ಅದ್ಧೂರಿ ಮದುವೆ.. ಉದ್ಯಮಿ ಪುತ್ರ, ಮಾಜಿ ಮಂತ್ರಿಯ ಪುತ್ರಿಯ ಮದುವೆಯಲ್ಲಿ ಸಾಮಾಜಿಕ ಕೈಂಕರ್ಯ.. ಲಕ್ಷ ಜನರ ಲಕ್ಷ್ಯ..
ಬೀದರ್: ಜಾತ್ರೆಗಿಂತಲೂ ಜೋರು ಈ ಮದುವೆ.. ಈ ವಿವಾಹ ವೈಭವ ಹೇಗಿತ್ತೆಂದರೆ, ಲಕ್ಷ ಜನರ ಲಕ್ಷ್ಯ ಈ ವೈಭವದತ್ತ ಕೇಂದ್ರೀಕೃತವಾಗಿತ್ತು.
ರಾಜ್ಯದ ಖ್ಯಾತ ಉದ್ಯಮಿ ಧನರಾಜ್ ತಾಳಂಪಳ್ಳಿ ಹಾಗೂ ಶೈಲಾಶ್ರೀ ಅವರ ಪುತ್ರ ಆಕಾಶ್ ಹಾಗೂ ಮಾಜಿ ಸಚಿವ, ಹಾಲಿ ಕಾಂಗ್ರೆಸ್ ಶಾಸಕ ರಾಜಶೇಖರ್ ಬಿ ಪಾಟೀಲ್-ಪ್ರೇಮ ದಂಪತಿಯ ಪುತ್ರಿ ಶಕುಂತಲಾ ಅವರ ವಿವಾಹ ಅತ್ಯಂತ ವೈಭವೋಪೇತವಾಗಿ ಇಂದು ನೆರವೇರಿತು. ಬೀದರ್ ಜಿಲ್ಲೆ ಹುಮ್ನಾಬಾದ್‌ನ ರಾಜರಾಜೇಶ್ವರಿ ದೇವಸ್ಥಾನ ಬಳಿಯ ಶಕುಂತಲಾ ಪಾಟೀಲ್ ರೆಸಿಡೆನ್ಸಿಯಲ್ ಸ್ಕೂಲ್ ಆವರಣದಲ್ಲಿ ನೆರವೇರಿತು.
ಅದ್ಧೂರಿ ವೈಭವದ ವಿವಾಹ ಮಹೋತ್ಸವದಲ್ಲಿ ಸಾವಿರಾರು ಮಂದಿ ಗಣ್ಯರು ಭಾಗಿಯಾದರು. ಬೆಂಗಳೂರಿನ ಉದ್ಯಮಲೋಕದ ದಿಗ್ಗಜರ ಸಮಾಗಮಕ್ಕೂ ಈ ವಿವಾಹ ಸಮಾರಂಭ ವೇದಿಕೆಯೆನಿಸಿತು. ಸಂಪ್ರದಾಯ, ವೈದಿಕ ಕೈಂಕರ್ಯ ಸಹಿತ ವಿಧಿವಿಧಾನಗಳು ವಿವಿಧ ಮಠಾಧಿಪತಿಗಳು ಹಾಗೂ ಪುರೋಹಿತರ ಮಾರ್ಗದರ್ಶನದಲ್ಲಿ ನೆರವೇರಿತು.
ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ರಾಜ್ಯಗಳ ಅಧಿಕಾರಿಗಳು, ಶಾಸಕರು, ಜನಪ್ರತಿನಿಧಿಗಳನೇಕರಿಗೆ ವಿಶೇಷ ಆತಿಥ್ಯ ಅಲ್ಲಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಎಂ.ಬಿ.ಪಾಟೀಲ್ ಕೂಡಾ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದ್ದರು. ಸಂಜೆ ನಡೆದ ಅರತಕ್ಷತೆ ಕಾರ್ಯಕ್ರಮ ಜನಸಾಗರಕ್ಕೆ ಸಾಕ್ಷಿಯಾಯಿತು.
ಹಳ್ಳಿಜನರಿಗೆ ‘ದೃಷ್ಟಿ ಭಾಗ್ಯ’: ಇದೂ ಈ ಮದುವೆಯ ವಿಶೇಷ..
ಉದ್ಯಮಿ ಹಾಗೂ ರಾಜಕಾರಣಿಗಳ ಪ್ರತಿಷ್ಠಿತ ಕುಟುಂಬಗಳ ನಡುವಿನ ಬಾಂಧವ್ಯ ಬೆಸೆದ ಈ ವಿವಾಹ ಸಮಾರಂಭ ಮಾನವೀಯತೆಯ ಮಜಲಿನತ್ತ ಹೆಜ್ಜೆ ಇಡುವ ಮೂಲಕವೂ ಗಮನಸೆಳೆದಿದೆ.
ಬೆಂಗಳೂರಿನ ಉದ್ಯಮಿಯಾಗಿರುವ ಧನರಾಜ್ ತಾಳಂಪಳ್ಳಿ ಅವರು ತಮ್ಮ ಪುತ್ರ ಆಕಾಶ್ ವಿವಾಹ ಸಂಬಂಧ ಸಾರ್ವಜನಿಕರಿಗಾಗಿ ನೇತ್ರದಾನ ಹಾಗೂ ನೇತ್ರ ಚಿಕಿತ್ಸಾ ಕಾರ್ಯಕ್ರಮ ಆಯೋಜಿಸಿದ್ದರು.
ದಿವಂಗತ ಪುನೀತ್ ರಾಜಕುಮಾರ್ ನೇತ್ರದಾನದ ಪ್ರೇರಣೆಯಿಂದಾಗಿ ತಾಳಂಪಳ್ಳಿ ಅವರು ಮಕ್ಕಳ ಮದುವೆಗೆ ಮೊದಲು ಸಾರ್ವಜನಿಕರಿಗಾಗಿ ನೇತ್ರ ಚಿಕಿತ್ಸೆಯ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಹುಮ್ನಾಬಾದ್ ಸಮೀಪದ ಹಳ್ಳಿಖೇಡದಲ್ಲಿ, ಶಿಬಿರವನ್ನು ಏರ್ಪಡಿಸಿದ್ದರು.
ಎರಡು ದಿನಗಳ ಉಚಿತ ಶಿಬಿರದಲ್ಲಿ ರಾಜ್ಯದ ತಜ್ಞ ವೈದ್ಯರು ಮಾರ್ಗದರ್ಶನ ನೀಡಿದರು.