ಬೆಂಗಳೂರು: ವಿಧಾನಭಾ ಚುನಾವಣೆಗೆ ಇನ್ನೇನು ಒಂದೂವರೆ ವರ್ಷ ಬಾಕಿ ಇರುವಾಗಲೇ ಪಕ್ಷಾಂತರ ಪರ್ವಕ್ಕೆ ವೇದಿಕೆ ಸಜ್ಜಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಬಿಜೆಪಿ-ಜೆಡಿಎಸ್ ಪಕ್ಷಗಳ 25ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ ಸೇರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೆ.ಜೆ.ಜಾರ್ಜ್ ಉಪಸ್ಥಿತಿಯಲ್ಲಿ ಕೈ ನಾಯಕರ ರಹಸ್ಯ ಸಭೆ ನಡೆದಿತ್ತು.ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುತೂಹಲಕಾರಿ ಸಂಗತಿಯನ್ನು ಹರಿಯಬಿಟ್ಟಿದ್ದಾರೆ.
ಬಿಜೆಪಿ ಸಚಿವರು ಹಾಗೂ ಇತರೆ ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆಂದು ಡಿಕೆಶಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ 20 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆ.ಶಿವಕುಮಾರ್, ಬಿಜೆಪಿ ಸಚಿವರೊಬ್ಬರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದರು. ಆ ಸಚಿವರ ಹೆಸರನ್ನು ಬಹಿರಂಗಡಿಸಲು ಅವರು ನಿರಾಕರಿಸಿದರು. ಆ ಸಚಿವರು ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ಅವರ ಜೊತೆಗೆ ಸಂಪರ್ಕದಲ್ಲಿದ್ದಾರೆಂದು ಡಿಕೆಶಿ ತಿಳಿಸಿದರು.
ಇಬ್ಬರು ಮಾಜಿ ಸ್ವತಂತ್ರ ಶಾಸಕರಾದ ಎಚ್ ನಾಗೇಶ್ ಮತ್ತು ಆರ್ ಶಂಕರ್ ಅವರು ಸಚಿವ ಸ್ಥಾನ ವಂಚಿತರಾದ ಬಳಿಕ ಬಿಜೆಪಿ ನಾಯಕರ ಬಗ್ಗೆ ಮನಿಸಿಕೊಂಡಿದ್ದಾರೆನ್ನಲಾಗಿದೆ. ಅವರಷ್ಟೇ ಅಲ್ಲ, ಬಿಜೆಪಿಯ ಇನ್ನೂ ಅನೇಕರು ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆನ್ನಲಾಗಿದೆ.