ಮಂಗಳೂರು: 2019ರ ಆ.9 ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಜನರಿಗೆ ಎಂದೂ ಮರೆಯದ ಕರಾಳ ದಿನ. ದಿಢೀರನೆ ಅಪ್ಪಳಿಸಿದ ಪ್ರವಾಹ ಬೆಳ್ತಂಗಡಿಯ ಹಲವು ಗ್ರಾಮಗಳನ್ಮ ತತ್ತರಗೊಳಿಸಿತ್ತು. ಪ್ರಕೃತಿಯ ಮುನಿಸಿನಿಂದಾಗಿ ಅನೇಕ ಕುಟುಂಬಗಳು ಬೀದಿಗೆ ಬಿದ್ದವು. ಶಾಂತವಾಗಿ ಹರೀತಾ ಇದ್ದ ನದಿಗಳು ಅಬ್ಬರಿಸಿದ ಪರಿಣಾಮ ನೂರಾರು ಜನರ ಬದುಕು ನೀರು ಪಾಲಾಗಿದ್ದವು.
ಯಾವ ಸಾಕ಼್ಯಗಳೂ ಉಳಿಯದಂತೆ ಅಕ್ಷರಶಃ ನರಕವಾಗಿದ್ದ ಬೆಳ್ತಂಗಡಿಯ ಕೊಳಂಬೆ ಗ್ರಾಮದಲ್ಲಿ ಪ್ರವಾಹದ ಮೂರು ವರ್ಷದ ಬಳಿಕ ಪವಾಡವೊಂದು ನಡೆದಿದೆ. ಮನೆ, ಕೃಷಿ ಭೂಮಿ ಕಳೆದುಕೊಂಡು ಅನಾಥವಾಗಿದ್ದ ಜನರ ಬದುಕನ್ನ ಮತ್ತೆ ಆ ಯುವಕರ ತಂಡ ಕಟ್ಟಿ ಕೊಟ್ಟಿದೆ. ಬೆಳ್ತಂಗಡಿಯ ಉಜಿರೆಯ ‘ಬದುಕು ಕಟ್ಟೋಣ’ ತಂಡ ಪ್ರವಾಹಕ್ಕೆ ತತ್ತರಿಸಿದ್ದ ಬೆಳ್ತಂಗಡಿಯ ಕೊಳಂಬೆ ಗ್ರಾಮದಲ್ಲಿ 12 ಮನೆಗಳನ್ನ ಮತ್ತೆ ನಿರ್ಮಿಸಿ ಇಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಶಾಸ್ತ್ರೋಕ್ತವಾಗಿ ಗೃಹ ಪ್ರವೇಶ ಕೈಂಕರ್ಯ ನೆರವೇರಿದೆ.
ಹೊಸ ಮನೆಗಳಿಗೆ ಲಹರಿ, ಪ್ರೇರಣಾ, ಓಂಕಾರ, ಚಂದನ, ಸಂಪಿಗೆ, ಕನಸು, ಇಂಚರ, ಐಶ್ವರ್ಯ, ಗೋಕುಲ, ನಕ್ಷತ್ರ, ಭ್ರಾಮರಿ ಮತ್ತು ಸಮೃದ್ಧಿ ಎಂದು ನಾಮಕರಣ ಮಾಡಲಾಗಿದೆ. ರಾಜಪ್ಪ ಪೂಜಾರಿ, ಕಮಲಾ, ಪ್ರೇಮಾ, ನಿಶಾಂತ್, ದಿನೇಶ್, ವೇದಾವತಿ, ಯಶೋದಾ, ಪೂವಪ್ಪ ಗೌಡ, ಸಂಜೀವ ಗೌಡ, ಕಲ್ಯಾಣಿ, ಗಣೇಶ ಗೌಡ ಮತ್ತು ಬೊಮ್ಮಕ್ಕ ಅವರು ನೂತನ ಮನೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.