ಉಡುಪಿ: ಜಿಲ್ಲೆಯ ಅರಣ್ಯ ಮತ್ತು ಕಂದಾಯ ಇಲಾಖೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಅರಣ್ಯ ಸಚಿವರು, ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಪರಿಶೀಲನಾ ಸಭೆ ನಡೆಸಲಾಯಿತು ಎಂದು ಶಾಸಕ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ಜಿಲ್ಲೆಯ ವಿವಿಧ ಭಾಗಗಳಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಭೂ ಸಂಬಂಧಿತ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಬಗರ್‌ಹುಕುಂ ಸಾಗುವಳಿ ಭೂಮಿ, ಗೇರುಭೂಮಿ ಗುತ್ತಿಗೆ, 94ಸಿ ಅಡಿಯಲ್ಲಿ ಭೂಮಿ ಮಂಜೂರಾತಿ ಹಾಗೂ ಡೀಮ್ಡ್ ಫಾರೆಸ್ಟ್ ವರ್ಗೀಕರಣ ಪ್ರಮುಖ ವಿಷಯಗಳಾಗಿದ್ದವು.
ಈ ಸಮಸ್ಯೆಗಳ ಪರಿಶೀಲನೆ ಮತ್ತು ಪರಿಹಾರಕ್ಕಾಗಿ ಕಂದಾಯ ಇಲಾಖೆಯ ಉನ್ನತ ಮಟ್ಟದ ಸಮಿತಿಯು ಜಿಲ್ಲೆಯ ಪ್ರಮುಖ ಕರಾವಳಿ ಪ್ರದೇಶಗಳಿಗೆ ಭೇಟಿ ನೀಡಲಿದೆ. ಸ್ಥಳೀಯವಾಗಿ ಎದುರಾಗಿರುವ ಸಮಸ್ಯೆಗಳನ್ನು ಪರಿಶೀಲಿಸಿ, ಬಾಕಿ ವಿಚಾರಗಳಿಗೆ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಅರಣ್ಯ ಮತ್ತು ಕಂದಾಯ ಇಲಾಖೆಗಳ ನಡುವೆ ಪರಿಣಾಮಕಾರಿ ಸಮನ್ವಯ ಸಾಧಿಸುವ ಮೂಲಕ ಜನರ ಭೂ ಸಂಬಂಧಿತ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವುದು ಸಭೆಯ ಮುಖ್ಯ ಉದ್ದೇಶವಾಗಿದೆ.
ಸಭೆಯಲ್ಲಿ ಉಡುಪಿ ಜಿಲ್ಲೆಯ ಶಾಸಕರಾದ ಕಾರ್ಕಳದ ಸುನಿಲ್ ಕುಮಾರ್, ಗುರುರಾಜ್ ಗಂಟಿಹೊಳೆ, ಎ. ಕಿರಣ್ ಕುಮಾರ್ ಕೊಡ್ಗಿ, ಯಶ್‌ಪಾಲ್ ಎ. ಸುವರ್ಣ ಹಾಗೂ ಗುರ್ಮೆ ಸುರೇಶ್ ಶೆಟ್ಟಿ, ಕಂದಾಯ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ, ಅರಣ್ಯ ಪಡೆ ಮುಖ್ಯಸ್ಥ ರವಿ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.














































































