ಬೆಂಗಳೂರು: ಆರೋಗ್ಯ ಮಾತೆಯ ಪುಣ್ಯಕ್ಷೇತ್ರವೆಂದೇ ಪ್ರಸಿದ್ಧವಾಗಿರುವ ಶಿವಾಜಿನಗರದ ಸಂತ ಮರಿಯ ಬಸಿಲಿಕ ಪುಣ್ಯಕ್ಷೇತ್ರದ ವಾರ್ಷಿಕ ನೋವೇನಾ ಹಾಗೂ ಹಬ್ಬದ ಆಚರಣೆಗಳು ಆಗಸ್ಟ್ 29ರಿಂದ ಸೆಪ್ಟೆಂಬರ್ 8ರವರೆಗೆ ನಡೆಯಲಿವೆ. ಸೆಪ್ಟೆಂಬರ್ 8ರಂದು ಮಾತೆ ಮರಿಯಮ್ಮನವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಗುವುದು.
ಬೆಂಗಳೂರಿನ ಐತಿಹಾಸಿಕ ಕ್ರೈಸ್ತ ಧಾರ್ಮಿಕ ಪುಣ್ಯಕ್ಷೇತ್ರವಾಗಿರುವ ಸಂತ ಮರಿಯ ಬಸಿಲಿಕಕ್ಕೆ ಕರ್ನಾಟಕ ಮಾತ್ರವಲ್ಲದೆ ದೇಶ-ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ವಿವಿಧ ಧರ್ಮ ಹಾಗೂ ಸಮುದಾಯಗಳ ಭಕ್ತರೂ ಇಲ್ಲಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ, ತಮ್ಮ ಹರಕೆಗಳನ್ನು ಅರ್ಪಿಸುತ್ತಾರೆ.

ಹಬ್ಬದ ಅಂಗವಾಗಿ ಆಗಸ್ಟ್ 29ರಂದು ನವದಿನಗಳ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಪ್ರತಿದಿನ ಸಂಜೆ 5.30ಕ್ಕೆ ಧ್ವಜಾರೋಹಣ ನೆರವೇರಲಿದ್ದು, ಬಳಿಕ ಆಶೀರ್ವಚನ ಹಾಗೂ ಬಲಿಪೂಜೆ ನಡೆಯಲಿದೆ. ನವದಿನಗಳ ಅವಧಿಯಲ್ಲಿ ಬೆಳಗ್ಗೆ 5.30ರಿಂದ ರಾತ್ರಿ 9ರವರೆಗೆ ವಿವಿಧ ಭಾಷೆಗಳಲ್ಲಿ ಬಲಿಪೂಜೆಗಳನ್ನು ಅರ್ಪಿಸಲಾಗುತ್ತದೆ.
ಸೆ.8ರಂದು ಅದ್ದೂರಿ ಆಚರಣೆ
ಹಬ್ಬದ ದಿನವಾದ ಸೆಪ್ಟೆಂಬರ್ 8ರಂದು ರಸೆಲ್ ಮಾರ್ಕೆಟ್ ಚೌಕದಲ್ಲಿ ಕನ್ನಡ, ತಮಿಳು ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ವಿಶೇಷ ಬಲಿಪೂಜೆ ನಡೆಯಲಿದೆ. ಸಂಜೆ 5.30ಕ್ಕೆ ಅಲಂಕೃತ ತೇರಿನಲ್ಲಿ ಮಾತೆ ಮರಿಯಮ್ಮನವರ ಮೆರವಣಿಗೆ ನಡೆಯಲಿದೆ.
ಹಬ್ಬಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಭಕ್ತರ ಅನುಕೂಲಕ್ಕಾಗಿ ವಿಶೇಷ ಬಿಎಂಟಿಸಿ ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು, ಸಮೀಪದ ಮೆಟ್ರೋ ನಿಲ್ದಾಣಗಳಿಗೂ ಸಂಪರ್ಕ ಕಲ್ಪಿಸಲಾಗುವುದು. ಇದರಿಂದ ಸಂಚಾರ ಸುಗಮವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ನವದಿನಗಳ ಕಾರ್ಯಕ್ರಮ ಹಾಗೂ ಹಬ್ಬದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಾತೆ ಮರಿಯಮ್ಮನವರ ಮಧ್ಯಸ್ಥಿಕೆಯ ಮೂಲಕ ದೇವರ ವಿಶೇಷ ಆಶೀರ್ವಾದಕ್ಕೆ ಪಾತ್ರರಾಗುವಂತೆ ಬೆಂಗಳೂರಿನ ಆರ್ಚ್ಬಿಷಪ್ ಡಾ. ಪೀಟರ್ ಮಚಾದೋ ಮನವಿ ಮಾಡಿದ್ದಾರೆ.







































































