ಬೆಂಗಳೂರು: ಭಾರತ್ ಬಂದ್ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯ ಮೇಲೆಯೇ ವಾಹನ ಹತ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಈ ಘಟನೆ ನಡೆದಿದೆ. ಐಪಿಎಸ್ ಅಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಅವರ ಕಾಲಿನ ಮೇಲೆ ಕಾರು ಹರಿದಿದೆ.
ಗೊರಗುಂಟೆಪಾಳ್ಯದಲ್ಲಿ ರೈತರ ಪರ ಪ್ರತಿಭಟನೆ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಸ್ಥಳದಲ್ಲಿ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಕೂಡಾ ಬಂದೋ ಬಸ್ತ್‌ನಲ್ಲಿ ಇದ್ದರು. ಆ ವೇಳೆ ಕಾರೊಂದು ಡಿಸಿಪಿ ಅವರ ಕಾಲಿನ ಮೇಲೆ ಹರಿದಿದೆ.
ಕೂಡಲೇ ಧಾವಿಸಿದ ಇತರ ಪೊಲೀಸ್ ಸಿಬ್ಬಂದಿ ಗಾಯಗೊಂಡ ಡಿಸಿಪಿ ಅವರನ್ನು ಪಾರು ಮಾಡಿದ್ದಾರೆ. ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಅವರ ಕಾಲಿಗೆ ತೀವ್ರ ಗಾಯಗಳಾಗಿದೆ ಎನ್ನಲಾಗಿದ್ದು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.
ಈ ನಡುವೆ ರೈತ ಮುಖಂಡರೊಬ್ಬರದ್ದು ಎನ್ನಲಾದ ಕಾರು ಚಾಲಕ ಈ ಅವಾಂತರಕ್ಕೆ ಕಾರಣವಾಗಿದ್ದು, ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಿದ್ದಾರೆ.