ಬೆಂಗಳೂರು: ರಾಜ್ಯ ಸರ್ಕಾರವು ಬಲಿಜ, ಬಲಿಜಿಗ, ನಾಯ್ಡು, ತೆಲುಗುಬಲಿಜ, ಶೆಟ್ಟಿ ಬಲಿಜ, ಕಾಪು, ಬಳೆಗಾರ ಹಾಗೂ ಇನ್ನಿತರ ಇದರ ಉಪಜಾತಿಗಳ ಅಭಿವೃದ್ಧಿಗಾಗಿ ಕರ್ನಾಟಕ ಬಲಿಜ ಸಮುದಾಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಆದೇಶ ಹೊರಡಿಸಿರುವುದನ್ನು ಮಾಜಿ ಶಾಸಕರೂ ಆದ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಸ್ವಾಗತಿಸಿದ್ದಾರೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತಿರುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿಯವರಿಗೆ ರಮೇಶ್ ಬಾಬು ಪತ್ರ ಬರೆದಿದ್ದಾರೆ. ನಿಗಮ ಸ್ಥಾಪನೆಯ ಆದೇಶದ ರೀತಿಯಲ್ಲೇ ಬಲಿಜ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ಭರವಸೆಯನ್ನೂ ಈಡೇರಿಸಬೇಕೆಂದು ಅವರಿ ಸಿಎಂಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.
ನಿಗಮ ಸ್ಥಾಪನೆಯಿಂದ ಸಮುದಾಯಕ್ಕೆ ಅನುಕೂಲವಾಗಲಿದೆ. ಹಾಗಾಗಿ ನಿಗಮ ಸ್ಥಾಪನೆಯ ಆಶಯಗಳು ಈಡೇರಬೇಕಾದರೆ ಸೂಕ್ತ ವ್ಯವಸ್ಥೆಯನ್ನು ಕೂಡಲೇ ಕಲ್ಪಿಸಬೇಕೆಂದು ಅವರು ಸಲಹೆ ಮಾಡಿದ್ದಾರೆ.
ಕರ್ನಾಟಕದ ವಿಧಾನಸಭಾ ಚುನಾವಣೆಗೆ ಇನ್ನೆರಡು ವಾರಗಳಲ್ಲಿ ಕೇಂದ್ರ ಚುನಾವಣಾ ಆಯೋಗವು ಅಧಿಸೂಚನೆಯನ್ನು ಹೊರಡಿಸಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ತ್ವರಿತಗತಿಯಲ್ಲಿ ಕರ್ನಾಟಕ ಬಲಿಜ ಅಭಿವೃದ್ದಿ ನಿಗಮವನ್ನು ಆಡಳಿತಾತ್ಮಕವಾಗಿ ರಾಜ್ಯ ಸರ್ಕಾರದ ಅನುದಾನದ ಬಿಡುಗಡೆಯೊಂದಿಗೆ ಜಾರಿಗೊಳಿಸಬೇಕಾಗಿರುತ್ತದೆ ಎಂದು ಸರ್ಕಾರದ ಗಮನಸೆಳೆದಿರುವ ರಮೇಶ್ ಬಾಬು, ಅಭಿವೃದ್ಧಿ ನಿಗಮಕ್ಕೆ ಅವಶ್ಯಕವಾದ ಸಿಬ್ಬಂದಿ ಮತ್ತು ಸ್ಥಳಾವಕಾಶವನ್ನು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಬೇಕಾಗಿರುತ್ತದೆ. ಬಲಿಜ ಮತ್ತು ಅದರ ಸುಮಾರು 27 ಉಪಜಾತಿ/ ಉಪಪಂಗಡಗಳ ಅಭಿವೃದ್ಧಿಗಾಗಿ ಸ್ಥಾಪನೆಯಾಗಿರುವ ಅಭಿವೃದ್ಧಿ ನಿಗಮಕ್ಕೆ ರಾಜ್ಯ ಸರ್ಕಾರವು ಕೂಡಲೇ 500 ಕೋಟಿ ರೂಪಾಯಿಗಳ ಅನುದಾನವನ್ನು ಆರ್ಥಿಕ ಇಲಾಖೆಯ ಏಕ ಅನುದಾನದ ಆದೇಶದ ಮೂಲಕ ಬಿಡುಗಡೆ ಮಾಡಬೇಕಾಗಿರುತ್ತದೆ ಎಂದಿದ್ದಾರೆ.
ಬಲಿಜ ಸಮುದಾಯದ ಅಭಿವೃದ್ಧಿ ನಿಗಮಕ್ಕೆ ಕೂಡಲೇ ಹಿರಿಯ ಕೆಎಸ್ ಶ್ರೇಣಿಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಅಗತ್ಯವಾದ ಆಡಳಿತ ಸಿಬ್ಬಂದಿಯನ್ನು ನಿಯೋಜನೆಯ ಮೂಲಕ ನೇಮಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿರುವ ಅವರು, ಅಭಿವೃದ್ಧಿ ನಿಗಮವು ಕಾರ್ಯ ಪ್ರವೃತ್ತವಾಗಲು ಬಹುಮಹಡಿ ಕಟ್ಟಡದಲ್ಲಿ ಅಥವಾ ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಕರ್ನಾಟಕ ರಾಜ್ಯ ಬಲಿಜ ಸಂಘದ ಕಟ್ಟಡದಲ್ಲಿ ಸ್ಥಳಾವಕಾಶವನ್ನು ಒದಗಿಸಿಕೊಟ್ಟು ಅನುದಾನ ಬಿಡುಗಡೆ ಮಾಡಿ ನಿಗಮವು ಚಟುವಟಿಕೆಗಳನ್ನು ಪ್ರಾರಂಭಿಸಲು ಅಗತ್ಯ ನಿರ್ದೇಶನ ನೀಡಬೇಕೆಂದು ಸಿಎಂ ಬೊಮ್ಮಾಯಿಯವರನ್ನು ಕೋರಿದ್ದಾರೆ.
ಈಡೇರದ ಮೀಸಲಾತಿಯ ಭರವಸೆ..!
ಕರ್ನಾಟಕ ರಾಜ್ಯದ ಹಿಂದುಳಿದ ವರ್ಗವಾದ ಬಲಿಜ ಮತ್ತು ಅದರ ಉಪಪಂಗಡಗಳನ್ನು ಔದ್ಯೋಗಿಕ ಮೀಸಲಾತಿಗಾಗಿ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ 2ಎ ವರ್ಗಕ್ಕೆ ಸೇರಿಸಲು ಸಮುದಾಯದ ವತಿಯಿಂದ ತಮಗೆ ಮತ್ತು ಸರ್ಕಾರಕ್ಕೆ ಅನೇಕ ಮನವಿಗಳನ್ನು ಸಲ್ಲಿಸಲಾಗಿರುತ್ತದೆ. 2018ರ ಚುನಾವಣಾ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷವು ಬಲಿಜ ಮತ್ತು ಅದರ ಉಪಪಂಗಡಗಳನ್ನು ಔದ್ಯೋಗಿಕ ಮತ್ತು ರಾಜಕೀಯ ಮೀಸಲಾತಿಗಾಗಿ ಹಾಲಿ ಇರುವ 3ಎ ಪ್ರವರ್ಗದಿಂದ 2ಎ ಪ್ರವರ್ಗಕ್ಕೆ ವರ್ಗಾಯಿಸುವುದಾಗಿ ಆಶ್ವಾಸನೆಯನ್ನು ನೀಡಿತ್ತು ಎಂದು ಮುಖ್ಯಮಂತ್ರಿಗೆ ನೆನಪಿಸಿರುವ ರಮೇಶ್ ಬಾಬು, ಇಲ್ಲಿಯವರೆಗೆ 3ಎ ಪ್ರವರ್ಗದಿಂದ 2ಎ ಪ್ರವರ್ಗಕ್ಕೆ ವರ್ಗಾಯಿಸುವ ಯಾವುದೇ ಪ್ರಕ್ರಿಯೆ ನಡೆದಿರುವುದಿಲ್ಲ ಎಂದು ಗಮನಸೆಳೆದಿದ್ದಾರೆ.
ಹಿಂದುಳಿದ ವರ್ಗಗಳ ಇಲಾಖೆಯ ಮುಖಾಂತರ ಅಗತ್ಯ ವರದಿಯನ್ನು ತಯಾರಿಸಿ 2ಎ ವರ್ಗದ ಮೀಸಲಾತಿ ಕಲ್ಪಿಸಲು ನಿರ್ದೇಶನ ನೀಡಬೇಕೆಂದೂ ಅವರು ಸಿಎಂಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.