ಬೆಂಗಳೂರು: ಕಲ್ಯಾಣ ಕರ್ನಾಟಕದ ಪ್ರತಿಯೊಂದು ಪ್ರದೇಶಕ್ಕೂ ಸಮರ್ಪಕ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸಣ್ಣ ನೀರಾವರಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲಾಗಿದೆ ಎಂದು ಸಚಿವ ಡಾ. ಅಜಯ್ ಸಿಂಗ್ ತಿಳಿಸಿದ್ದಾರೆ.
ಬೆಂಗಳೂರಿನ ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ಕಲಬುರಗಿ ವಿಭಾಗದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಗತಿಯಲ್ಲಿರುವ ಯೋಜನೆಗಳ ತ್ವರಿತ ಅನುಷ್ಠಾನ, ಸ್ಥಗಿತಗೊಂಡಿರುವ ಕಾಮಗಾರಿಗಳ ಪುನಶ್ಚೇತನ ಹಾಗೂ ಹೊಸ ನೀರಾವರಿ ಯೋಜನೆಗಳ ರೂಪುರೇಷೆಗಳ ಕುರಿತು ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಲಾಯಿತು.

ನೀರಾವರಿ ಮೂಲಸೌಕರ್ಯ ಬಲಪಡಿಸುವುದು, ಜಲಸಂಪನ್ಮೂಲಗಳ ಸಮರ್ಪಕ ಬಳಕೆ ಮತ್ತು ಕೃಷಿ ಉತ್ಪಾದಕತೆ ಹೆಚ್ಚಿಸುವುದು ಸರ್ಕಾರದ ಆದ್ಯತೆಯಾಗಿದೆ. ಕಾಮಗಾರಿಗಳಲ್ಲಿ ಗುಣಮಟ್ಟ, ವೇಗ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಪ್ರತಿಯೊಂದು ಯೋಜನೆಯ ಪ್ರಯೋಜನ ನೇರವಾಗಿ ರೈತರ ಹೊಲಗಳಿಗೆ ತಲುಪುವಂತೆ ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.
ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಜಲಸಮೃದ್ಧಿ ಪ್ರಮುಖ ಅಡಿಪಾಯವಾಗಿದೆ. ರೈತರ ಬದುಕಿನಲ್ಲಿ ಸಮೃದ್ಧಿ ತರುವ ಸುಸ್ಥಿರ ನೀರಾವರಿ ವ್ಯವಸ್ಥೆ ನಿರ್ಮಿಸುವುದು ಸರ್ಕಾರದ ಸಂಕಲ್ಪ ಎಂದು ಸಚಿವರು ತಿಳಿಸಿದ್ದಾರೆ.














































































