ಚೆನ್ನೈ: ಜನಪ್ರಿಯ ಯೂಟ್ಯೂಬರ್ ವಿ.ಜೆ. ಸಿದ್ದು ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಚೊಚ್ಚಲ ಸಿನಿಮಾ ‘ದಯಂಗರಂ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಮುಂದಿನ ವರ್ಷದ ಸಂಕ್ರಾಂತಿ ಹಬ್ಬಕ್ಕೆ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸಿದೆ.
ವೆಲ್ಸ್ ಫಿಲ್ಮ್ ಇಂಟರ್ನ್ಯಾಷನಲ್ ಬ್ಯಾನರ್ನಲ್ಲಿ ಇಶಾರಿ ಕೆ. ಗಣೇಶ್ ಚಿತ್ರ ನಿರ್ಮಿಸಿದ್ದಾರೆ. 49 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.
ಸಿದ್ದು ಕುಮಾರ್ ಸಂಗೀತ, ದಿನೇಶ್ ಕೃಷ್ಣನ್ ಛಾಯಾಗ್ರಹಣ, ಪ್ರದೀಪ್ ಇ. ರಾಘವ್ ಸಂಕಲನ ಹಾಗೂ ವಿನೋತ್ ರಾಜ್ ಕುಮಾರ್ ಕಲಾ ನಿರ್ದೇಶನ ಚಿತ್ರಕ್ಕಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ಧನುಷ್ ಚಿತ್ರದ ಘೋಷಣಾ ವಿಡಿಯೋ ಬಿಡುಗಡೆ ಮಾಡಿದ್ದರು. ನಿರ್ಮಾಪಕ ಇಶಾರಿ ಕೆ. ಗಣೇಶ್ ಅವರಿಂದ ನಿರ್ದೇಶನದ ಅವಕಾಶ ಪಡೆಯುವ ಸುತ್ತ ಹಾಸ್ಯಮಯವಾಗಿ ಮೂಡಿಬಂದಿದ್ದ ವಿಡಿಯೋ ಗಮನ ಸೆಳೆದಿತ್ತು. ಚಿತ್ರದ ಕಥೆ ಮೆಚ್ಚಿದ ನಿರ್ಮಾಪಕರು ಸಿದ್ದುಗೆ ನಿರ್ದೇಶನದ ಅವಕಾಶ ನೀಡಿದ್ದರು.














































































