ಬೆಂಗಳೂರು: ರಾಜ್ಯದ ಸಹಕಾರಿ ಸಂಘ ಹಾಗೂ ಸಹಕಾರ ಬ್ಯಾಂಕುಗಳು ಸಾಲ ವಸೂಲಾತಿಗಾಗಿ ಅಕ್ರಮ ಹಾದಿ ಹಿಡಿದಿವೆ ಎಂದು ಪ್ರದೇಶ ಕಾಂಗ್ರೆಸ್ ವಕ್ತಾರರೂ ಆಗಿರುವ ಮಾಜಿ ಶಾಸಕ ರಮೇಶ್ ಬಾಬು ಆರೋಪಿಸಿದ್ದಾರೆ. ಸಹಕಾರಿ ಸಂಘಗಳು ಹಾಗೂ ಸಹಕಾರ ಬ್ಯಾಂಕುಗಳು ಪರ್ಸನಲ್ ಲೋನ್ ಅಥವಾ ಅನ್‌ಸೆಕ್ಯೂರ್‌ಡ್ ಲೋನ್ ವಸೂಲಾತಿಗೆ ಅನುಸರಿಸುವ ಮಾರ್ಗವನ್ನೇ ಭದ್ರತಾ ಸಾಲಗಳ ವಸೂಲಾತಿಗೂ ಅನುಸರಿಸುತ್ತಿದ್ದಾರೆ. ಸುಸ್ತಿದದಾರೆಂಬ ಆರೋಪ ಹೊರಿಸಿ, ಗ್ರಾಹಕರ ಭಾವಚಿತ್ರದೊಂದಿಗೆ ಪತ್ರಿಕಾ ಪ್ರಕಟಣೆ ಹೊರಡಿಸಿ ಅಪರಾಧಿಗಳಂತೆ ಬಿಂಬಿಸಲಾಗುತ್ತಿದೆ ಎಂದು ರಮೇಶ್ ಬಾಬು ಅವರು ಮುಖ್ಯಮಂತ್ರಿಗೆ ಪತ್ರ ಬರೆದು ಗಮನಸೆಳೆದಿದ್ದಾರೆ.
ಸ್ವತಃ ವಕೀಲರೂ ಆಗಿರುವ ರಮೇಶ್ ಬಾಬು, ಈ ವಿಚಾರದಲ್ಲಿ ಕಾನೂನು ಉಲ್ಲಂಘನೆಯಾಗಿರುವ ಸಂಗತಿಗಳತ್ತ ಬೊಟ್ಟು ಮಾಡಿದ್ದಾರೆ. ಕಾನೂನು ಬಾಹಿರ ನಡೆ ಬಗ್ಗೆ ಪರಾಮರ್ಶಿಸಿ, ತಕ್ಷಣವೇ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ರಮೇಶ್ ಬಾಬು ಅವರು ಸಿಎಂ ಅವರನ್ನು ಆಗ್ರಹಿಸಿದ್ದಾರೆ.
ಸಿಎಂಗೆ ರಮೇಶ್ ಬಾಬು ಬರೆದಿರುವ ಪತ್ರದ ಪೂರ್ಣ ಪಾಠ ಇಲ್ಲಿದೆ:
ಕರ್ನಾಟಕ ರಾಜ್ಯದ ಸಹಕಾರ ಕ್ರೆಡಿಟ್ ಸಂಘಗಳು, ಬ್ಯಾಂಕುಗಳು ತಮ್ಮ ಸದಸ್ಯರಿಗೆ ಸ್ಥಿರಾಸ್ತಿಯ ಮೇಲೆ ಭದ್ರತಾ ಸಾಲಗಳನ್ನು ನೀಡಿರುತ್ತಾರೆ. ಇಂತಹ ಸಹಕಾರ ಸಂಘಗಳು ಸಾಲ ವಸೂಲಾತಿಗೆ ವೈಯಕ್ತಿಕ ಸಾಲ ಅಥವಾ ಭದ್ರತಾ ರಹಿತವಾದ ಸಾಲಗಳ ಮೇಲೆ ಅನುಸರಿಸುವ ಕ್ರಮಗಳನ್ನು ಭದ್ರತಾ ಸಾಲಗಳ ಮೇಲೆ ಅನುಸರಿಸುವುದರ ಮೂಲಕ ರಾಜ್ಯದ ಸಹಕಾರ ಸಂಘಗಳ ಸದಸ್ಯರಿಗೆ, ರೈತರಿಗೆ, ಉದ್ದಿಮೆದಾರರಿಗೆ ತೊಂದರೆ ನೀಡುತ್ತಿದ್ದಾರೆ.
ಸಹಕಾರ ಸಂಘಗಳು, ಬ್ಯಾಂಕುಗಳು ನಿಯಮಾನುಸಾರ ಸಾಲಗಾರರಿಗೆ ಕಿರುಕುಳ ನೀಡದೆ ಸಾಲ ವಸೂಲಿ ಮಾಡಲು ಯಾವುದೇ ಆಕ್ಷೇಪಣೆ ಇರುವುದಿಲ್ಲ. ಆದರೆ ಅನುತ್ಪಾದಕ (ಎನ್‍ಪಿಎ) ಸಾಲದ ವಸೂಲಿ ಹೆಸರಿನಲ್ಲಿ ಭದ್ರತಾ ಸಾಲಗಳನ್ನು ಪಡೆದಿರುವ ಸಾಲಗಾರರ ಭಾವಚಿತ್ರಗಳನ್ನು ಜಾಹಿರಾತು ನೀಡಿ, ಸಾಲಗಾರರ ಚಾರಿತ್ರ್ಯವದೆ ಮಾಡುವ ಕಾನೂನು ಬಾಹಿರ ಕೆಲಸಗಳನ್ನು ಕೆಲವು ಸಹಕಾರ ಸಂಘಗಳು, ಬ್ಯಾಂಕುಗಳು ಮಾಡುತ್ತಿವೆ. ಸಾಮಾನ್ಯವಾಗಿ ಭದ್ರತಾ ಸಾಲಗಳಲ್ಲಿ ಸ್ಥಿರಾಸ್ತಿಗಳನ್ನು ಮೌಲ್ಯಮಾಪನ ಮಾಡಿ, ಜಾಮೀನು ಪಡೆದುಕೊಂಡು ಸಾಲವನ್ನು ನೀಡಲಾಗಿರುತ್ತದೆ. ವ್ಯವಹಾರಿಕ ಹಾಗೂ ಆದಾಯದ ಕೊರತೆಯಿಂದಾಗಿ ಇಂತಹ ಸಾಲಗಳಲ್ಲಿ ಸಾಲಗಾರರು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಲು ಸಾದ್ಯವಾಗುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಉಂಟಾಗಿರುವ ಕೋವಿಡ್ ಪರಿಸ್ಥಿತಿ ಸಾಲಗಾರರನ್ನು ಮತ್ತಷ್ಟು ಕಠಿಣ ಪರಿಸ್ಥಿತಿಗೆ ತಂದು ನಿಲ್ಲಿಸಿದೆ.
ಭದ್ರತಾ ಸಾಲಗಳಲ್ಲಿ ಸಹಕಾರ ಸಂಘಗಳು, ಬ್ಯಾಂಕುಗಳಿಗೆ ಆಧಾರವಾಗಿರುವ ಸ್ವತ್ತಿನ ಮೂಲಕ, ನಿಗದಿತ ಸಮಯದಲ್ಲಿ ಸಾಲ ಮರುಪಾವತಿ ಆಗದೆ ಇದ್ದರೆ, ನಿಯಮಾನುಸಾರ ಜಾಹಿರಾತು ನೀಡಿ, ದಾವೆಯನ್ನು ದಾಖಲಿಸಿ ಸಾಲ ವಸೂಲಿ ಮಾಡಿಕೊಳ್ಳಲು ಅವಕಾಶವಿರುತ್ತದೆ ಮತ್ತು ಇದು ಸಮಂಜಸವೂ ಆಗಿರುತ್ತದೆ. ಆದರೆ ಕೆಲವು ಪ್ರಕರಣಗಳಲ್ಲಿ ಕೆಲವು ಸಹಾಕಾರ ಸಂಘ, ಬ್ಯಾಂಕುಗಳು ಸಾಲ ವಸೂಲಾತಿ ಸಂಬಂಧ ನೀಡುವ ಜಾಹಿರಾತಿನಲ್ಲಿ ಸಾಲಗಾರರ ಭಾವಚಿತ್ರ ಸಹಿತವಾಗಿ ಜಾಹಿರಾತು ನೀಡುತ್ತಿರುವುದು ಕಾನೂನುಬಾಹಿರವಾಗಿರುತ್ತದೆ. ಸ್ಥಿರಾಸ್ತಿಯ ಮೂಲಕ ತಮ್ಮ ವಹಿವಾಟಿಗಾಗಿ ಅಥವಾ ಜೀವನದ ಅವಶ್ಯಕತೆಗಾಗಿ ಸಾಲ ಪಡೆಯುವುದು ಒಂದು ಸಿವಿಲ್ ಪ್ರಕರಣದ ಪ್ರಕ್ರಿಯೆ ಆಗಿದ್ದು, ಸಾಲ ಮರುಪಾವತಿಯ ವೈಫಲ್ಯ ಯಾವುದೇ ಕ್ರಿಮಿನಲ್ ಅಪರಾಧ ಆಗಿರುವುದಿಲ್ಲ. ಆದರೆ ಜಾಹಿರಾತುಗಳಲ್ಲಿ ಸಾಲಗಾರರ ಭಾವಚಿತ್ರಗಳನ್ನು ಪ್ರಕಟಿಸಿ ಅವರನ್ನು ಅಪರಾಧಿಗಳ ರೀತಿಯಲ್ಲಿ ನೋಡುವುದು ಸರಿಯಲ್ಲ.
ಆದಕಾರಣ ತಾವು ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಮೂಲಕ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿ, ಸ್ಥಿರಾಸ್ತಿ ಸಾಲ ವಸೂಲಾತಿ ಪ್ರಕರಣಗಳಲ್ಲಿ ಸಾಲಗಾರರ, ರೈತರ, ಉದ್ಯಮಿಗಳ ಭಾವಚಿತ್ರ ರಹಿತವಾಗಿ ಜಾಹಿರಾತು ನೀಡಲು ಸುತ್ತೋಲೆ ಹೊರಡಿಸಲು ಮತ್ತು ಇದಕ್ಕೆ ವಿರುದ್ಧವಾಗಿ ಸಹಕಾರ ಸಂಘಗಳು, ಬ್ಯಾಂಕುಗಳು ಜಾಹಿರಾತು ನೀಡಿದರೆ ಅವರ ಮೇಲೆ ಕ್ರಮ ಕೈಗೊಳ್ಳಲು ಆದೇಶ ಮಾಡಬೇಕಾಗಿದೆ.