ಬೆಂಗಳೂರು: ಇತಿಹಾಸ ಪ್ರಸಿದ್ಧ ಬೆಂಗಳೂರು ಕಡಲೆಕಾಯಿ ಪರಿಷೆಗೆ ತಯಾರಿ ಸಾಗಿದೆ. ಈ ಬಾರಿ ಅಡ್ಡೋರಿಯಾಗಿ ಆಚರಿಸಲು ಮುಜರಾಯಿ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಗುರುವಾರ ಪೂರ್ವಾಭಾವಿ ಸಿದ್ದತಾ ಸಭೆ ನಡೆಯಿತು.
ಇದೇ ಮೊದಲ ಬಾರಿಗೆ 2 ದಿನಗಳ ಪರಿಷೆಯನ್ನು 5 ದಿನಗಳಿಗೆ ವಿಸ್ತರಣೆ ಮಾಡಲಾಗುತ್ತಿದೆ. ಈ ಉತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕಡಲೆ ಕಾಯಿ ಪರಿಷೆ -2024 ರಲ್ಲಿ ಸುಮಾರು 5 ಲಕ್ಷ ಭಕ್ತಾದಿಗಳು ಭಾಗವಹಿಸಿದ್ದು, ಯಶಸ್ವಿಯಾಗಿ ನಡೆದಿದೆ. ಪ್ಲಾಸ್ಟಿಕ್ ಮುಕ್ತ ಕಡಲೆಕಾಯಿ ಪರಿಷೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಪ್ರಸಕ್ತ ವರ್ಷ 17.11.2025 ರಿಂದ ಪ್ರಾರಂಭವಾಗುವ ಐತಿಹಾಸಿಕ ಕಡಲೆಕಾಯಿ ಪರಿಷೆಯನ್ನು 5 ದಿನಗಳಿಗೆ ವಿಸ್ತರಿಸಿ, ವಿಜೃಂಭಣೆಯಿಂದ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪ್ರತಿ ವರ್ಷದಂತೆ ಕಡೇ ಕಾರ್ತಿಕ ಮಾಸದಲ್ಲಿ ಬಸವನಗುಡಿಯ ಶ್ರೀ ಬಸವಣ್ಣ ದೇವಾಲಯದಲ್ಲಿ 17.11.2025 ರಂದು ಸೋಮವಾರ ಬೆಳಗ್ಗೆ 10 ಗಂಟೆಗೆ ಕಡಲೆಕಾಯಿ ಪರಿಷೆ ಉದ್ಘಾಟಿಸಲು ಮುಖ್ಯಮಂತ್ರಿ ಹಾಗೂ ಉಪ ಮುಖ್ಯ ಮಂತ್ರಿಗಳಿಗೆ ಆಹ್ವಾನ.ನೀಡಲಾಗುತ್ತದೆ. ಉದ್ಘಾಟನೆಯನ್ನು 21 ಬಸವಣ್ಣಗಳನ್ನು ದೇವಸ್ಥಾನಕ್ಕೆ ಆಹ್ವಾನಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲು ತೀರ್ಮಾನಿಸಲಾಯಿತು.
ಈ ವರ್ಷ 05 ದಿನಗಳಿಗೆ ಹಾಗೂ ಬುಲ್ ಟೆಂಪಲ್ ರಸ್ತೆ, ಗಾಂಧಿ ಬಜಾರ್ ಮತ್ತು ಎನ್. ಆರ್ ರಸ್ತೆಗಳಿಗೂ ಸೇರಿ ದೀಪಾಂಲಕಾರ ಮಾಡಲಾಗುತ್ತದೆ. ಎನ್.ಜಿ.ಓ.ಗಳ ಸಹಕಾರದೊಂದಿಗೆ ಪ್ಲಾಸ್ಟಿಕ್ ಕವರ್ ಗಳನ್ನು ಬಳಸದಂತೆ ಬಟ್ಟೆ ಬ್ಯಾಗ್ ಗಳನ್ನು ಬಳಸಲು ಅಂಗಡಿಯವರಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಲು ‘ಪರಿಷೆಗೆ ಬನ್ನಿ ಕೈ ಚೀಲ ತನ್ನಿ’ ಎಂಬ ಘೋಷಣೆ ಮಾಡಲಾಗುತ್ತದೆ.
ಈ ವರ್ಷವೂ ಸುಂಕ ವಸೂಲಾತಿ ರದ್ದು
ಬುಲ್ ಟೆಂಪಲ್ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಸುಂಕ ವಸೂಲಾತಿಗೆ ಪ್ರತಿ ವರ್ಷ ಟೆಂಡರ್ ಮಾಡಲಾಗುತ್ತಿದ್ದು, ಟೆಂಡರ್ ದಾರರು ಅಂಗಡಿಯವರಿಂದ ಬಲವಂತವಾಗಿ ಹೆಚ್ಚು ಸುಂಕವನ್ನು ವಸೂಲಿ ಮಾಡುತ್ತಿರುವುದಾಗಿ ಕಳೆದ ವರ್ಷ ದೂರುಗಳು ಬಂದ ಹಿನ್ನೆಲೆಯಲ್ಲಿ ಸುಂಕ ವಸೂಲಾತಿ ಟೆಂಡರ್ ಅನ್ನು ಕೈಬಿಡಲು ಹಾಗೂ ವ್ಯಾಪಾರಸ್ಥರಿಂದ ಸುಂಕವನ್ನು ಕಳೆದ ವರ್ಷದಂತೆ ಈ ವರ್ಷವೂ ವಸೂಲಿ ಮಾಡದಂತೆ ತೀರ್ಮಾನ ಕೈಗೊಳ್ಳಲಾಗಿದೆ.
ಕಡಲೆಕಾಯಿ ಪರಿಷೆ ದಿನಗಳಂದು ಆರೋಗ್ಯ ಸ್ವಚ್ಛತೆ ನೈರ್ಮಲ್ಯಕ್ಕೆ ಒತ್ತು ಮತ್ತು ನೂಕು ನುಗ್ಗಲು ಉಂಟಾಗದಂತೆ ತಡೆಯಲು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಅಗತ್ಯ ವ್ಯವಸ್ಥೆ. ನಿರಂತರ ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ, ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಮಾಡಲಾಗುತ್ತದೆ.
ಬೀದಿ ದೀಪಗಳ ಅಳವಡಿಕೆ ಮತ್ತು ದುರಸ್ಥಿ, ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಸಿ.ಸಿ.ಟಿ.ವಿಗಳನ್ನು ಪ್ರಮುಖ ಸ್ಥಳಗಳಲ್ಲಿ ಅಳವಡಿಕೆ, ಅಗ್ನಿ ಶಾಮಕ ವಾಹನ ನಿಯೋಜನೆ. ತುರ್ತು ಚಿಕಿತ್ಸೆ ವಾಹನದ ವ್ಯವಸ್ಥೆ, ಮಾರ್ಷಲ್ ಗಳ ನಿಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಶಾಸಕರಾದ. ರವಿ ಸುಬ್ರಹ್ಮಣ್ಯ, ಉದಯ ಗರುಡಾಚಾರ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರುಗಳಾದ ಕೆ.ಎಂ .ನಾಗರಾಜ್, ದ್ವಾರಕಾನಾಥ್, ದಿಗ್ವಿಜಯ ಬೋಡ್ಸೆ, ಪಾರ್ವತಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.