ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮದ ಆರೋಪಿಗಳಿಗೆ ಸಹಕರಿಸಿದ ಆರೋಪ, ಸ್ಯಾಂಟ್ರೋ ರವಿ ಜೊತೆಗಿನ ವರ್ಗಾವಣೆ ಅಕ್ರಮಗಳ ಹಿನ್ನೆಲೆಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಪ್ರದೇಶ ಕಾಂಗ್ರೆಸ್ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಅರಗ ಜ್ಞಾನೇಂದ್ರರ ನಡೆ, ಅಧಿಕಾರ ದುರುಪಯೋಗ ಸಹಿತ ಹಲವಾರು ವಿಚಾರಗಳನ್ನು ಮುಂದಿಟ್ಟು ವಾಗ್ದಾಳಿ ನಡೆಸಿದರು. ಪಿಎಸ್ಐ ನೇಮಕಾತಿ ಅಕ್ರಮದ ಪ್ರಮುಖ ಆರೋಪಿ ದಿವ್ಯ ಹಾಗರಗಿ, ಸ್ಯಾಂಟ್ರೋ ರವಿ ಅವರ ಜೊತೆ ಸೇರಿ ವರ್ಗಾವಣೆ ದಂದೆ ಮಾಡಿರುವ ಆರೋಪ ಹೊತ್ತಿರುವ ಅರಗ ಜ್ಞಾನೇಂದ್ರ ಅವರು ಈಗ ಕಿಮ್ಮನೆ ರತ್ನಾಕರ ಅವರ ಹೆಸರಿಗೆ ಮಸಿ ಬಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.
ಅರಗ ಜ್ಞಾನೇಂದ್ರ ಅವರ ರಾಜೀನಾಮೆಗೆ ನಾವೀಗ ಅಗ್ರಹಿಸುವುದಿಲ್ಲ. ಅವರು ನೈತಿಕತೆ ಇಟ್ಟುಕೊಂಡು ರಾಜಕಾರಣ ಮಾಡಿದ್ದರೆ ಅವರು ರಾಜೀನಾಮೆ ನೀಡುತ್ತಿದ್ದರು. ಆದರೆ ಅವರು ನೈತಿಕತೆ ಕಳೆದುಕೊಂಡಿದ್ದು, ಮಾನ್ಯ ಮುಖ್ಯಮಂತ್ರಿಗಳಿಗೆ ಸ್ವಲ್ಪವಾದರೂ ನೈತಿಕತೆ, ಉಳಿದಿದ್ದರೆ ಅವರು ಕೂಡಲೇ ಅರಗ ಜ್ಞಾನೇಂದ್ರ ಅವರನ್ನು ಸಂಪುಟದಿಂದ ವಜಾ ಗೊಳಿಸಬೇಕು ಎಂದು ಕೇಳುತ್ತೇನೆ ಎಂದು ಅವರು ಮಾರ್ಮಿಕವಾಗಿ ನುಡಿದರು.
ಜಂಟಿ ಮಾಧ್ಯಮಗೋಷ್ಠಿ, ಕೆಪಿಸಿಸಿ ಕಚೇರಿ. https://t.co/GUFFbxbPYm
— Karnataka Congress (@INCKarnataka) January 13, 2023
ಅರಗ ಜ್ಞಾನೇಂದ್ರ ಅವರು ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದ ಇಲ್ಲಿಯವರೆಗೂ ಒಂದಲ್ಲ ಒಂದು ರೀತಿಯ ಹಗರಣಗಳನ್ನು ಮಾಡಿಕೊಂಡು ಬಂದಿದ್ದಾರೆ. ಆರಂಭದಲ್ಲಿ ಪೊಲೀಸರನ್ನು ನಿಂದಿಸಿ ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸಿದರು. ಪಿಎಸ್‌ಐ ನೇಮಕಾತಿ ಅಕ್ರಮದ ಪ್ರಮುಖ ಆರೋಪಿ ದಿವ್ಯ ಹಾಗರಗಿ ಅವರ ನಿವಾಸಕ್ಕೆ ಭೇಟಿ ನೀಡಿ ಈ ಅಕ್ರಮ ನಡೆಸಲು ಎಲ್ಲಾ ರೀತಿಯ ಸಹಕಾರವನ್ನು ನೀಡಿದ್ದಾರೆ ಎಂದು ದೂರಿದ ರಮೇಶ್ ಬಾಬು, ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಇಂತಹ ಹಗರಣದಲ್ಲಿ ಸಿಲುಕಿ ಅಮಾನತುಗೊಂಡಿರುವ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ ಅರಗ ಜ್ಞಾನೇಂದ್ರ ಅವರೇ ಕಾರಣ ಎಂದರು.
ಜೆಜಿ ನಗರದಲ್ಲಿ ನಡೆದ ಸಣ್ಣ ಗಲಭೆಗೆ ಕೋಮು ಗಲಭೆಯ ಬಣ್ಣವನ್ನು ನೀಡುವ ಪ್ರಯತ್ನ ಮಾಡಿದರು. ಆಗಿನ ಪೊಲೀಸ್ ಆಯುಕ್ತರು ಇದು ಸ್ಥಳೀಯವಾಗಿ ನಡೆದಿರುವ ಗಲಾಟೆ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದರು, ಅವರಿಗಿಂತ ಮುಂಚಿತವಾಗಿ ಗೃಹ ಸಚಿವರು ಇದು ಸಮುದಾಯಗಳ ನಡುವಿನ ಕೋಮುಗಲಭೆ ಎಂದು ಹೇಳಿಕೆ ನೀಡಿದ್ದರು. ಇಷ್ಟೆಲ್ಲಾ ಆರೋಪ ಹೊತ್ತಿರುವ ಗೃಹ ಸಚಿವರು ಈಗ ಮಂಗಳೂರು ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಮ್ಮನೆ ರತ್ನಾಕರವರ ಪಾತ್ರವಿದೆ ಹೀಗಾಗಿ ಎನ್ಐಎ ಅಧಿಕಾರಿಗಳು ಕಿಮ್ಮನೆ ರತ್ನಾಕರ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ ಎಂಬ ಆರೋಪದ ಸುದ್ದಿಗಳನ್ನು ಹರಡುವ ಪ್ರಯತ್ನ ಮಾಡಿದ್ದಾರೆ. ಸಂಘ ಪರಿವಾರದಿಂದ ಬಂದಿರುವ ಅರಗ ಜ್ಞಾನೇಂದ್ರ ಅವರು ಕೆಲವು ಮೌಲ್ಯಗಳನ್ನು ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ಅವರ ಮೇಲೆ ಗೌರವವನ್ನು ಇಟ್ಟುಕೊಂಡಿದ್ದೆ. ಆದರೆ ಅವರು ಜನರಿಗೆ ವಿರೋಧವಾಗಿ ರಾಜ್ಯದಲ್ಲಿ ಹಲವು ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಈ ರಾಜ್ಯದಲ್ಲಿ ಮಹಿಳೆಯರು, ದಲಿತರು, ಜನಸಾಮಾನ್ಯರ ಮೇಲಿನ ದೌರ್ಜನ್ಯ ಪ್ರತಿನಿತ್ಯ ಹೆಚ್ಚಾಗಿದ್ದು, ರಾಜ್ಯದಲ್ಲಿ ರೌಡಿಗಳು ಹಾಗೂ ಗೂಂಡಾಗಳು ವಿಜೃಂಭಿಸುತ್ತಿದ್ದಾರೆ. ಸಮಾಜದಲ್ಲಿ ಕೊಲೆಗಳು ಹೆಚ್ಚಾಗುತ್ತಿವೆ. ಹೀಗೆ ಗೃಹ ಸಚಿವರಾಗಿ ಅರಗ ಜ್ಞಾನೇಂದ್ರ ಅವರು ಸಂಪೂರ್ಣ ವೈಫಲ್ಯವನ್ನು ಅನುಭವಿಸಿದ್ದಾರೆ. ಅವರು ತಮ್ಮ ಈ ವೈಫಲ್ಯವನ್ನು ಒಪ್ಪಿಕೊಳ್ಳಬೇಕಾಗಿದೆ ಎಂದರು.
ಅರಗ ಜ್ಞಾನೇಂದ್ರ ಅವರು ತಮ್ಮ ಕ್ಷೇತ್ರದಲ್ಲೂ ಇಂತಹ ಅವಾಂತರಗಳಿಗೆ ಅವಕಾಶ ನೀಡಿದ್ದಾರೆ. 2018ರಲ್ಲಿ ಲಿಸ್ಟ್ ಮೂಲಕ ಕಾಂಗ್ರೆಸ್ ಪಕ್ಷ ಆ ಕಚೇರಿಯನ್ನು ಬಾಡಿಗೆ ಪಡೆದಿದ್ದು, ಅದು ಬಾಂಬ್ ಬ್ಲಾಸ್ಟ್ ಆರೋಪಿಯ ಕುಟುಂಬಕ್ಕೆ ಸೇರಿದ ಆಸ್ತಿ ಎಂಬ ನೆಪವನ್ನು ಇಟ್ಟುಕೊಂಡು ಕಿಮ್ಮನೆ ರತ್ನಾಕರ ಅವರ ಮನೆ ಮೇಲೆ ಎನ್‌ಐಎ ದಾಳಿ ನಡೆಸಿದೆ ಎಂಬ ರೀತಿಯಲ್ಲಿ ವ್ಯವಸ್ಥಿತವಾದ ಸುಳ್ಳು ಪ್ರಚಾರವನ್ನು ಮಾಡಿದ್ದಾರೆ ಎಂದು ಮಾಜಿ ಶಾಸಕರೂ ಆದ ರಮೇಶ್ ಬಾಬು ಗೃಹ ಸಚಿವರ ವಿರುದ್ದ ಆಕ್ರೋಶ ಹೊರಹಾಕಿದರು.
ತೀರ್ಥಹಳ್ಳಿಯಲ್ಲಿ ಅರಗ ಜ್ಞಾನೇಂದ್ರ ಅವರು ಕ್ಷೇತ್ರದ ಸಂಪೂರ್ಣ ಅಧಿಕಾರವನ್ನು ತಮ್ಮ ಮಗನಿಗೆ ನೀಡಿದ್ದು, ಅಲ್ಲಿ ರಿಯಲ್ ಎಸ್ಟೇಟ್ ಹಾಗೂ ಮರಳು ದಂಧೆಗಳು ಹೆಚ್ಚಾಗಿ ನಡೆಯುತ್ತಿವೆ. ತಮ್ಮ ಅಳಿಯನನ್ನು ಬಳಸಿಕೊಂಡು ಕ್ಷೇತ್ರದಲ್ಲಿ ರಿಯಲ್ ಎಸ್ಟೇಟ್ ಲಾಭಿಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ ರಮೇಶ್ ಬಾಬು, ಚುನಾವಣೆಗೆ ಕೆಲವೇ ಕೆಲವು ದಿನಗಳು ಬಾಕಿ ಇರುವ ಸಮಯದಲ್ಲಿ ಸಜ್ಜನ ರಾಜಕಾರಣಿ ಕಿಮ್ಮನೆ ರತ್ನಾಕರ ಅವರಿಗೆ ಮಸಿ ಬಳೆಯುವಂತಹ ಪ್ರಯತ್ನ ಮಾಡುತ್ತಿದ್ದಾರೆ. ಅರಗ ಜ್ಞಾನೇಂದ್ರ ಅವರು 1983, 85 ಹಾಗೂ 1989 ರಲ್ಲಿ ಚುನಾವಣೆಯಲ್ಲಿ ಸೋತಿದ್ದರು. ಈಗ ಜನ ಆಶೀರ್ವಾದ ಮಾಡಿ ಗೆಲುವು ಸಾಧಿಸಿ ಗೃಹ ಸಚಿವ ಸ್ಥಾನವನ್ನು ಅಲಂಕರಿಸಿದ್ದೀರಿ, ಈ ಅಧಿಕಾರ ಸಿಕ್ಕ ಅವಧಿಯಲ್ಲಿ ನೀವು ಕಾನೂನು ಸುವ್ಯವಸ್ಥೆ ಬಲಪಡಿಸಿ, ಜನರಲ್ಲಿ ವಿಶ್ವಾಸ ತುಂಬಿ, ಸರ್ಕಾರಕ್ಕೆ ಶಕ್ತಿಯನ್ನು ನೀಡಬೇಕು. ಅದನ್ನು ಬಿಟ್ಟು ಪಿಎಸ್ಐ, ವರ್ಗಾವಣೆ ದಂಧೆ ಮಾಡುತ್ತಿದ್ದಾರೆ ಎಂದೂ ದೂರಿದರು.
ಗೃಹ ಸಚಿವ ಸ್ಥಾನ ದುರ್ಬಳಕೆ, ಕೇಂದ್ರ ತನಿಖಾ ಸಂಸ್ಥೆಗಳ ಹೆಸರು ಬಳಸಿಕೊಂಡು ಕಾಂಗ್ರೆಸ್ ನಾಯಕರ ಹೆಸರಿಗೆ ಕಳಂಕ ತರಲು ಮುಂದಾಗಿದ್ದಾರೆ. ಮುಖ್ಯಮಂತ್ರಿಗಳು ಅರಗ ಅವರನ್ನು ಸಂಪುಟದಿಂದ ಕೈ ಬಿಡದಿದ್ದರೆ ತೀರ್ಥಹಳ್ಳಿಯಿಂದಲೆ ಇವರ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅರಗ ಜ್ಞಾನೇಂದ್ರ ಅವರು, ತೀರ್ಥಹಳ್ಳಿಯಲ್ಲಿ ನಾಲ್ಕು ಬಾರಿ ಸೋತಿದ್ದು, ಈಗ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ. ಸಂಘ ಪರಿವಾರದ ಹಿನ್ನೆಲೆಯಿಂದ ರಾಜಕೀಯಕ್ಕೆ ಬಂದ ಅರಗ ಜ್ಞಾನೇಂದ್ರ ಅವರು ತಾವು ಗಣೇಶ್ ಭಟ್ ಎಂಬುವವರಿಂದ ನೈತಿಕತೆ ಕಲಿತಿದ್ದೇನೆ, ನಾನು ಸಂಗ ಪರಿವಾರದ ನೈತಿಕತೆಯನ್ನು ಪಾಲನೆ ಮಾಡುತ್ತೇನೆ ಎಂದು ಆಗಾಗ್ಗೆ ಹೇಳುತ್ತಿರುತ್ತಾರೆ. ಅರಗ ಜ್ಞಾನೆಂದ್ರ ಅವರು ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದ ಕಿಮ್ಮನೆ ರತ್ನಾಕರ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ರಾಜ್ಯದಲ್ಲಿ ಸಜ್ಜನ ರಾಜಕಾರಣ ಮಾಡುವವರನ್ನು ಹುಡುಕಿದರೆ ನಮಗೆ ಸಿಗುವ ಕೆಲವೇ ಕೆಲವು ನಾಯಕರಲ್ಲಿ ಕಿಮ್ಮನೆ ರತ್ನಾಕರವರ ಕೂಡ ಒಬ್ಬರು. ಕಾಂಗ್ರೆಸ್ ಪಕ್ಷದ ಗೆ ಉದ್ದೇಶಗಳು ಹಾಗೂ ಕಿಮ್ಮನೆ ರತ್ನಾಕರ ಅವರನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದೇ ಇರುವುದರಿಂದ ಅರಗ ಜ್ಞಾನೇಂದ್ರ ಅವರು ರಾಜಕೀಯ ಸಿದ್ಧಾಂತ ರೂಪಿಸಲು ಮುಂದಾಗಿದ್ದಾರೆ ಎಂದು ರಮೇಶ್ ಬಾಬು ವಾಗ್ದಾಳಿ ನಡೆಸಿದರು.




















































