ಮಂಗಳೂರು : ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ‘ರಾಜಕೀಯ ಗುರು’ ಜನಾರ್ದನ ಪೂಜಾರಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಸೋಮವಾರ ಸಂಜೆ ಬಂಟ್ವಾಳದಲ್ಲಿರುವ ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜಾರಿ ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಸೋಲಿಲ್ಲದೆ ಸರದಾರನಂತೆ ಗೆಲುವು ಸಾಧಿಸಿರುವ ಯು.ಟಿ.ಖಾದರ್ ಅವರನ್ನು ಅಭಿನಂಧಿಸಿದ ರಾಜಕೀಯ ತಪಸ್ವಿ ಜನಾರ್ದನ ಪೂಜಾರಿಯವರು, ಖಾದರ್ ಅವರ ರಾಜಕೀಯ ನಡೆಯನ್ನೂ ಕೊಂಡಾಡಿದರು.
ಹಿರಿಯ ನಾಯಕರು ಮಂತ್ರಿಗಿರಿಗಾಗಿ ಲಾಭಿನಡೆಸಿದರೆ, ಹಿರಿತನದ ಜವಾಬ್ಧಾರಿ ಹೊರುವತ್ತ ಯು.ಟಿ.ಖಾದರ್ ಒಲವು ತೋರಿದ್ದಾರೆ. ಇದು ಒಬ್ಬ ಜನನಾಯಕನ ಉತ್ತಮ ನಡೆಯಾಗಿದೆ ಎಂದು ಜನಾರ್ದನ ಪೂಜಾರಿ ಬಣ್ಣಿಸಿದರು. ಖಾದರ್ ಅವರು ತಮ್ಮ ತಂದೆಯ ಸಾಧನೆಯನ್ನೂ ಮೀರಿ ಬೆಳೆದಿದ್ದಾರೆ ಎಂದು ಕೊಂಡಾಡಿದ ಪೂಜಾರಿ, ಸ್ಪೀಕರ್ ಸ್ಥಾನದ ಮಹತ್ವವನ್ನು ಅರಿಯದೆ ಅನೇಕರು ಅದನ್ನು ನಿರಾಕರಿಸಿದ್ದಾರೆ. ಆದರೆ ಅದು ಅತ್ಯಂತ ಗೌರವಯುತ ಹುದ್ದೆಯಾಗಿದ್ದು, ಹೈಕಮಾಂಡ್ ಆದೇಶ ಪಾಲಿಸಿ ಸ್ಪೀಕರ್ ಸ್ಥಾನ ಆಲಂಕರಿಸಿರುವ ಖಾದರ್ ಅವರ ಘನತೆಯೂ ಹೆಚ್ಚಿದೆ ಎಂದರು.
ಹಿರಿಯ ಮುತ್ಸದ್ದಿ ನಾಯಕನ ಅಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್, ತಮ್ಮನ್ನು ರಾಜಕೀಯವಾಗಿ ಬೆಳೆಸಿದ ಜನಾರ್ದನ ಪೂಜಾರಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇನೆ. ಅವರ ಮಾರ್ಗದರ್ಶನದಂತೆ ಜನರ ಸೇವೆ ಮಾಡುವುದಾಗಿ ಹೇಳಿದರು. ಈ ಹಿಂದೆ ವೈಕುಂಠ ಬಾಳಿಗ, ಕೆ.ಎಸ್.ಹೆಗ್ಡೆ ಅವರು ನಮಗೆ ಆದರ್ಶರಾಗಿದ್ದಾರೆ ಅವರಂತೆಯೇ ನಡೆದುಕೊಂಡು ಕ್ಷೇತ್ರದ ಜನತೆಯ ವಿಶ್ವಾಸವನ್ನು ಉಳಿಸಿಕೊಳ್ಳುವುದಾಗಿಯೂ ನುಡಿದರು.