ವಿಜಯಪುರ: ಸಿಎಂ ಬದಲಾವಣೆ ನಂತರ ರಾಜ್ಯ ಬಿಜೆಪಿಯಲ್ಲಿ ಒಳಗೊಳಗೆ ಬೇಗುದಿ ಇದೆಯಂತೆ. ಹಲವರು ಸಿಎಂ ಬಸವರಾಜ್ ಬೊಮ್ಮಾಯಿ ನಾಯಕತ್ವದ ಬಗ್ಗೆಯೂ ಬೇಸರಗೊಂಡಿದ್ದಾರಂತೆ. ಹಾಗಾಗಿ ಹಲವರು ಕಮಲ ಶಾಸಕರು ಕೈ ಹಿಡಿಯುತ್ತಾರೆಂಬುದು ಕಾಂಗ್ರೆಸ್ ನಾಯಕರ ಹೇಳಿಕೆ. ಇದೀಗ ಮತ್ತೊಬ್ಬ ಕಾಂಗ್ರೆಸ್ ನಾಯಕ, ಮಾಜಿ ಶಾಸಕ ರಾಜು ಕಾಗೆ ಸಿಡಿಸಿರುವ ಬಾಂಬ್ ಈ ಸುದ್ದಿಗೆ ಗುದ್ದು ಕೊಟ್ಟಿದೆ.
ಕೆಲವು ದಿನಗಳ ಹಿಂದೆ ಯಡಿಯೂರಪ್ಪ ಆಪ್ತ, ತುಮಕೂರು ಜಿಲ್ಲೆಯ ಶಾಸಕ ಸುರೇಶ್ ಗೌಡ ಅವರು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಸ್ಫೋಟಕ ಹೇಳಿಕೆಯೊಂದನ್ನು ನೀಡಿ ರಾಜ್ಯ ರಾಜಕಾರಣದಲ್ಲಿನ ಮುಂದಿನ ಬೆಳವಣಿಗೆ ಬಗೆಗಿನ ಕುತೂಹಲವನ್ನು ಹೆಚ್ಚಿಸಿದ್ದರು. ತಮ್ಮ ಮಿತ್ರರೂ ಆಗಿರುವ ಬಿಜೆಪಿ ಶಾಸಕ ಸುರೇಶ್ ಗೌಡ ಅವರು ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಿದ್ದು ಕಾಂಗ್ರೆಸ್ ಸೇರಲಿದ್ದಾರೆ ಎಂದು ತಿಳಿಸಿದ್ದರು.
ಇನ್ನೊಂದೆಡೆ ವಿಜಯಪುರ ಜಿಲ್ಲೆ ಮದಭಾವಿ ಗ್ರಾಮದಲ್ಲಿ ಕಾಂಗ್ರೆಸ್ ಮಾಜಿ ಶಾಸಕ ರಾಜು ಕಾಗೆ ಅವರು ರಾಜಣ್ಣರ ಹೇಳಿಕೆಗೆ ರೋಚಕತೆ ತುಂಬಿದ್ದಾರೆ. ಶೀಘ್ರವೇ 40 ಮಂದಿ ಶಾಸಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂದು ಅವರು ತಿಳಿಸಿದರು.
ಮದಭಾವಿ ಗ್ರಾಮದಲ್ಲಿ ಕ್ರಿಕೆಟ್ ಪಂದ್ಯಾವಳಿ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜು ಕಾಗೆ, ರಾಜ್ಯ ಬಿಜೆಪಿ ಸರ್ಕಾರದಲ್ಲಿ ವೈಮನಸ್ಸು ಉಂಟಾಗಿದ್ದು, ಒಬ್ಬರೊಬ್ಬರಲ್ಲಿ ಹೊಂದಾಣಿಕೆ ಇಲ್ಲದ್ದರಿಂದ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಹಾಗಾಗಿ ಶೀಘ್ರವೇ 40 ಮಂದಿ ಶಾಸಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂದರು.
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹಲವರು ಬೇಸರಗೊಂಡಿದ್ದಾರೆ. ಅನೇಕರನ್ನು ಸಚಿವ ಸಂಪುಟದಿಂದ ದೂರ ಇಟ್ಟಿದ್ದಾರೆ. ಈ ಪೈಕಿ ಬೆಳಗಾವಿ ಜಿಲ್ಲೆಯ ಮೂವರು ಕೂಡಾ ಕಾಂಗ್ರೆಸ್‌ಗೆ ಬರಲಿದ್ದಾರೆ ಎಂದವರು ಹೇಳಿದರು.
ಕಾಗೆ ಹೇಳಿಕೆ ಕುರಿತಂತೆ ಬೆಳಗಾವಿ ಜಿಲ್ಲೆ ಕರಗುಪ್ಪಿಯಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಹಿರಿಯ ನಾಯಕ ಸತೀಶ್ ಜಾರಕಿಹೊಳಿ ಕೂಡಾ ಕುತೂಹಲಕಾರಿ ವಿಷಯ ಬಹಿರಂಗಪಡಿಸಿದರು. ಹಲವು ಬಿಜೆಪಿ ಶಾಸಕರು ಕಾಂಗ್ರೆಸ್ ಹಿರಿಯ ನಾಯಕರ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ ಎಂದರು.