ಮಂಗಳೂರು: ಕೆಲ ಸಮಯದ ಹಿಂದೆ ಸುಪ್ರೀಂ ಕೋರ್ಟ್ ಆದೇಶದ ನೆಪದಲ್ಲಿ ರಾಜ್ಯ ಬಿಜೆಪಿ ಸರ್ಕಾರ ದೇಗುಲಗಳ ಧ್ವಂಸ ಪ್ರಕ್ರಿಯೆ ಆರಂಭಿಸಿದ ಸಂದರ್ಭದಲ್ಲಿ ಬೊಮ್ಮಾಯಿ ಸರ್ಕಾರದ ವಿರುದ್ದ ಸಿಡಿದೆದ್ದ ಸಂಘ ಪರಿವಾರ ಇದೀಗ ದೇವಾಲಯಗಳ ರಕ್ಷಣೆಗೆ ಟೊಂಕಕಟ್ಟಿ ನಿಂತಿದೆ. ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಪುರಾಣಪ್ರಸಿದ್ದ ಕಾರಿಂಜೇಶ್ವರ ಕ್ಷೇತ್ರದಲ್ಲಿ ನಡೆದ ಹಿಂದೂ ಜಾಗರಣ ವೇದಿಕೆಯ ಶಕ್ತಿ ಪ್ರದರ್ಶನ ಸಾಕ್ಷಿಯಾಯಿತು. ದೇವಾಲಯವನ್ನು ಭಕ್ತಿ, ಭಾವನೆಯಿಂದ ಶಕ್ತಗೊಳಿಸಲು ಹಿಂದೂ ಸಂಘಟನೆಗಳ ಮುಖಂಡರು ನೀಡಿದ ಕರೆ ಸಮಾಜಿಕ ವ್ಯವಸ್ಥೆಯಲ್ಲಿ ಸಂಚಲನ ಸೃಷ್ಟಿಸಿದೆ.
ಭಾನುವಾರ ಕಾರಿಂಜೆಯಲ್ಲಿ ನಡೆದ ‘ರುದ್ರಗಿರಿಯ ರಣಕಹಳೆ’ ಸಮಾವೇಶದಲ್ಲಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಅವರು ಕಾರಿಜೇಶ್ವರ ಕ್ಷೇತ್ರವನ್ನು ಗಣಿ ಮಾಫಿಯಾ, ಲಂಚಕೋರ ಅಧಿಕಾರಿಗಳು ಹಾಗೂ ಭ್ರಷ್ಟಾಚಾರ ರಾಜಕಾರಣಿಗಳಿಂದ ರಕ್ಷಿಸುವ ಸಂಬಂಧ ಹೊಸ ಧಾರ್ಮಿಕ ಆಚರಣೆಯ ಸಲಹೆಯನ್ನು ಮುಂದಿಟ್ಟರು. ಧರ್ಮಸ್ಥಳ ಮಾದರಿಯಲ್ಲಿ ಭಕ್ತ ಸಾಗರ ಕಾರಿಂಜೇಶ್ವರ ಕ್ಷೇತ್ರಕ್ಕೂ ಧಾವಿಸಬೇಕಿದೆ. ಅದಕ್ಕಾಗಿ ಶಬರಿಮಲೆ ರೀತಿ ಶಿವಮಾಲಾಧಾರಣೆಯ ಆಚರಣೆ ನಡೆಯಲಿ ಎಂದು ಸಲಹೆ ಮುಂದಿಟ್ಟರು. ಮುಂಬರುವ ಶಿವರಾತ್ರಿಯಂದೇ ಈ ಆಚರಣೆ ಆರಂಭವಾಗಲಿ ಎಂದು ಕಾರಂತ್ ಅವರು ಹಿಂದೂ ಸಮಾಜಕ್ಕೆ ಕರೆನೀಡಿದರು.
ಶಿವಮಾಲಾಧಾರಣೆಯಂತಹಾ ಪವಿತ್ರ ಆಚರಣೆ ನಡೆದಲ್ಲಿ, ಧರ್ಮಸ್ಥಳ ಕ್ಷೇತ್ರಕ್ಕೆ ನಾಡಿನ ವಿವಿಧ ದಿಕ್ಕುಗಳಿಂದ ಭಕ್ತರು ಬರುವ ರೀತಿಯಲ್ಲಿ ಪೌರಾಣಿಕ ಮಹತ್ವ ಇರುವ ಕಾರಿಜೇಶ್ವರ ಬೆಟ್ಟಕ್ಕೂ ಭಕ್ತ ಸಾಗರ ಧಾವಿಸಲಿದೆ ಎಂದು ಅಭಿಪ್ರಾಯಪಟ್ಟರು.
ಜಗದೀಶ್ ಕಾರಂತ್ ಅವರ ಈ ದಿಕ್ಸೂಚಿ ಭಾಷಣ ಹಿಂದೂ ಕಾರ್ಯಕರ್ತನ್ನು ಹುಚ್ಚೆಬ್ಬಿಸಿತಿ. ಪ್ರತೀ ಮಾತಿಗೂ ಚಪ್ಪಾಳೆಗಳ ಸದ್ದು ಮೊಳಗುತ್ತಿದ್ದವು. ಜಗದೀಶ್ ಕಾರಂತ್ ನೀಡಿದ ಸಲಹೆಗಳಿಗೆ ಯುವಜನ ಸಮೂಹವು ಜೈಕಾರ ಮೂಲಕ ಸ್ವಾಗತಿಸುತ್ತಿದ್ದುದು ವಿಶೇಷವೆನಿಸಿತು.