ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಇದೀಗ ಮತ್ತೆ ಯೂತ್ ಐಕಾನ್.. ಕರಾವಳಿಯಲ್ಲಂತೂ ಅವರು ದಿಢೀರನೆ ಹೀರೋ ಆಗಿಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ನಳಿನ್ ಪರ ಬಹುಪರಾಕ್ ವ್ಯಕ್ತವಾಗುತ್ತಿರುವುದನ್ನು ಗಮನಿಸಿದರೆ ‘ಆಡಿಯೋ ಬಾಂಬ್’ ಈ ನಾಯಕನನ್ನು ಮತ್ತಷ್ಟು ಬಲಗೊಳಿಸಿದೆ ಎನ್ನಬಹುದು.
ಭಾನುವಾರ ರಾತ್ರಿ ನಳಿನ್ ಕುಮಾರ್ ಕಟೀಲ್ ಅವರ ಧ್ವನಿಯನ್ನು ಹೋಲುವ ಆಡಿಯೋ ತುಣುಕು ವಾಟ್ಸಪ್‌ನಲ್ಲಿ ಹರಿದಾಡಿದೆ. ನಾಯಕತ್ವ ಬದಲಾವಣೆ ಹಾಗೂ ಈಶ್ವರಪ್ಪ-ಶೆಟ್ಟರ್ ಗುಂಪನ್ನು ಮಂತ್ರಿ ಮಂಡಲದಿಂದ ದೂರ ಇಡುವ ಕುರಿತ ಮಾಹಿತಿ ಅದಾಗಿತ್ತು. ಈ ಆಡಿಯೋ ಬಗ್ಗೆ ಮಾಧ್ಯಮಗಳಲ್ಲಿ ಮಂಥನ ಶುರುವಾಗುತ್ತಿದ್ದಂತೆಯೇ ಎದುರಾಳಿಗಳು ಪುಳಕಿತರಾಗಿದ್ದರು. ಈ ಆಡಿಯೋ ಬಾಂಬ್ ಕಾರಣಕ್ಕಾಗಿ ನಳಿನ್ ತಲೆದಂಡ ಸನ್ನಿಹಿತ ಎಂದೇ ಹಲವರು ಹೇಳತೊಡಗಿದರು. ಆದರೆ ಆಗಿದ್ದೇ ಬೇರೆ. ಕರಾವಳಿ ತೀರದ ಬಿಜೆಪಿ ಕಾರ್ಯಕರ್ತರು ಎಬ್ಬಿಸಿದ ಬಹುಪರಾಕ್ ಸುನಾಮಿಯು ಈ ನಾಯಕನನ್ನು ಮತ್ತೆ ಹೀರೋ ಪಟ್ಟಕ್ಕೆ ಕೊಂಡೊಯ್ದಿದೆ.
ಏನಿದು ಅದೃಷ್ಟ..?
ರಾಜಕೀಯದಲ್ಲಿ ವಿವಾದ ಹುಟ್ಟಿತೆಂದರೆ ಅದರ ಜೊತೆಗೆ ವರ್ಚಸ್ಸು ಹೆಚ್ಚಿತು ಎಂದೇ ಆರ್ಥ. ಅದಕ್ಕೆ ನಳಿನ್ ಕುಮಾರ್ ಅವರು ಪದೇ ಪದೇ ಉದಾಹರಣೆಯಾಗುತ್ತಿದ್ದಾರೆ. ವರ್ಷಗಳ ಹಿಂದೆ, ನಕಲಿ ಸಿಡಿ ಪಿತೂರಿ ಇದೇ ನಳಿನ್ ಅವರ ಪಾಲಿಗೆ ಅನುಕಂಪ ಹೆಚ್ಚಿಸಿ ಎರಡನೇ ಬಾರಿಗೆ ಸಂಸದನಾಗಿಸಲು ಅವಕಾಶ ಕಲ್ಪಿಸಿತು. ಅನಂತರ ‘ಹಿಂದೂಗಳನ್ನು ಮುಟ್ಟಿದರೆ ಬೆಂಕಿ ಹೊತ್ತಿಕೊಂಡೀತು..’ ಎಂಬ ಪ್ರಚೋದನಾಕಾರಿ ಭಾಷಣವೂ ನಳಿನ್ ಅವರನ್ನು ದೆಹಲಿ ಟೀಮ್ ಗಟ್ಟಿಗೊಳಿಸಲು ಕಾರಣವಾಗಿತ್ತು. ಆ ಕಾರಣದಿಂದಲೇ ಅವರು ಕಳೆದ ಚುನಾವಣೆಯಲ್ಲಿ 2.7 ಲಕ್ಷಕ್ಕೂ ಹೆಚ್ಚು ಮತಗಳನ್ನು ಗಳಿಸಿದರು. ಇದೀಗ ಈ ಆಡಿಯೋ ಬಾಂಬ್ ಕೂಡಾ ನಳಿನ್ ಬಗ್ಗೆ ಪುಕ್ಕಟೆ ಪ್ರಚಾರ ಕೊಟ್ಟು, ಅವರನ್ನು ಯೂತ್ ಐಕಾನ್ ಮಾಡಿರುವುದು ರಾಜಕೀಯದ ಅಚ್ಚರಿ.
ಆಡಿಯೋ ಬಾಂಬ್ ಅನ್ನು ನಕಲಿ ಎಂದು ನಳಿನ್ ಕುಮಾರ್ ಕಟೀಲ್ ಸ್ಪಷ್ಟನೆ ನೀಡಿದ್ದಾರೆ. ಆದರೂ ಅದರಲ್ಲಿ ಅಶ್ಲೀಲ ಪದವಾಗಲೀ, ಪಿತೂರಿಯ ಸುಳಿವಾಗಲೀ ಇಲ್ಲ. ಅದರಲ್ಲಿರುವುದು ಬಿಜೆಪಿಯ ನಿರ್ಧಾರದ ರಹಸ್ಯ. ಅದೂ ಕೂಡಾ ಬಿಜೆಪಿಯ ಓಪನ್ ಸೀಕ್ರೆಟ್. ಹೀಗಿರುವಾಗ ನಳಿನ್ ಅವರನ್ನು ಅಪರಾಧಿಯಾಗಿ ನೋಡುವುದು ಸರಿಯಲ್ಲ ಎನ್ನುತ್ತಿರುವ ಬಿಜೆಪಿ ಕಾರ್ಯಕರ್ತರು ನಳಿನ್ ಬೆಂಬಲಕ್ಕೆ ನಿಂತಿದ್ದಾರೆ.
ಏನಿದು ದಿಢೀರ್ ಬೆಳವಣಿಗೆ?
ಇತ್ತೀಚಿನ ದಿನಗಳಲ್ಲಿ ನಳಿನ್ ಕಾರ್ಯವೈಖರಿ ಬಗ್ಗೆ ಬಿಜೆಪಿ ಕಾರ್ಯಕರ್ತರು ಬೇಸತ್ತಿದ್ದರು. ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿ ಬದಲಾವಣೆ ಆಗಬೇಕಿದೆ ಎಂಬ ಅಭಿಪ್ರಾಯ ಮುಂದಿಡುತ್ತಿದ್ದರು. ಆದರೆ ಕಳೆದೆರಡು ದಿನಗಳಿಂದ ಅದೇ ಕಾರ್ಯಕರ್ತರು ನಳಿನ್ ಬಗ್ಗೆ ಅನುಕಂಪ ತೋರಿ ಮತ್ತೆ ಅಖಾಡಕ್ಕೆ ಧುಮುಕಿದ್ದಾರೆ. ಇದಕ್ಕೆ ಕಾರಣವಾದದ್ದು ಕಾಂಗ್ರೆಸ್ ನಾಯಕರ ಟೀಕೆ, ಹಾಗೂ ಫೋನ್ ಕದ್ದಾಲಿಕೆಯ ಆರೋಪ.
ಈ ವಿಚಾರದಲ್ಲಿ ಈಶ್ವರಪ್ಪ, ಯತ್ನಾಳ್ ಸಹಿತ ಬಿಜೆಪಿಯ ಹಲವು ನಾಯಕರು ನಳಿನ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಅದೇ ಹೊತ್ತಿಗೆ ಬಿಜೆಪಿ ಶಾಸಕರು ಹಾಗೂ ಪ್ರಮುಖರ ನಿಯೋಗವು ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿ ಕಾನೂನು ಹೋರಾಟಕ್ಕೂ ಮುನ್ನುಡಿ ಬರೆದಿದೆ. ನಳಿನ್ ಅವರ ಫೋನ್ ಟ್ಯಾಪ್ ಮಾಡಲಾಗಿದೆ ಎಂದು ಯತ್ನಾಳ್ ಆರೋಪಿಸಿದ ನಂತರವಂತೂ ನಳಿನ್ ಅವರನ್ನು ತುಳಿತಕ್ಕೊಳಗಾಗಲು ಬಿಡುವುದಿಲ್ಲ ಎಂಬಂತೆ ಕಡಲತಡಿಯ ಯವಕರು ಸನ್ನದ್ದರಾಗಿದ್ದಾರೆ.
ರಾಜ್ಯ ರಾಜಕಾರಣದಲ್ಲಿನ ಈ ಬೆಳವಣಿಗೆ ನಳಿನ್ ಕುಮಾರ್ ಕಟೀಲ್ ಅವರನ್ನು ಮತ್ತೆ ಯೂತ್ ಐಕಾನ್ ಆಗಿ ಮಾಡಿಸಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.