ಬೆಂಗಳೂರು: ಪ್ರತಿ ವರ್ಷದಂತೆ ಹೊಸ ವಿನ್ಯಾಸ ಮತ್ತು ತಂತ್ರಜ್ಞಾನದಿಂದ ಚರ್ಚೆಗೆ ಕಾರಣವಾಗುವ ಆಪಲ್ ಕಂಪನಿ, ಈ ಬಾರಿ ಮಧ್ಯಮ ವರ್ಗದ ಗ್ರಾಹಕರಿಗೂ ಆಕರ್ಷಕ ಆಯ್ಕೆಯೊಂದನ್ನು ತರಲು ಸಜ್ಜಾಗಿದೆ. ಕಂಪನಿಯ ಮುಂದಿನ ‘ಆಪಲ್ ಐಫೋನ್ 17e’ ಕಡಿಮೆ ಬೆಲೆಯ ಮಾದರಿಯಾಗಿ ಮಾರುಕಟ್ಟೆಗೆ ಬರಲಿದ್ದು, ಇದರಿಂದ ಮಧ್ಯಮ ವರ್ಗದವರ ಕನಸೂ ನನಸಾಗುವ ಸಾಧ್ಯತೆ ಇದೆ.
ವರದಿಗಳ ಪ್ರಕಾರ, ‘ಐಫೋನ್ 17e’ ಭಾರತದಲ್ಲಿ ಅಪ್‌ಗ್ರೇಡ್ ಮಾಡಲಾದ ಡಿಸ್ಪ್ಲೇ ಹಾಗೂ ನವೀನ A19 ಚಿಪ್ ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಸೋರಿಕೆಯಾದ ಮಾಹಿತಿ ಪ್ರಕಾರ, ಇದು ಆಪಲ್‌ನ ಹೊಸ ವಿನ್ಯಾಸ ಹಾಗೂ ಕಾರ್ಯಕ್ಷಮತೆಯ ಸುಧಾರಣೆಗಳೊಂದಿಗೆ ಗ್ರಾಹಕರ ಗಮನ ಸೆಳೆಯಲಿದೆ.
2026ರ ಮೊದಲ ತ್ರೈಮಾಸಿಕದಲ್ಲೇ ಈ ಫೋನ್ ಬಿಡುಗಡೆ ಆಗುವ ನಿರೀಕ್ಷೆ ವ್ಯಕ್ತವಾಗಿದೆ. ‘ಐಫೋನ್ 16e’ಗೆ ಮುಂದುವರಿದ ಮಾದರಿಯಾಗಿ ಬರುವ ಈ ಹೊಸ ಆವೃತ್ತಿ, ಬಲವಾದ ಕಾರ್ಯಕ್ಷಮತೆ, ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳು ಮತ್ತು ಕೈಗೆಟುಕುವ ಬೆಲೆಯಿಂದ ಗಮನ ಸೆಳೆಯಲಿದೆ ಎಂದು ಆಪಲ್ ಮೂಲಗಳು ತಿಳಿಸಿವೆ.
ಹೊಸ ‘ಐಫೋನ್ 17e’ ಮಾದರಿಯು ಪ್ರೀಮಿಯಂ ಫೋನ್‌ಗಳಲ್ಲಿ ಕಾಣಸಿಗುವ ‘ಡೈನಾಮಿಕ್ ಐಲ್ಯಾಂಡ್’ ವೈಶಿಷ್ಟ್ಯವನ್ನು ಹೊಂದಿರಲಿದೆ. ಪರದೆಯ ಮೇಲ್ಭಾಗದ ಮಾತ್ರೆ ಆಕಾರದ ಭಾಗದಲ್ಲಿ ಕರೆಗಳು, ಸಂಗೀತ, ನ್ಯಾವಿಗೇಷನ್ ಹಾಗೂ ಎಚ್ಚರಿಕೆಗಳಂತಹ ಚಟುವಟಿಕೆಗಳ ಮಾಹಿತಿ ಪ್ರದರ್ಶಿಸಲಾಗುತ್ತದೆ. ಮುಂಭಾಗದ ಕ್ಯಾಮೆರಾ ಮತ್ತು ಫೇಸ್‌ಐಡಿ ಸಂವೇದಕಗಳು ಇದೇ ಭಾಗದಲ್ಲಿರಲಿವೆ.
2022ರಲ್ಲಿ ಮೊದಲು ಐಫೋನ್ 14 ಪ್ರೊ ಮಾದರಿಯಲ್ಲಿ ಪರಿಚಯಿಸಲಾದ ಈ ವೈಶಿಷ್ಟ್ಯ, ನಂತರದ ಐಫೋನ್ 15 ಮತ್ತು 16 ಸರಣಿಗಳಲ್ಲಿಯೂ ಮುಂದುವರಿಯಿತು. ಈಗ ಇದೇ ವಿನ್ಯಾಸದ ತಂತ್ರಜ್ಞಾನವನ್ನು ಕಡಿಮೆ ಬೆಲೆಯ ಮಾದರಿಯಲ್ಲಿಯೂ ಪರಿಚಯಿಸುವ ಯೋಜನೆ ಆಪಲ್ ಕೈಗೊಂಡಿದೆ ಎಂದು ವರದಿಗಳು ಹೇಳುತ್ತಿವೆ.
ಸೋರಿಕೆಯಾದ ಮಾಹಿತಿಯ ಪ್ರಕಾರ, ಐಫೋನ್ 17e ಮಾದರಿ 6.1 ಇಂಚಿನ OLED ಡಿಸ್ಪ್ಲೇ ಮತ್ತು 60Hz ರಿಫ್ರೆಶ್ ದರ ಹೊಂದಿರಬಹುದು. ಹೈಎಂಡ್ ಐಫೋನ್ 17 ಮಾದರಿಗಳಲ್ಲಿ 120Hz ಪ್ರೊಮೋಷನ್ ಡಿಸ್ಪ್ಲೇ ಇರಲಿದೆಯಾದರೂ, ಕಡಿಮೆ ಬೆಲೆಯ ಮಾದರಿಯಲ್ಲಿ ಅದಿಲ್ಲದಿರಬಹುದು.
ಬೆಲೆಯ ವಿಷಯದಲ್ಲಿ, ಐಫೋನ್ 17e ಭಾರತದ ಮಾರುಕಟ್ಟೆಯಲ್ಲಿ ಸುಮಾರು ₹59,900 ರೂ. ಆರಂಭಿಕ ದರದಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ‘ಐಫೋನ್ 16e’ ಬಿಡುಗಡೆಯಾದ ಸುಮಾರು ಒಂದು ವರ್ಷದ ನಂತರ, ಫೆಬ್ರವರಿ 2026ರಲ್ಲಿ ಹೊಸ ಮಾದರಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.
ಮಧ್ಯಮ ವರ್ಗದ ಗ್ರಾಹಕರ ಕೈಗೂ ತಲುಪುವ ಈ ಹೊಸ ಐಫೋನ್ ಬಿಡುಗಡೆ, ಆಪಲ್ ಕಂಪನಿಯ ಮಾರುಕಟ್ಟೆ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲಿದೆ ಎಂಬ ಅಭಿಪ್ರಾಯ ತಜ್ಞರದು.
 
	    	



















































