ಬೆಂಗಳೂರು: 2023 ರ ಚುನಾವಣೆಯಲ್ಲಿ ದಣಿವರಿಯದೇ ನಿರಂತರವಾಗಿ ಕೆಲಸ ಮಾಡಿ, ಪಕ್ಷವನ್ನು ಸಂಘಟಿಸಿ, ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತದಾರರ ಒಲವನ್ನು ಪಡೆದುಕೊಳ್ಳಲು ಪೂರ್ಣ ಪ್ರಮಾಣದ ಪ್ರಯತ್ನ ಪ್ರಾರಂಭ ಮಾಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ..
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾರತೀಯ ಜನತಾ ಪಕ್ಷದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಭಾರತೀಯ ಜನತಾ ಪಕ್ಷದ ಬೇರು ಈ ಕ್ಷೇತ್ರ ಮತ್ತು ಜಿಲ್ಲೆಯಲ್ಲಿ ಅತ್ಯಂತ ಗಟ್ಟಿಯಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರಗಳಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಜನ ಹೊಸ ಶಕ್ತಿಯ ಉದಯವನ್ನು ಕಾಯುತ್ತಿದ್ದಾರೆ. ವಿಶೇಷವಾಗಿ ಯುವಕರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಹಿರಿಯರು ಈಗಿರುವ ವ್ಯವಸ್ಥೆಗಳನ್ನು ಕಂಡು ಭ್ರಮನಿರಸನಗೊಂಡಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ಬದಲಾವಣೆಯಾಗಿ ಬೆಂಗಲೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರತೀಯ ಜನತಾ ಪಕ್ಷದ ಕಮಲ ಪ್ರತಿ ಕ್ಷೇತ್ರದಲ್ಲಿಯೂ ಅರಳಲಿದೆ. ನಮ್ಮೆಲ್ಲರ ಕಠಿಣ ಪರಿಶ್ರಮ ಇದಕ್ಕೆ ಅಗತ್ಯ ಎಂದರು.
ಹೊಸಕೊಟೆಯಿಂದ ಭಾಜಪದ ಹೊಸ ಮನ್ವಂತರ ಪ್ರಾರಂಭವಾಗಲಿ. ಬದಲಾವಣೆಯನ್ನು ತಂದು ಬಡವರ ಪರವಾದ, ದೀನದಲಿತರ, ಮಹಿಳೆಯರ ಪರವಾದ ಆಡಳಿತವನ್ನು ನಾವು ಕೊಡಬೇಕು. ಅದನ್ನು ಈಗಾಗಲೇ ಪ್ರಾರಂಭ ಮಾಡಿದ್ದೇವೆ. ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಈ ಎಲ್ಲ ಕಾರ್ಯಕ್ರಮಗಳು ಜನರಿಗೆ ಮುಟ್ಟಬೇಕು. ಆರ್ಥಿಕವಾಗಿ ಸಾಮಾಜಿಕವಾಗಿ ಜನ ಬಲಿಷ್ಠರಾಗಬೇಕು. ರಾಜ್ಯದ ಜನ ಶ್ರೀಮಂತರವಾದಾಗ ರಾಜ್ಯವೂ ಶ್ರೀಮಂತವಾಗುತ್ತದೆ. ದುಡಿಯುವ ವರ್ಗಕ್ಕೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಡಲು ಭಾಜಪ ಕಟಿಬದ್ಧವಾಗಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಹಿಳೆಯರಿಗಾಗಿ, ರೈತರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಆರೋಗ್ಯಕ್ಕಾಗಿ ಆಯುಷ್ಮಾನ್ ಭಾರತ್, ದೀನ್ ದಯಾಳ ಉಪಾಧ್ಯಾಯ ಗ್ರಾಮೀಣ ವಿದ್ಯುದೀಕರಣ ಯೋಜನೆ, ಆತ್ಮನಿರ್ಭರ್ ಮುದ್ರಾ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ, ಪ್ರತಿ ಕ್ಷೇತ್ರದಲ್ಲಿ ಕೇಂದ್ರ ಮತ್ತು ರಾಜ್ಯದ ಫಲಾನುಭವಿಗಳೂ ಕನಿಷ್ಠ 40- ರಿಂದ 60 ಸಾವಿರ ಜನ ಇದ್ದಾರೆ. ಅವರೆಲ್ಲರಿಗೂ ನರೇಂದ್ರ ಮೋದಿ, ಭಾಜಪ, ಕರ್ನಾಟಕದ ಬಗ್ಗೆ ಎಲ್ಲರಿಗೂ ಸದ್ಭಾವನೆ ಇದೆ. ಈ ಸದ್ಭಾವನೆಯನ್ನು ನಾವು ಗೌರವದಿಂದ ಕಂಡು ಅವರ ಪ್ರೀತಿ ವಿಶ್ವಾಸವನ್ನು ಪಡೆದು 2023 ರಲ್ಲಿ ಮತ್ತೊಮ್ಮೆ ವಿಜಯಶಾಲಿಗಳಾಗಬೇಕು. ಸಕಾರಾತ್ಮಕವಾದ ಕೆಲಸಗಳನ್ನು ಜನರ ಮುಂದೆ ತೋರಿಸಬೇಕು. ಕೋವಿಡ್ ಸಾಂಕ್ರಾಮಿಕದ ಸಂದರ್ಭವನ್ನು ಅತ್ಯಂತ ದಕ್ಷತೆಯಿಂದ ನಿಭಾಯಿಸಿ, ನಿಯಂತ್ರಿಸಲಾಯಿತು. ಅದಕ್ಕೆ ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪನವರ ಮಾರ್ಗದರ್ಶನ ಪ್ರವಾಹ ಬಂದಾಗಲೂ ಎಲ್ಲ ಬೆಳೆಗಳ ಹಾನಿಗೆ ಕೇಂದ್ರಸರ್ಕಾರ ನೀಡಿದಷ್ಟೇ ಹಣವನು ರಾಜ್ಯ ಸರ್ಕಾರ ನೀಡಿ ದುಪ್ಪಟ್ಟು ಪರಿಹಾರವನ್ನು ನೀಡಿದ್ದು ಭಾರತೀಯ ಜನತಾ ಪಕ್ಷದ ಸರ್ಕಾರ ಎಂದರು.
ಅಧಿಕಾರ ವಹಿಸಿಕೊಂಡ 4 ಗಂಟೆಗಳಲ್ಲಿ ರೈತ ವಿದ್ಯಾ ನಿಧಿ ಯೋಜನೆಯನು ಘೋಷಿಸಲಾಯಿತು. ಹೊಸಕೋಟೆಯ ಸಾವಿರಾರು ಮಕ್ಕಳು ಈ ಯೋಜನೆಯ ಲಾಭವನ್ನು ಪಡೆದಿದ್ದಾರೆ. ಈ ಸರ್ಕಾರಕ್ಕೆ ಹೃದಯವಿದೆ. ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹಾರ ಕೊಡುವ ಶಕ್ತಿ ಇದೆ. ಪಿಂಚಣಿಗಳ ಮೊತ್ತವನ್ನು ಹೆಚ್ಚಿಸಲಾಗಿದೆ. ಎಲ್ಲ ಎಸ್.ಸಿ ಮತ್ತು ಎಸ್‍ಟಿ ಕುಟುಂಬಗಳಿಗೆ ಉಚಿತವಾಗಿ 75 ಯೂನಿಟ್ ವಿದ್ಯುತ್ ನೀಡುವ ಐತಿಹಾಸಿಕ ತೀರ್ಮಾನವನ್ನು ಸರ್ಕಾರ ಮಾಡಿದೆ. ಅವರ ಕಷ್ಟದಲ್ಲಿ ಭಾಗಿಯಾಗಲು ಈ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.
ಮನೆ ಕಟ್ಟಲು ಒದಗಿಸುತ್ತಿದ್ದ 1.75 ಲಕ್ಷ ರೂ.ಗಳ ಮೊತ್ತವನ್ನು 2.00 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಭೂಮಿ ಪಡೆಯಲು 20 ಲಕ್ಷದವರೆಗೆ ಹೆಚ್ಚಿಸಿದೆ. ಇವೆಲ್ಲವೂ ಬಡತನದಲ್ಲಿರುವ ಕುಟುಟಂಬಗಳನ್ನು ಮೇಲೆತ್ತಲು ರೂಪಿಸಲಾಗಿದೆ. ಸ್ತ್ರೀಶಕ್ತಿ ಸಂಘಗಳಿಗೆ ಅಮೃತ ಯೋಜನೆಯಡಿ 3 ಲಕ್ಷಕ್ಕಿಂತ ಹೆಚ್ಚು ಸಂಘಗಳಿಗೆ 1.50 ಲಕ್ಷ ನೀಡುವುದರ ಜೊತೆಗೆ 5 ಲಕ್ಷ ಹೆಣ್ಣುಮಕ್ಕಳಿಗೆ ಉದ್ಯೋಗ ನೀಡುವ ಕೆಲಸವನ್ನು ಸರ್ಕಾರ ಮಾಡಿದೆ. ಹೊಸಕೋಟೆ ನಗರವನ್ನು ಸ್ಯಾಟಿಲೈಟ್ ನಗರವನ್ನಾಗಿ ಅಭಿವೃದ್ಧಿಗೊಳಿಸಲಾಗುವುದು. ಹೊಸಕೋಟೆಯ ಅಭಿವೃದ್ಧಿಯನ್ನು ನೇರವಾಗಿ ಮಾಡಲು ಮುಂಬರುವ ದಿನಗಳಲ್ಲಿ ಮೆಟ್ರೋ, ಸಬ್ ಅರ್ಬನ್ ರೈಲ್ ಬರಬೇಕು. ಇದಕ್ಕೆ ನೀವು ಭಾ.ಜ.ಪ ಕಮಲವನ್ನು ಹೊಸಕೋಟೆಯಲ್ಲಿ ಅರಳಿಸಬೇಕು. ಎಂ.ಟಿ.ಬಿ ನಾಗರಾಜ್ ಅವರ ಆಯ್ಕೆ ಮಾಡಬೇಕು ಎಂದರು.
ನರೇಂದ್ರ ಮೋದಿಯವರ ಕನಸು ನನಸಾಗಬೇಕು. ಆತ್ಮನಿರ್ಭರ್ ಭಾರತ, ಗರೀಬ್ ಕಲ್ಯಾಣ್ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಇದೇ ಹುಮ್ಮಸ್ಸಿನಿಂದ ಎಲ್ಲಾ ಚುನಾವಣೆಗಳಲ್ಲಿ ಕೆಲಸ ಮಾಡಬೇಕು. ಸಂಘಟಿತರಾಗಬೇಕು. ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್‍ಗಳನ್ನು ಭಾಜಪದ ತೆಕ್ಕೆಗೆ ತೆಗೆದುಕೊಂಡರೆ, ಮುಂದಿನ ವಿಧಾನಸಭೆಯ ಚುನಾವಣೆಗೆ ದಿಕ್ಸೂಚಿಯಾಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳಾಗಬೇಕು. ಸಮಾಜದ ಎಲ್ಲಾ ವರ್ಗದವರ ವಿಶ್ವಾಸವನ್ನು ಪಡೆದುಕೊಂಡು ನಾವು ಕೆಲಸ ಮಾಡಬೇಕು. ಸಮುದ್ರಕ್ಕೆ ಎಲ್ಲಾ ನದಿಗಳು ಸೇರುವಂತೆ, ಎಲ್ಲಾ ಸಮಾಜವೂ ಭಾಜಪ ಎಂಬ ದೊಡ್ಡ ಸಮುದ್ರಕ್ಕೆ ಸೇರಿದಾಗ, ಅದು ಬಲಿಷ್ಠ ಶಕ್ತಿಯಾಗಲಿದೆ. ನಾಡು ಕಟ್ಟಲು ಇದರ ಅಗತ್ಯವಿದೆ. ವಿಜಯಸಾಧಿಸುವವರೆಗೂ ವಿಶ್ರಮಿಸುವಂತಿಲ್ಲ. ದಣಿವರಿಯದೇ ಪಕ್ಷವನ್ನು ಕಟ್ಟಿ. ಸಂಘಟಿಸಿ, ಜನರ ವಿಶ್ವಾಸವನ್ನು ಗಳಿಸಿ. ಹೊಸಕೋಟೆಯಲ್ಲಿ ಹೊಸ ಶಕ್ತಿಯ ಉದಯ, ಮನ್ವಂತರವಾಗಬೇಕು. ಕಮಲ ಅರಳಿಸಬೇಕು. ಎಂ.ಟಿ.ಬಿ. ನಾಗರಾಜ್ ಅವರನ್ನು ಗೆಲ್ಲಿಸಬೇಕು ಎಂದರು.






















































