ಬೆಳಗಾವಿ: ಉಡುಪಿ, ದಕ್ಷಿಣ ಕನ್ನಡ, ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ 3 ಗುಂಟೆ (7.50 ಸೆಂಟ್ಸ್)ಗಿಂತ ಕಡಿಮೆ ವಿಸ್ತೀರ್ಣ ಹೊಂದಿರುವ ಸರ್ವೇ ನಂಬರ್ ಗಳನ್ನು ಸೃಜಿಸುವುದನ್ನು ತಡೆಹಿಡಿದು ಈ ವಿಸ್ತೀರ್ಣಕ್ಕೆ 11E ನಕ್ಷೆಗಳನ್ನು ತಯಾರಿಸುವಂತಿಲ್ಲ ಹಾಗೂ ವಿತರಿಸುವಂತಿಲ್ಲ ಎಂದು ಹೊರಡಿಸಲಾಗಿರುವ ಆದೇಶದಲ್ಲಿನ ನಿಯಮವನ್ನು ಸಡಿಲಿಸಿ ಆರ್ಥಿಕವಾಗಿ ಹಿಂದುಳಿದವರು ಮತ್ತು ಸಾಮಾನ್ಯ ವರ್ಗದವರು ಕಡಿಮೆ ವಿಸ್ತೀರ್ಣದ ಜಾಗ ಖರೀದಿಸಿ ವಾಸ್ತವ್ಯದ ಮನೆಗಳನ್ನು ನಿರ್ಮಿಸಲು ಅವಕಾಶ ಕಲ್ಪಿಸುವ ಬಗ್ಗೆ ಸದನದಲ್ಲಿ ಕೇಳಿರುವ ಪ್ರಶ್ನೆಗೆ ಉತ್ತರ ನೀಡದಿರುವುದಕ್ಕೆ ಶಾಸಕ ಕೆ ರಘುಪತಿ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಅವರು ವಿಧಾನ ಸಭೆಯಲ್ಲಿ ಧ್ವನಿ ಎತ್ರಿದ್ದಾರೆ. ಸದನದಲ್ಲಿ ಈ ಸಮಸ್ಯೆ ಬಗ್ಗೆ ಗಮನಸೆಳೆದಾಗ ಸಭಾಧ್ಯಕ್ಷರು, ಬುಧವಾರ ಉತ್ತರ ಕೊಡಿಸುವುದಾಗಿ ಹಾಗೂ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದರು. ಆದರೆ ಸದನದಲ್ಲಿ ಕಂದಾಯ ಸಚಿವರು ಉಪಸ್ಥಿತರಿರುವುದರಿಂದ ಈ ಬಗ್ಗೆ ಉತ್ತರಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉಡುಪಿ, ದಕ್ಷಿಣ ಕನ್ನಡ, ಕೊಡಗು ಮತ್ತು ಉತ್ತರ ಕನ್ನಡ ಭಾಗದ ಶಾಸಕರು ಧ್ವನಿಗೂಡಿಸಿದರು. ಆದರೆ ಸಭಾಧ್ಯಕ್ಷರು ಬುಧವಾರ ಉತ್ತರ ಕೊಡಿಸುವುದಾಗಿ ಹಾಗೂ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದರು.
ಇದಕ್ಕೆ ಸಮಾಧಾನಗೊಳ್ಳದ ಶಾಸಕ ಕೆ ರಘುಪತಿ ಭಟ್ ಅವರು ಈ ಆದೇಶದಿಂದ ಸಾಮಾನ್ಯ ಜನತೆ ಸಂಕಷ್ಟಕ್ಕೆ ಒಳಗಾಗಿರುವುದರಿಂದ ಸಚಿವರಿಂದ ಸಮಗ್ರವಾದ ಜನಪರವಾದ ಉತ್ತರವನ್ನು ಬಯಸುತ್ತೇನೆ. ಈ ಆದೇಶವನ್ನು ರದ್ದು ಪಡಿಸಬೇಕು. ಇಲ್ಲದಿದ್ದಲ್ಲಿ ಆಡಳಿತ ಪಕ್ಷದ ಸದಸ್ಯನಾಗಿ ಸದನದಲ್ಲಿ ಧರಣಿ ನಡೆಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.