ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ವಿರುದ್ಧ ಬೇರೆಯವರು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿ.ವಿ.ಸದಾನಂದಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹೊಂದಾಣಿಕೆ ರಾಜಕಾರಣ ಬಿಜೆಪಿಯದಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ರಾಜಕಾರಣ ಆಗಿರಬಹುದು. ಕಾಂಗ್ರೆಸ್‍ನವರು ಹಾಸನದಲ್ಲಿ ಅವರ ಜೊತೆ ಹೋಗಿದ್ದಾರೆ. ಮೈಸೂರು ಭಾಗ, ಕೊಡಗಿನಲ್ಲಿ ಬೇರೆ ರೀತಿಯ ರಾಜಕಾರಣ ನೋಡಿದ್ದೇವೆ. ಇದರ ಅರ್ಥ ಬಿಜೆಪಿ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದೆ ಎಂದಲ್ಲ ಎಂದರು.
ಹಾಸನದಲ್ಲಿ ಹೊಂದಾಣಿಕೆ ರಾಜಕೀಯ ಕಾಣಬಹುದು. ಸಿ.ಟಿ.ರವಿಯವರ ಕ್ಷೇತ್ರದಲ್ಲಿ ಒಳ ಒಪ್ಪಂದ ಆದಂತಿದೆ. ಇದೆಲ್ಲ ಒಳ ರಾಜಕೀಯ. ಒಪ್ಪಂದದ ರಾಜಕಾರಣ ಇದು. ಎಲ್ಲೋ ಅಲ್ಲಿಯೋ ಇಲ್ಲಿಯೋ ನಮ್ಮ ಪಕ್ಷದಲ್ಲೂ ಒಳ ಒಪ್ಪಂದ ಆಗಿರಲೂ ಬಹುದು. ನಮ್ಮಲ್ಲಿ ಅಂಥದ್ದಕ್ಕೆ ಅವಕಾಶ ಇಲ್ಲ. ಆದರೂ ವೈಯಕ್ತಿಕ ದ್ವೇಷಕ್ಕಾಗಿ ಸಣ್ಣಪುಟ್ಟದು ಆಗಿದ್ದರೆ ಅದನ್ನು ರಾಜಕಾರಣದಲ್ಲಿ ದೊಡ್ಡ ಸಂಗತಿ ಎಂದು ನಾನು ತಿಳಿದುಕೊಳ್ಳುವುದಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು.
ಅಂಥದ್ದು ಆಗಬಾರದಿತ್ತು. ನಿಜವಾದ ತಪ್ಪಿತಸ್ಥರ ವಿರುದ್ಧ ಟ್ರೀಟ್‍ಮೆಂಟ್ ಕೊಡಲು ಪಕ್ಷ ಸಿದ್ಧವಿದೆ. ಸಂಘಟನೆಯಲ್ಲಿ ಹಲವಾರು ಸಂದರ್ಭದಲ್ಲಿ ತಪ್ಪು ಮಾಡಿದವರನ್ನು ತಿದ್ದುವ ಕೆಲಸ ಹಿಂದಿನಿಂದಲೇ ನಡೆದಿದೆ. ಆದರೆ, ಆತುರಾತುರವಾಗಿ ಕ್ರಮ ಕೈಗೊಳ್ಳುವುದಿಲ್ಲ ಎಂದು ನುಡಿದರು.
ಆಡಳಿತ ವಿರೋಧಿ ಅಲೆ, ಕಾಂಗ್ರೆಸ್ ಭರವಸೆಗಳ ಹಿನ್ನೆಲೆಯಲ್ಲಿ ನಾವು ಸೋತಿರುವ ಸಾಧ್ಯತೆ ಇದೆ. ನಮಗಿಂತ ಹೆಚ್ಚಿನ ರಾಜಕೀಯ ತಂತ್ರಗಾರಿಕೆ ಮಾಡುವುದರಲ್ಲಿ ನಮ್ಮ ವಿರೋಧಿಗಳು ಯಶಸ್ವಿ ಆಗಿರುವಂತಿದೆ ಎಂದ ಅವರು, ಸೋತ ತಕ್ಷಣ ಬೇರೆ ಪಕ್ಷದಿಂದ ಬಂದವರ ಮೇಲೆ ಆರೋಪ ಹೊರಿಸುವುದು ಸೂಕ್ತ ಎಂದು ನನಗೆ ಅನಿಸುವುದಿಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ನಮ್ಮ ಮನೆಗೆ ಬಂದ ಅವರು ನಮ್ಮವರು. ವೈಯಕ್ತಿಕವಾಗಿ ಸೋಲಿನ ವಿಶ್ಲೇಷಣೆ ಮಾಡಬೇಕು ಎಂದು ತಿಳಿಸಿದರಲ್ಲದೆ, ಬೇರೆ ಪಕ್ಷದಿಂದ ಬಂದವರಿಂದ ಸೋತಿದ್ದೇವೆ ಎನ್ನಲಾಗದು. ಬಂದವರ ಪೈಕಿ ಕೆಲವರು ಸೋತಿದ್ದಾರೆ; ಅವರನ್ನು ಅವರೇ ಸೋಲಿಸಿಕೊಳ್ಳುತ್ತಾರಾ ಎಂದು ಪ್ರಶ್ನೆ ಮುಂದಿಟ್ಟರು.
ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಹೊಂದಾಣಿಕೆ- ಇವೆಲ್ಲವನ್ನೂ ಕೇಂದ್ರ ಸರಕಾರ ಮಾಡುತ್ತದೆ. ಇಲ್ಲಿ ಬಿಜೆಪಿ- ಜೆಡಿಎಸ್ ಹೊಂದಾಣಿಕೆ ಕುರಿತು ಮಾತುಗಳು ನನ್ನ ಗಮನಕ್ಕೆ ಬಂದಿಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು. ಯಕ್ಷಗಾನದಲ್ಲಿ ಕುಣಿಯಲು ಆಗದವ ರಂಗಸ್ಥಳ ಸರಿ ಇಲ್ಲ ಎಂಬಂತೆ ಕಾಂಗ್ರೆಸ್ ಅಕ್ಕಿ ವಿಚಾರದಲ್ಲಿ ಆರೋಪ ಮಾಡುತ್ತಿದೆ ಎಂದು ಅವರು ತಿಳಿಸಿದರು. ಕಾಂಗ್ರೆಸ್‍ನವರಿಗೆ ಭರವಸೆ ಕೊಟ್ಟದ್ದನ್ನು ಮಾಡಲಾಗದೆ ಏನು ಮಾಡಬೇಕೆಂದು ತೋಚುತ್ತಿಲ್ಲ. 13 ಬಜೆಟ್ ಕೊಟ್ಟ ಸಿದ್ದರಾಮಯ್ಯನವರಿಗೆ ಮುಂದಾಲೋಚನೆ ಇರಲಿಲ್ಲವೇ ಎಂದು ಕೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಕೇವಲ ಭಾರತಕ್ಕೆ ನಾಯಕರಲ್ಲ; ಅವರು ವಿಶ್ವ ನಾಯಕರು. ಅಮೆರಿಕ ಮತ್ತಿತರ ದೇಶಗಳ ಭೇಟಿಯ ವೇಳೆ ಇದು ಋಜುವಾತಾಗಿದೆ ಎಂದ ಅವರು, ನರೇಂದ್ರ ಮೋದಿಜಿ ಅವರ ಕಾರ್ಯವೈಖರಿ ಕಾರ್ಯಕರ್ತರಿಗೆ ಮಾದರಿ ಎಂದು ನುಡಿದರು.
ದೇಶದ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಲು ಪ್ರಧಾನಿಯವರು ತಿಳಿಸಿದ್ದಾರೆ. ಇಂಥ ನಾಯಕತ್ವ ಬಹಳ ವರ್ಷಗಳ ನಂತರ, ಅಟಲ್ ಬಿಹಾರಿ ವಾಜಪೇಯಿ ಅವರ ಬಳಿಕ ನಮಗೆ ಲಭಿಸಿದೆ. ಎಲ್ಲ ರಂಗಗಳಲ್ಲಿ ದೇಶವು ಅಭಿವೃದ್ಧಿ ಸಾಧಿಸಿದೆ ಎಂದರು.
ಇವತ್ತಿನ ಕಾರ್ಯಕ್ರಮವು ಪ್ರತಿಯೊಬ್ಬ ಕಾರ್ಯಕರ್ತರಿಗೆ ಸ್ಫೂರ್ತಿದಾಯಕ ಎಂದರು. ಬೇರೆ ಪಕ್ಷದವರು ಅಧಿಕಾರದಲ್ಲಿ ಇದ್ದವರು ಅಧಿಕಾರ ಕಳಕೊಂಡರೆ ಅಲ್ಲಿಂದಲೇ ಆಂಬುಲೆನ್ಸ್, ಸ್ಟ್ರೆಚರ್ ಬರಬೇಕಾದ ಪರಿಸ್ಥಿತಿ ಇರುತ್ತಿತ್ತು. ಆದರೆ, ಬಿಜೆಪಿಯಲ್ಲಿ ಹಾಗಿಲ್ಲ. ನಮ್ಮ ನಿರೀಕ್ಷೆಗೆ ತದ್ವಿರುದ್ಧವಾದ ಫಲಿತಾಂಶ ಯಾಕೆ ಬಂದಿದೆ ಎಂದು ತಿಳಿದುಕೊಳ್ಳುವ ಸಂದರ್ಭದಲ್ಲಿ ಕೆಲವರಿಂದ ಆಕ್ರೋಶ, ಭಾವನಾತ್ಮಕವಾಗಿ ಬೇಸರ ಹೊರಬರುವುದು ಸ್ವಾಭಾವಿಕ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.






















































