ನವದೆಹಲಿ: ಸುಪ್ರೀಂ ಕೋರ್ಟ್ ದೇಶದ ಎಲ್ಲಾ ಹೈಕೋರ್ಟ್‌ಗಳಿಗೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕುಂದುಕೊರತೆ ಪರಿಹಾರ ಸಮಿತಿಗಳನ್ನು (GRC) ರಚಿಸುವಂತೆ ಸೂಚಿಸಿದೆ. ಬಾರ್ ಸದಸ್ಯರು ಮತ್ತು ನ್ಯಾಯಾಂಗದ ನಡುವೆ ಉಂಟಾಗುವ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಹಾಗೂ ತ್ವರಿತವಾಗಿ ಬಗೆಹರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠ, ಬಾರ್ ಕೌನ್ಸಿಲ್ ಹಾಗೂ ಬಾರ್ ಅಸೋಸಿಯೇಷನ್ ಸದಸ್ಯರನ್ನು ಒಳಗೊಂಡ ಸಮಿತಿಗಳು ವಕೀಲರು ಮತ್ತು ನ್ಯಾಯಾಧೀಶರ ನಡುವೆ ಉತ್ತಮ ಸಂಬಂಧ ಬೆಳೆಸಲು ಸಹಕಾರಿ ಎಂದು ಅಭಿಪ್ರಾಯಪಟ್ಟಿದೆ.
ಆಂಧ್ರಪ್ರದೇಶ ಹೈಕೋರ್ಟ್‌ನ ನ್ಯಾಯಾಧೀಶ ತರ್ಲದಾ ರಾಜಶೇಖರ್ ರಾವ್ ಹಾಗೂ ಯುವ ವಕೀಲರ ನಡುವಿನ ಘಟನೆಯ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ದಾಖಲಾದ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತು. ಈ ವಿಷಯವನ್ನು ಈಗಾಗಲೇ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಹೈಕೋರ್ಟ್ ವಕೀಲರ ಸಂಘ ಸೌಹಾರ್ದಯುತವಾಗಿ ಬಗೆಹರಿಸಿರುವುದರಿಂದ ಹೆಚ್ಚಿನ ನಿರ್ದೇಶನಗಳ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು.
ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ವಿಕಾಸ್ ಸಿಂಗ್, ಇಂತಹ ಘಟನೆಗಳು ಮರುಕಳಿಸದಂತೆ ಸಾಂಸ್ಥಿಕ ವ್ಯವಸ್ಥೆ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಯುವ ವಕೀಲರನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಒತ್ತಿಹೇಳಿದ ಸುಪ್ರೀಂ ಕೋರ್ಟ್, ನ್ಯಾಯಾಧೀಶರು ತಾಳ್ಮೆ, ಸಹಾನುಭೂತಿ ಮತ್ತು ಪ್ರೋತ್ಸಾಹದ ಮನೋಭಾವ ಹೊಂದಿರಬೇಕು ಎಂದು ತಿಳಿಸಿತು.
ಇದೇ ವೇಳೆ, ಸಂದರ್ಭವಿಲ್ಲದೆ ನ್ಯಾಯಾಲಯದ ವಿಡಿಯೋ ತುಣುಕುಗಳನ್ನು ಪ್ರಸಾರ ಮಾಡುವುದರಿಂದ ಅನಗತ್ಯ ಪೂರ್ವಾಗ್ರಹ ಉಂಟಾಗಬಹುದು ಎಂದು ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ ನ್ಯಾಯಾಲಯ, ಕಾನೂನು ವರದಿಗಾರರು ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿರುವುದನ್ನೂ ಶ್ಲಾಘಿಸಿತು.

























































