಕಾರದಿಂದ ಇದು ಸಾಧ್ಯವಾಗಿದೆ. ಇದೇ ರೀತಿ ಜನತೆ ಸಹಕಾರ ನೀಡಿದರೆ ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಬಹುದಾಗಿದೆ ಎಂದು ತಿಳಿಸಿದರು.