ಬೆಂಗಳೂರು: ಆರೋಗ್ಯ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತರು ತಮ್ಮ ಬಹುಕಾಲದ ಕನಸುಗಳು ನನಸಾಗುವ ಬಗ್ಗೆ ನಿರೀಕ್ಷೆ ಹೊಂದಿದ್ದಾರೆ. ತಮಗೆ ಕನಿಷ್ಠ 15,000 ರೂಪಾಯಿ ಮಾಸಿಕ ವೇತನ ನಿಗದಿ ಆಗಬೇಕೆಂಬುದು ಬಹುಕಾಲದಿಂದಲೂ ಆಶಾ ಕಾರ್ಯಕರ್ತರು ಹೋರಾಟ ನಡೆಸುತ್ತಲೇ ಬಂದಿದ್ದು, ಇದೀಗ ಹೊಸ ಸರ್ಕಾರದ ಬಜೆಟ್’ಗೆ ಮುನ್ನಆಶಾ ಕಾರ್ಯಕರ್ತೆಯರ ಸಂಘಕ್ಕೆ ಆರೋಗ್ಯ ಸಚಿವರು ನೀಡಿರುವ ಭರವಸೆ ಉತ್ತಮ ಬೆಳವಣಿಗೆಯಾಗಿದೆ.
ಆಶಾಗಳಿಂದ ಆರೋಗ್ಯ ಸಚಿವರ ಭೇಟಿ:
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಕೆ.ಸೋಮಶೇಖರ್, ರಾಜ್ಯ ಉಪಾಧ್ಯಕ್ಷರಾದ ರಮಾ ಹಾಗೂ ರಾಜ್ಯ ಕಾರ್ಯದರ್ಶಿ ನಾಗಲಕ್ಷ್ಮಿ ಅವರನ್ನೊಳಗೊಂಡ ನಿಯೋಗ ಬೆಂಗಳೂರಿನಲ್ಲಿ ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿತು. ವಿವಿಧ ಜಿಲ್ಲೆಗಳ ಆಶಾ ಮುಖಂಡರು ಈ ನಿಯೋಗದಲ್ಲಿದ್ದರು.
ಸಚಿವರ ಭರವಸೆ:
ಪ್ರಮುಖವಾಗಿ ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಮತ್ತು ರಾಜ್ಯದ ಗೌರವ ಧನ ಸೇರಿಸಿ ಕನಿಷ್ಠ 15000 ಮಾಸಿಕ ವೇತನ ನಿಗದಿ ಆಗಬೇಕೆಂದು ಆಶಾ ಕಾರ್ಯಕರ್ತೆಯರ ಸಂಘದ ಪ್ರಮುಖರು ಬೇಡಿಕೆ ಸಲ್ಲಿಸಿದರು.
ಹೆಚ್ಎಂಎಸ್ ಸರ್ವೆಯನ್ನು ಕೂಡಲೇ ಕೈಬಿಡಬೇಕೆಂದೂ ಆಗ್ರಹಿಸಿದರು. ಇದರ ಜೊತೆ ಈಗಾಗಲೇ ಬಹುಕಾಲದಿಂದ ಹಲವು ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸುತ್ತಿದ್ದು, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.
ಇದೇ ವೇಳೆ, ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವ ಬಗ್ಗೆ ಪ್ರಯತ್ನಿಸುವ ಭರವಸೆಯನ್ನು ಸಚಿವ ದಿನೇಶ್ ಗುಂಡೂರಾವ್ ಅವರು ನೀಡಿದ್ದಾರೆ. ಈ ನಡುವೆ, ಸಧ್ಯವೇ, ಈ ಕುರಿತು ಸಭೆ ಕರೆಕರೆಯಲಾಗಿದ್ದು, ಈ ಬಗ್ಗೆ ಸೂಕ್ತ ತೀರ್ಮಾನವಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (AIUTUC) ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.