ಬೆಳಗಾವಿ: ಜೆಡಿಎಸ್‍ಗೆ ನೀಡುವ ಒಂದೊಂದು ಮತವೂ ಕಾಂಗ್ರೆಸ್ಸನ್ನು ಗೆಲ್ಲಿಸುತ್ತದೆ. ಆದ್ದರಿಂದ ಸರ್ವರ ಅಭಿವೃದ್ಧಿಗೆ ಶ್ರಮಿಸುವ ಬಿಜೆಪಿಯನ್ನು ಬೆಂಬಲಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜನತೆಯಲ್ಲಿ ಮನವಿ ಮಾಡಿದ್ದಾರೆ
ಬೆಳಗಾವಿಯ ಎಂ.ಕೆ.ಹುಬ್ಬಳ್ಳಿಯಲ್ಲಿ ‘ಜನಸಂಕಲ್ಪ ಯಾತ್ರೆ’ ಅಂಗವಾಗಿ ಬಿಜೆಪಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕವು ರಾಣಿ ಚನ್ನಮ್ಮ ಸೇರಿ ಅನೇಕರು ಬಲಿದಾನ ಮಾಡಿದ ರಾಜ್ಯ ಎಂದ ಅವರು, ಕರ್ನಾಟಕದ ಜನರು ಏಪ್ರಿಲ್- ಮೇಯಲ್ಲಿ ಕುಟುಂಬವಾದದ ಜೆಡಿಎಸ್- ಕಾಂಗ್ರೆಸ್ ಪಕ್ಷಗಳನ್ನು ತಿರಸ್ಕರಿಸಿ ರಾಷ್ಟ್ರಭಕ್ತರ ಪಕ್ಷವಾದ ಬಿಜೆಪಿಯನ್ನು ಆಯ್ಕೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯವನ್ನು ದೆಹಲಿಯ ಎಟಿಎಂ ಮಾಡುವ ಕಾಂಗ್ರೆಸ್ ಮತ್ತು ಕುಟುಂಬವಾದವನ್ನು ಪೋಷಿಸುವ ಜೆಡಿಎಸ್ ಅನ್ನು ತಿರಸ್ಕರಿಸಿ ಎಂದು ಮನವಿ ಮಾಡಿದರು. ಕಾಂಗ್ರೆಸ್ ಆಡಳಿತವು ಭ್ರಷ್ಟರ ಆಡಳಿತವಾಗಿತ್ತು ಎಂದು ತಿಳಿಸಿದರು.
ಕರ್ನಾಟಕದ ಜೊತೆಗೇ ಭಾರತದ ವಿಕಾಸ ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಅವರು ವಿವರಿಸಿದರು. ಮನೆಗಳ ವಿತರಣೆ, 10 ಕೋಟಿ ಶೌಚಾಲಯ ನಿರ್ಮಾಣ, ಮನೆ ಮನೆಗೆ ಗ್ಯಾಸ್ ಸಂಪರ್ಕ, ಆಯುಷ್ಮಾನ್ ಯೋಜನೆ ಜಾರಿ ಸೇರಿ ಅನೇಕ ಜನಪರ ಯೋಜನೆಗಳನ್ನು ನಾವು ಜಾರಿಗೊಳಿಸಿದ್ದೇವೆ ಎಂದು ತಿಳಿಸಿದರು.
ಮೋದಿಜಿ ಸರಕಾರವು ಉಚಿತವಾಗಿ ಕೋವಿಡ್ ಲಸಿಕೆ ಕೊಟ್ಟಿದ್ದಲ್ಲದೆ, 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರವನ್ನು ಕೋವಿಡ್ ಅವಧಿಯಲ್ಲಿ ನೀಡಿತ್ತು. ಆದರೆ, ಕಾಂಗ್ರೆಸ್ಸಿಗರು ಬಡವರಿಗಾಗಿ ಏನನ್ನು ನೀಡಿದ್ದಾರೆ ಎಂದು ಪ್ರಶ್ನಿಸಿದರು.
ರಾಜ್ಯಕ್ಕೆ ಮಹದಾಯಿಯ ನೀರು ನೀಡಲು ಬೊಮ್ಮಾಯಿಯವರು ಶ್ರಮಿಸಿದ್ದಾರೆ ಎಂದ ಅವರು, ಮಹದಾಯಿಯ ನೀರನ್ನು ಕರ್ನಾಟಕಕ್ಕೆ ಕೊಡುವುದಿಲ್ಲ ಎಂದು ಕಾಂಗ್ರೆಸ್ಸಿನ ಸೋನಿಯಾ ಗಾಂಧಿಯವರು ಹೇಳಿದ್ದನ್ನು ನೆನಪಿಸಿದರು. ಬಿಜೆಪಿ ಮಹದಾಯಿ ನೀರಿನ ವಿವಾದವನ್ನು ಪರಿಹರಿಸಿದೆ ಎಂದು ತಿಳಿಸಿದರು.
https://twitter.com/BJP4Karnataka/status/1619325744987144199?t=6FYV_RzuxKyQq8P90loOhQ&s=19
ಕಾಂಗ್ರೆಸ್ ಪಕ್ಷ ಉತ್ತರ ಕರ್ನಾಟಕಕ್ಕಾಗಿ ಏನು ಮಾಡಿದೆ ಎಂದು ಕೇಳಿದ ಅವರು, ಈ ಭಾಗದ ರೈಲ್ವೆ ಅಭಿವೃದ್ಧಿ, ಮೆಗಾ ಉದ್ಯೋಗ ಟೌನ್‍ಶಿಪ್ ನಿರ್ಮಾಣ ಸೇರಿದಂತೆ ವಿವಿಧ ಯೋಜನೆ ಜಾರಿ ಮಾಡಿದ್ದನ್ನು ವಿವರಿಸಿದರು. ಬೈಲಹೊಂಗಲದಲ್ಲಿ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ನಿರ್ಮಣ, ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿದ್ದನ್ನು ಜನರಿಗೆ ತಿಳಿಸಿದರು.
ಕಾಶ್ಮೀರ ನಮ್ಮ ಅವಿಭಾಜ್ಯ ಅಂಗ ಎಂದು ತಿಳಿಸಿದ ಅವರು, ಮೋದಿಜಿ ಅವರ ನೇತೃತ್ವದಲ್ಲಿ 370ನೇ ವಿಧಿ ರದ್ದು ಮಾಡಿ ಕಾಶ್ಮೀರವನ್ನು ಭಾರತದ ಜೊತೆ ಸೇರಿಸಿದ್ದನ್ನು ತಿಳಿಸಿದರು. ಬಿಜೆಪಿ ಆತಂಕವಾದಕ್ಕೆ ಮುಕ್ತಿ ಕೊಟ್ಟಿದೆ. ದೇಶವನ್ನು ಸರ್ವತೋಮುಖ ಅಭಿವೃದ್ಧಿಗೆ ಒಯ್ಯುತ್ತಿದೆ ಎಂದು ತಿಳಿಸಿದರು.
ದೇಶ ಹಿಂದುಳಿಯಲು ಕಾಂಗ್ರೆಸ್ ಕಾರಣವಾಗಿತ್ತು. ಮೋದಿಜಿ 5 ಟ್ರಿಲಿಯನ್ ಇಕಾನಮಿ ಮಾಡಲು ಮುಂದಾಗಿದ್ದಾರೆ. ದೇಶವನ್ನು ಸದೃಢ ಆರ್ಥಿಕ ರಾಷ್ಟ್ರವಾಗಿ ಮಾಡಿದ್ದಾರೆ. ಮೋದಿಜಿ ಅವರ ಕೈಯನ್ನು ಬಲಪಡಿಸಲು ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ ನೀಡಬೇಕೆಂದು ಮನವಿ ಮಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಹಿಂದೆ ಕಣ್ಣಿಗೆ ಕಾಣುವ ಬ್ರಿಟಿಷರು ನಮ್ಮ ವೈರಿಗಳಾಗಿದ್ದರು ಎಂದರಲ್ಲದೆ, ಭಯೋತ್ಪಾದನೆಗೆ ಕಾರಣರಾದ ಪಿಎಫ್‍ಐ ನಿಷೇಧಿಸಿದ ಅಮಿತ್ ಶಾ ಅಭಿನಂದನೀಯರು ಎಂದರು. ದೇಶ ಶಾಂತವಾಗಿದ್ದರೆ ಪ್ರಗತಿ ಕಾಣಲು ಸಾಧ್ಯ. ಕಾನೂನು, ಸುವ್ಯವಸ್ಥೆ ಸದೃಢವಾಗಿರಲು ಜನರು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ದೇಶಕ್ಕೆ ಉತ್ತಮ, ಸರ್ವತೋಮುಖ ಅಭಿವೃದ್ಧಿಯ ಆಡಳಿತವನ್ನು ಮೋದಿಜಿ ಮತ್ತು ಅಮಿತ್ ಶಾ ಜಿ ಅವರು ನೀಡಿದ್ದಾರೆ. ಯುಪಿಎ ಆಡಳಿತ ಇದ್ದಾಗ ದೇಶ ಛಿದ್ರ ಆಗುವ ಪರಿಸ್ಥಿತಿ ಇತ್ತು. ಡಬಲ್ ಎಂಜಿನ್ ಸರಕಾರದ ಮೂಲಕ ಸರ್ವತೋಮುಖ ಅಭಿವೃದ್ಧಿ ಆಗಬೇಕಿದೆ ಎಂದ ಅವರು, ಹಲವಾರು ದೌರ್ಭಾಗ್ಯವನ್ನು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಈಗ ಪ್ರಜಾಧ್ವನಿ ನೆನಪಾಗಿದೆ. ಕಾಂಗ್ರೆಸ್ ಇದ್ದಾಗ ಸಾಮಾಜಿಕ ನ್ಯಾಯವು ಕೇವಲ ಭಾಷಣದ ಸರಕಾಗಿತ್ತು. ಜನರು ಮಾತಿನ ಮೋಸಕ್ಕೆ ಮಣಿಯುವುದಿಲ್ಲ ಎಂದು ತಿಳಿಸಿದರು.
ಹಿಂದೆ ಕಾಂಗ್ರೆಸ್ ಪಕ್ಷವು ಅಪಪ್ರಚಾರ ಮಾಡುವ ಮೂಲಕ ಅಧಿಕಾರದ ಗುತ್ತಿಗೆ ಪಡೆದಿತ್ತು. ನಾವು ಅಭಿವೃದ್ಧಿಯ ಸರಕಾರಗಳನ್ನು ನೀಡಿದ್ದೇವೆ. ರೈತರ, ಮಹಿಳೆಯರ, ಯುವಕರು ಸೇರಿ ಎಲ್ಲ ವರ್ಗದ ಜನರಿಗೆ ನ್ಯಾಯ ಕೊಡುವ ಕೆಲಸವನ್ನು ಬಿಜೆಪಿ ಮಾಡಿದೆ ಎಂದು ನೆನಪಿಸಿದರು. ವಿದ್ಯಾನಿಧಿ, ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ, ಸ್ತ್ರೀಸಾಮಥ್ರ್ಯ ಯೋಜನೆ ಸೇರಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದನ್ನು ವಿವರಿಸಿದರು.
ನುಡಿವಂತೆ ನಡೆದ ಸರಕಾರ ನಮ್ಮದು. ಕಾಂಗ್ರೆಸ್ ಪಕ್ಷಕ್ಕೆ ಸೋಲಿನ ಭೀತಿ ಕಾಡುತ್ತಿದೆ. ಅದಕ್ಕಾಗಿ ಸುಳ್ಳು ಭರವಸೆಗಳ ಜೊತೆಗೆ ಕೀಳು ಮಟ್ಟದ ಭಾಷೆ ಬಳಸುತ್ತಾರೆ. ಕರ್ನಾಟಕದ ಜನರು ಕಾಂಗ್ರೆಸ್ ಪಕ್ಷದವರನ್ನು ಸೋಲಿಸುವುದು ಖಚಿತ ಎಂದ ಅವರು, ಈ ಜಿಲ್ಲೆಯಲ್ಲಿ 18ರಲ್ಲಿ 15 ಸ್ಥಾನ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಮತ್ತು ಪಕ್ಷದ ಹಿರಿಯರಾದ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷವು ಸ್ವಾರ್ಥಪರ ಆಡಳಿತವನ್ನು ನೀಡಿತ್ತು. ಪ್ರಧಾನಿ ನರೇಂದ್ರ ಮೋದಿಜಿ ಅವರು ದೇಶದ ಸರ್ವತೋಮುಖ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ. ಕಾಂಗ್ರೆಸ್ ಪಕ್ಷವು ಕಚ್ಚಾಟದಿಂದ ಅಧಿಕಾರ ಕಳೆದುಕೊಂಡಿದೆ ಎಂದು ತಿಳಿಸಿದರು.
ಕಿಸಾನ್ ಸಮ್ಮಾನ್, ವಿಮಾ ಯೋಜನೆ ಸೇರಿ ಅನೇಕ ಜನಪರ ಯೋಜನೆಗಳನ್ನು ಕೇಂದ್ರ ಸರಕಾರವು ಜಾರಿಗೊಳಿಸಿದೆ. ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ಜಾರಿಗೊಂಡಿವೆ ಎಂದು ವಿವರಿಸಿದರು. ಕಳಸಾ ಬಂಡೂರಿ ಯೋಜನೆಗೆ ಶೀಘ್ರವೇ ಶಂಕುಸ್ಥಾಪನೆ ನಡೆಯಲಿದೆ ಎಂದು ತಿಳಿಸಿದರು. ಕರ್ನಾಟಕದಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಸೀಟು ಪಡೆದು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಾತನಾಡಿ, ಮೋದಿಜಿ ಅವರ ಮಾರ್ಗದರ್ಶನದಲ್ಲಿ ರಾಜ್ಯವೂ ಸರ್ವತೋಮುಖ ಅಭಿವೃದ್ಧಿ ಕಂಡಿದೆ. ತಮ್ಮ ಕಾಲದಲ್ಲಿ ವಿದ್ಯುತ್ ಸರಿಯಾಗಿ ಕೊಡದ ಕಾಂಗ್ರೆಸ್ ಪಕ್ಷವು ಇದೀಗ ಉಚಿತ ವಿದ್ಯುತ್ ಕೊಡುವ ಭರವಸೆ ಕೊಟ್ಟಿದೆ. ಹಿಂದಿನ ಆಡಳಿತದಲ್ಲಿ ನೀವೇಕೆ ಇಂಥ ಪ್ರಯತ್ನ ಮಾಡಿಲ್ಲ? ಎಂದು ಪ್ರಶ್ನಿಸಿದರು. ಈಗ ಭಾರತವು ಬಿಜೆಪಿ ಆಡಳಿತದಲ್ಲಿ ವಿದೇಶಕ್ಕೂ ಕೊಡುವಷ್ಟು ವಿದ್ಯುತ್ ಉತ್ಪಾದಿಸುತ್ತಿದೆ ಎಂದು ತಿಳಿಸಿದರು.
ದೇವೇಗೌಡರ ಕುಟುಂಬದವರು ಪಂಚರತ್ನದ ಬದಲಾಗಿ ನವಗ್ರಹ ಯಾತ್ರೆ ಮಾಡಬೇಕಿತ್ತು ಎಂದರಲ್ಲದೆ, ಕಾಂಗ್ರೆಸ್ಸಿನ ಪ್ರಜಾಧ್ವನಿ ಯಾತ್ರೆ ವಿಫಲವಾಗಿದೆ ಎಂದು ಟೀಕಿಸಿದರು.
ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ರಾಜ್ಯದ ಸಚಿವರಾದ ಗೋವಿಂದ ಕಾರಜೋಳ, ಶ್ರೀಮತಿ ಶಶಿಕಲಾ ಜೊಲ್ಲೆ, ಪಕ್ಷದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು ಭಾಗವಹಿಸಿದ್ದರು. ಗಣ್ಯರು ಜ್ಯೋತಿ ಬೆಳಗಿಸಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.